Odisha Bandh | ಒಡಿಶಾ ಬಂದ್‌ಗೆ ಕರೆ ನೀಡಿರುವ ನವನಿರ್ಮಾಣ ಕೃಷಿ ಸಂಘಟನೆ (ಸಂಗ್ರಹ ಚಿತ್ರ-PTI)
ಭುವನೇಶ್ವರ: ಭತ್ತ ಖರೀದಿಯಲ್ಲಿನ ದುರುಪಯೋಗವನ್ನು ಖಂಡಿಸಿ ನವನಿರ್ಮಾಣ ಕೃಷಿ ಸಂಘಟನೆ (ಎನ್‌ಕೆಎಸ್) ಇಂದು ಒಡಿಶಾ ಬಂದ್‌ಗೆ ಕರೆ ನೀಡಿದ್ದು, ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಪ್ರತಿಭಟನೆ ನಡೆಯಲಿದೆ. ಆಸ್ಪತ್ರೆಗಳು, ಆಂಬ್ಯುಲೆನ್ಸ್‌ಗಳು ಮತ್ತು ಔಷಧಾಲಯಗಳಂತಹ ಅಗತ್ಯ ಸೇವೆಗಳನ್ನು ಬಂದ್‌ನ ವ್ಯಾಪ್ತಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಸಂಘಟನೆಯ ಸಂಚಾಲಕ ಅಕ್ಷಯ್ ಕುಮಾರ್ ತಿಳಿಸಿದ್ದಾರೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ), 2005 ಯೋಜನೆಯನ್ನು, ವಿಬಿ-ಜಿ ರಾಮ್ ಜಿ ಎಂದು ಮರುನಾಮಕರಣ ಮಾಡಿದ್ದನ್ನು ಸಹ ಈ ಸಂಘಟನೆ ವಿರೋಧಿಸಿದೆ.
ರಾಜ್ಯ ಸ್ವಾಮ್ಯದ ಮಂಡಿಗಳಲ್ಲಿ ಎಲ್ಲಾ ರೈತರಿಗೆ ಕ್ವಿಂಟಲ್‌ಗೆ 800 ರೂ. ಇನ್‌ಪುಟ್ ಸಹಾಯವನ್ನು ವಿತರಿಸಲು ಮತ್ತು ಭತ್ತ ಖರೀದಿ ವ್ಯವಸ್ಥೆಯಿಂದ ಮಧ್ಯವರ್ತಿಗಳು ಮತ್ತು ಗಿರಣಿದಾರರನ್ನು ತೆಗೆದುಹಾಕಲು ಒತ್ತಾಯಿಸಿ ಎನ್‌ಕೆಎಸ್ ಬಂದ್‌ಗೆ ಕರೆ ನೀಡಿದ್ದು, ಗ್ರಾಹಕರ ಮೇಲೆ ವಿದ್ಯುತ್ ಸ್ಮಾರ್ಟ್ ಮೀಟರ್‌ಗಳನ್ನು ವಿಧಿಸುವುದನ್ನು ಮತ್ತು ಮಾಲಿನ್ಯ ಪ್ರಮಾಣಪತ್ರ ಜಾರಿ ಅಡಿಯಲ್ಲಿ ವಾಹನ ಮಾಲೀಕರಿಗೆ ಭಾರೀ ದಂಡ ವಿಧಿಸುವುದನ್ನು ಸಹ ಇದರಲ್ಲಿ ಸೇರಿದೆ.
ಶಿಕ್ಷಣ ಸಂಸ್ಥೆಗಳು, ಸಾರಿಗೆ ಸೇವೆ, ಕಚೇರಿಗಳು ಮಧ್ಯಾಹ್ನ 2 ಗಂಟೆಯವರೆಗೆ ಮುಚ್ಚಿರುತ್ತವೆ. ರೈತರ ಪರವಾಗಿ ಜನರು ಬೆಂಬಲ ನೀಡಿ ಬಂದ್ ಯಶಸ್ವಿಗೊಳಿಸಬೇಕೆಂದು ಸಂಚಾಲಕ ಅಕ್ಷಯ್ ಕುಮಾರ್ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಘಟಕ ಬೆಂಬಲ
ರೈತ ಸಂಘಟನೆ ಬುಧವಾರ ಕರೆ ನೀಡಿರುವ ಒಡಿಶಾ ಬಂದ್‌ಗೆ ರಾಜ್ಯ ಕಾಂಗ್ರೆಸ್, ಸಿಪಿಐ (ಎಂ) ರಾಜ್ಯ ಘಟಕವು ತನ್ನ ಬೆಂಬಲವನ್ನು ಘೋಷಿಸಿದೆ. ರೈತರ ಸಮಸ್ಯೆಯನ್ನು ಕೈಗೆತ್ತಿಕೊಂಡು ಬೀದಿಗಿಳಿದಿದ್ದಕ್ಕಾಗಿ ಬಿಜೆಡಿ ಎನ್‌ಎನ್‌ಕೆಎಸ್‌ಗೆ ಧನ್ಯವಾದ ಅರ್ಪಿಸಿದೆ.
ಪರಿಣಾಮ ಬೀರುವುದಿಲ್ಲ ಎಂದ ಬಿಜೆಪಿ
ಬಿಜೆಪಿಯ ಒಡಿಶಾ ಘಟಕವು ಈ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದ್ದು, ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಮನೋಜ್ ಮೊಹಾಪಾತ್ರ, ನವನಿರ್ಮಾಣ ಕೃಷಿ ಸಂಘಟನೆ ಕರೆ ನೀಡಿರುವ ಬಂದ್ ಒಡಿಶಾದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.
ಒಡಿಶಾದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಂಘಟನೆ ಈ ನಕಲಿ ಆಂದೋಲನವನ್ನು ನಡೆಸುತ್ತಿದ್ದು, ದುರ್ಬಲವಾಗಿರುವ ವಿಪಕ್ಷ ಕಾಂಗ್ರೆಸ್ ಇದನ್ನು ಬೆಂಬಲಿಸುವ ಮೂಲಕ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ(ಏಜೆನ್ಸೀಸ್).