Dhenkanal Incident | ಒಡಿಶಾದಲ್ಲಿ ನಡೆದ ಈ ಪವಾಡ ಕೇಳಿದರೆ ಶಾಕ್ ಆಗ್ತೀರಾ! 
ದೇಶ

ಸತ್ತುಹೋದ ಅಂದುಕೊಂಡಿದ್ದ ಮಗ ಮನೆಗೆ ಮರಳಿದಾಗ ಬೆಚ್ಚಿಬಿದ್ದ ಕುಟುಂಬ!: ಒಡಿಶಾದಲ್ಲಿ ನಡೆದ ಈ ಪವಾಡ ಕೇಳಿದ್ರೆ ಶಾಕ್ ಆಗ್ತೀರಾ! | Dhenkanal Incident

Dhenkanal Incident: ಅತ್ತ ಅಂತ್ಯಸಂಸ್ಕಾರವೂ ಮುಗಿದಿತ್ತು, ಶ್ರಾದ್ಧ ನೆರವೇರಿಸಿ ಇಡೀ ಕುಟುಂಬ ಸೂತಕದಲ್ಲಿ ಮುಳುಗಿತ್ತು. ಆದರೆ, ಸತ್ತುಹೋಗಿದ್ದಾನೆ ಅಂದುಕೊಂಡಿದ್ದ 29 ವರ್ಷದ ಮಗ 1 ತಿಂಗಳ ನಂತರ ಇದ್ದಕ್ಕಿದ್ದಂತೆ ಮನೆ ಬಾಗಿಲಿಗೆ ಜೀವಂತವಾಗಿ ಮರಳಿದಾಗ ಒಡಿಶಾದ ಧೆಂಕನಾಲ್ ಜಿಲ್ಲೆಯಲ್ಲಿ ನಂಬಲು ಸಾಧ್ಯವಾಗದ ಪವಾಡವೇ ನಡೆದಂತಾಗಿದೆ. ಯುವಕ ಜೀವಂತವಾಗಿ ಬಂದಿದ್ದನ್ನು ಕಂಡು ಕುಟುಂಬಸ್ಥರು ಹಾಗೂ ಇಡೀ ಗ್ರಾಮವೇ ದಿಗ್ಭ್ರಮೆಗೊಂಡಿದೆ.
ಸನಾತನ ನಾಯಕ್ ಎಂಬ ಯುವಕನ ಕುಟುಂಬವು ಭತ್ತದ ಗದ್ದೆಯಲ್ಲಿ ಪತ್ತೆಯಾಗಿದ್ದ ತೀವ್ರವಾಗಿ ಕೊಳೆತುಹೋಗಿದ್ದ ಮೃತದೇಹದ ಮೇಲಿದ್ದ ಉಡುಪುಗಳನ್ನು ನೋಡಿ, ಅದು ತಮ್ಮ ಮಗನದ್ದೇ ಮೃತದೇಹ ಎಂದು ನಂಬಿ ಗುರುತಿಸಿತ್ತು. ಅವರು ಮೃತದೇಹದ ದಹನ ಸಂಸ್ಕಾರವನ್ನು ನೆರವೇರಿಸಿ, ತಮ್ಮ ಮಗನ ಆತ್ಮಕ್ಕೆ ಶಾಂತಿ ಸಿಗಲೆಂದು ಶಾಸ್ತ್ರೋಕ್ತವಾಗಿ ನಡೆಸಬೇಕಾದ ಶುದ್ಧಿಕ್ರಿಯೆ ಕಾರ್ಯಗಳನ್ನೂ ಪೂರ್ಣಗೊಳಿಸಿದ್ದರು. ಆದರೆ, ನಾಯಕ್ ಜೀವಂತವಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದಾಗ ಅವರ ದುಖಃ ಆಶ್ಚರ್ಯ ಹಾಗೂ ದಿಗ್ಭ್ರಮೆಯ ಸ್ಥಿತಿಗೆ ತಿರುಗಿತು.
ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಸನಾತನ ನಾಯಕ್, ಜುಲೈ 27 ರಂದು ಸೈಕಲ್‌ನಲ್ಲಿ ಮನೆಯಿಂದ ಹೊರಟು ನಾಪತ್ತೆಯಾಗಿದ್ದ. ಕುಟುಂಬಸ್ಥರು ಎಷ್ಟೇ ಹುಡುಕಾಟ ನಡೆಸಿದರೂ ಆತನ ಸುಳಿವು ಸಿಕ್ಕಿರಲಿಲ್ಲ. ಸುಮಾರು 10 ದಿನಗಳ ನಂತರ, ಅವರ ಮನೆಯ ಬಳಿಯ ಭತ್ತದ ಗದ್ದೆಯೊಂದರಲ್ಲಿ ಗುರುತು ಪತ್ತೆಯಾಗದ ಮೃತದೇಹವೊಂದು ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದರು. ಆ ಮೃತದೇಹವು ತೀವ್ರವಾಗಿ ಕೊಳೆತುಹೋಗಿತ್ತು ಮತ್ತು ಕೆಲವು ದಿನಗಳಿಂದ ನೀರಿನಲ್ಲೇ ಬಿದ್ದಿತ್ತು.

ಬಟ್ಟೆ ನೋಡಿ ಯಾಮಾರಿದ ಕುಟುಂಬಸ್ಥರು!

ಮೃತದೇಹ ಸಿಕ್ಕಿರುವ ಬಗ್ಗೆ ಪೊಲೀಸರು ನಾಯಕ್ ಕುಟುಂಬಕ್ಕೆ ಮಾಹಿತಿ ನೀಡಿದ್ದರು. ಆದರೆ, ಅವರು ಸ್ಥಳಕ್ಕೆ ತಲುಪುವಷ್ಟರಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ನಂತರ, ಮೃತದೇಹದ ಮೇಲಿದ್ದ ಬಟ್ಟೆಗಳನ್ನು ನೋಡಿ ಕುಟುಂಬಸ್ಥರು ಅದು ನಾಯಕ್‌ನದ್ದೇ ಮೃತದೇಹ ಎಂದು ನಂಬಿ ಗುರುತಿಸಿದರು. ಮೃತದೇಹವನ್ನು ಹಸ್ತಾಂತರಿಸಿದ ನಂತರ, ಅವರು ಅಂತ್ಯಸಂಸ್ಕಾರ ಮತ್ತು ಆಚಾರ-ವಿಚಾರಗಳನ್ನು ನೆರವೇರಿಸಿದ್ದರು.
ಆ ಬಳಿಕ ಇಡೀ ಕುಟುಂಬವೇ ಆಘಾತಕ್ಕೊಳಗಾಗುವಂತಹ ಟ್ವಿಸ್ಟ್ ಎದುರಾಯಿತು. ನಾಯಕ್ ಜೀವಂತವಾಗಿದ್ದ. ಪೊಲೀಸರಿಂದ ಮಾಹಿತಿ ಬಂದ ತಕ್ಷಣವೇ, ಆತನ ಸಂಬಂಧಿಕರು ಆತ ಪತ್ತೆಯಾದ ಸ್ಥಳಕ್ಕೆ ಧಾವಿಸಿ, ಆತನನ್ನು ಮನೆಗೆ ಕರೆತಂದು ಕುಟುಂಬದೊಂದಿಗೆ ಸೇರಿಸಿದರು. ಆ ಯುವಕನ ಮರಳುವಿಕೆಯು ಸಂಬಂಧಿಕರಿಗೆ, ಮುಖ್ಯವಾಗಿ ಈಗಾಗಲೇ ವಿಧವೆಯಂತೆ ದುಃಖಾಚರಣೆ ಮತ್ತು ನಿಯಮಗಳನ್ನು ಪಾಲಿಸಲು ಪ್ರಾರಂಭಿಸಿದ್ದ ಆತನ ಹೆಂಡತಿಗೆ ದೊಡ್ಡ ನೆಮ್ಮದಿ ತಂದಿದೆ.
ಘಟನೆಯ ಕುರಿತು ಮಾತನಾಡಿದ ಯುವಕನ ತಾಯಿ ಮಂಜು ನಾಯಕ್, ತಮ್ಮ ಮಗ ಜುಲೈ 27 ರಂದು ಮನೆಯಿಂದ ಹೊರಟು ಹೋಗಿದ್ದಾಗಿ ತಿಳಿಸಿದರು. ಆರಂಭದಲ್ಲಿ ಆತ ಸಂಬಂಧಿಕರ ಮನೆಗೆ ಹೋಗಿರಬಹುದು ಮತ್ತು ಶೀಘ್ರದಲ್ಲೇ ಹಿಂತಿರುಗುತ್ತಾನೆ ಎಂದು ಕುಟುಂಬ ಭಾವಿಸಿತ್ತು. ಹಲವು ದಿನಗಳಾದರೂ ಆತ ಬಾರದಿದ್ದಾಗ ಹುಡುಕಾಟ ಆರಂಭಿಸಿದ್ದರು. ಕೃಷಿ ಭೂಮಿಯಲ್ಲಿ ಯುವಕನೊಬ್ಬನ ಕೊಳೆತ ಮೃತದೇಹ ತೇಲುತ್ತಿರುವುದು ಪತ್ತೆಯಾಗಿದೆ ಎಂಬ ವಿಷಯ ನಂತರ ತಮಗೆ ತಿಳಿಯಿತು ಎಂದು ಮಂಜು ಹೇಳಿದರು.
ಆತ ಎಂದಿಗೂ ಆ ಜಾಗಕ್ಕೆ ಹೋಗುತ್ತಿರಲಿಲ್ಲ, ಹಾಗಿರುವಾಗ ಅಲ್ಲಿಗೆ ಹೇಗೆ ಹೋದ ಎಂದು ನಾವು ಆಶ್ಚರ್ಯಪಟ್ಟಿದ್ದೆವು. ಆದರೆ ಬಟ್ಟೆಗಳ ಆಧಾರದ ಮೇಲೆ ಅದು ನಮ್ಮ ಮಗನ ಮೃತದೇಹವೆಂದು ಗುರುತಿಸಿ, ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ಪೂರ್ಣಗೊಳಿಸಿದೆವು. ಸುಮಾರು ಒಂದು ತಿಂಗಳ ನಂತರ, ನಮ್ಮ ಮಗ ಜೀವಂತವಾಗಿದ್ದಾನೆ ಎಂದು ಪೊಲೀಸರು ನಮಗೆ ಮಾಹಿತಿ ನೀಡಿದರು ಎಂದು ತಿಳಿಸಿದರು.
ಈ ಘಟನೆಯು ಇದೀಗ ಕುಟುಂಬ ಮತ್ತು ಅಧಿಕಾರಿಗಳ ಮುಂದೆ ಒಂದು ದೊಡ್ಡ ಉತ್ತರವಿಲ್ಲದ ಪ್ರಶ್ನೆಯನ್ನು ತಂದುಒಡ್ಡಿದೆ. ಹಾಗಾದರೆ ಅವರು ದಹನ ಸಂಸ್ಕಾರ ನಡೆಸಿದ್ದು ಯಾರ ಮೃತದೇಹಕ್ಕೆ..? ಭತ್ತದ ಗದ್ದೆಯಲ್ಲಿ ಪತ್ತೆಯಾಗಿ, ನಾಯಕ್ ಕುಟುಂಬದಿಂದ ದಹನ ಸಂಸ್ಕಾರಕ್ಕೊಳಗಾದ ಆ ಮೃತದೇಹ ಯಾರದ್ದು ಮತ್ತು ಆ ಮೃತನ ಗುರುತೇನು ಎಂಬ ಬಗ್ಗೆ ಸ್ಥಳೀಯ ಪೊಲೀಸರಿಂದ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಲಭ್ಯವಾಗಿಲ್ಲ(ಏಜೆನ್ಸೀಸ್​).