ನವದೆಹಲಿ: ಚುನಾವಣಾ ಪ್ರಕ್ರಿಯೆಯಲ್ಲಿನ ಅಕ್ರಮಗಳ ವಿರುದ್ಧ ಬೃಹತ್ ಪ್ರತಿಭಟನೆಗೆ ಸಜ್ಜಾಗುತ್ತಿದ್ದ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆ (Abhijeet Dipke) ಅವರನ್ನು ದೆಹಲಿಯಲ್ಲಿ ವಶಕ್ಕೆ ಪಡೆದಿರುವ ಬೆನ್ನಲ್ಲೇ, ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ಅವರ ಅಜ್ಜಿ ನಿಧನರಾಗಿದ್ದಾರೆ.
ಚುನಾವಣಾ ವ್ಯವಸ್ಥೆ ಮತ್ತು ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಅಕ್ರಮಗಳ ವಿರುದ್ಧದ ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಪ್ರತಿಭಟನೆ ಆರಂಭವಾಗುತ್ತಿದ್ದ ಈ ಸಂದರ್ಭದಲ್ಲಿ, ಕುಟುಂಬದ ಈ ದುಃಖದ ಸಂಗತಿಯನ್ನು ದೆಹಲಿ ಪೊಲೀಸರು ಅಭಿಜಿತ್ ದೀಪ್ಕೆಗೆ ತಿಳಿಸಿದ್ದು, ಇದಷ್ಟೇ ಅಲ್ಲದೆ, ಅಜ್ಜಿಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಅವರಿಗೆ ವಿಮಾನದ ಮೂಲಕ ಸ್ವಗ್ರಾಮಕ್ಕೆ ತೆರಳಲು ಅನುಕೂಲ ಕಲ್ಪಿಸಿಕೊಡುವುದಾಗಿಯೂ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ದೆಹಲಿ ಪೊಲೀಸರು, ಅಭಿಜಿತ್ ದೀಪ್ಕೆ ಅವರ ಅಜ್ಜಿಯ ನಿಧನದ ದುಃಖದ ಸುದ್ದಿಯನ್ನು ಅವರಿಗೆ ತಕ್ಷಣವೇ ಸೂಕ್ತ ಸಂವೇದನೆಯಿಂದ ತಲುಪಿಸಲಾಗಿದೆ ಮತ್ತು ಅಂತ್ಯಸಂಸ್ಕಾರದ ನಿಗದಿತ ಸಮಯವನ್ನು ಅವರಿಗೆ ತಿಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮಾನವೀಯ ನೆಲೆಯಲ್ಲಿ ಅವರ ಸ್ವಗ್ರಾಮದ ಪ್ರಯಾಣಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಲಾಗಿದೆ. ಈಗ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆ ಅಥವಾ ಅಜ್ಜಿಯ ಅಂತ್ಯಸಂಸ್ಕಾರಕ್ಕಾಗಿ ಸ್ವಗ್ರಾಮಕ್ಕೆ ವಿಮಾನದಲ್ಲಿ ಮರಳಬೇಕೆ ಎಂಬುದನ್ನು ಸ್ವತಃ ಅವರೇ ನಿರ್ಧರಿಸಬೇಕಾಗಿದೆ ಎಂದು ಅಧಿಕಾರಿಗಳ ಮೂಲಗಳು ತಿಳಿಸಿವೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ದೀಪ್ಕೆ ಅವರ ಅಜ್ಜಿ, ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಸಾಂತುಕ್ ಪಿಂಪ್ರಿ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಅಷ್ಟರಲ್ಲಿ ಅವರ ಮೊಮ್ಮಗ ಅಭಿಜಿತ್ ದೀಪ್ಕೆ ಅವರು ಜಂತರ್ ಮಂತರ್‌ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಇತರ ಸಿಜೆಪಿ ನಾಯಕರೊಂದಿಗೆ ಮುಂಬೈನಿಂದ ದೆಹಲಿಗೆ ವಿಮಾನ ಹತ್ತಿದ್ದರು. ದೆಹಲಿಗೆ ಬಂದಿಳಿಯುತ್ತಿದ್ದಂತೆ, ಏರ್ ಇಂಡಿಯಾ ವಿಮಾನದೊಳಗೆ ಪ್ರವೇಶಿಸಿದ ಸ್ಥಳೀಯ ಪೊಲೀಸರು ಸಿಜೆಪಿ ನಾಯಕರಾದ ಅಭಿಜಿತ್ ದೀಪ್ಕೆ, ಅಶುತೋಷ್ ರಾಂಕಾ ಮತ್ತು ಸೌರವ್ ದಾಸ್ರನ್ನು ವಶಕ್ಕೆ ಪಡೆದಿದ್ದಾರೆ.
ವಿಮಾನದೊಳಗೆ ಈ ರೀತಿ ವಶಕ್ಕೆ ಪಡೆದಿರುವುದನ್ನು ದೀಪ್ಕೆ ಅವರ ಪೋಷಕರು ಪ್ರಶ್ನಿಸಿದ್ದು, ಪ್ರತಿಭಟನೆಗೆ ಕರೆ ನೀಡಿದ ಸಿಜೆಪಿ ನಿಲುವಿಗೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಛತ್ರಪತಿ ಸಂಭಾಜಿನಗರದಲ್ಲಿರುವ ಅವರ ತಾಯಿ ಅನಿತಾ ದೀಪ್ಕೆ ಈ ಪೊಲೀಸ್ ಕ್ರಮವನ್ನು ತಪ್ಪು ಎಂದರೆ, ತಂದೆ ಭಗವಾನ್ ರಾವ್ ದೀಪ್ಕೆ ತಮ್ಮ ಮಗನ ಬೆಂಬಲಕ್ಕೆ ನಿಂತಿದ್ದಾರೆ. ಸದ್ಯ ಅಭಿಜಿತ್ ದೀಪ್ಕೆ ಹಿಂಗೋಲಿಗೆ ತೆರಳಿ ತಮ್ಮ ಅಜ್ಜಿಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಮತ್ತು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಅಕ್ರಮಗಳ ವಿರುದ್ಧ ಜಂತರ್ ಮಂತರ್ ಮೈದಾನವನ್ನು ತಲುಪದಂತೆ ತಡೆಯಲು ಪೊಲೀಸರು ಹಗಲಿರುಳು ಶ್ರಮಿಸುತ್ತಿದ್ದು, ನಿನ್ನೆ ರಾತ್ರಿಯಿಂದ ದೆಹಲಿಯಲ್ಲಿ ಸುಮಾರು 3000 ಜನರನ್ನು ವಶಕ್ಕೆ ಪಡೆಯಲಾಗಿದೆ. ಈ ಮಧ್ಯೆ ಸಿಜೆಪಿ ನಾಯಕರು ಬಿಡುಗಡೆಯಾಗುವವರೆಗೆ ಪ್ರತಿಭಟನೆಯ ನೇತೃತ್ವ ವಹಿಸುವ ಜವಾಬ್ದಾರಿಯನ್ನು ಮತ್ತೊಬ್ಬ ನಾಯಕ ಅಜಿಂಕ್ಯ ಶಿಂಧೆ ವಹಿಸಿಕೊಂಡಿದ್ದಾರೆ(ಏಜೆನ್ಸೀಸ್).