ಭುವನೇಶ್ವರ: ಒಡಿಶಾ(Odisha) ವಿಧಾನಸಭೆಯು ಮಂಗಳವಾರ(ಡಿ. 09) ಶಾಸಕರ ಮಾಸಿಕ ವೇತನ ಮೂರು ಪಟ್ಟು ಹೆಚ್ಚಳಕ್ಕೆ ಅನುಮೋದನೆ ನೀಡಿದ್ದು, 1.11 ಲಕ್ಷ ರೂಪಾಯಿ ವೇತನದಿಂದ 3.45 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಇದು ದೇಶದ ಇತರೆ ರಾಜ್ಯಗಳ ಶಾಸಕರಿಗಿಂತ ಮೂರು ಪಟ್ಟು ಹೆಚ್ಚು ಎನ್ನಲಾಗಿದೆ.
ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಮಸೂದೆಗಳನ್ನು ವಿಧಾನಸಭೆಯೂ ಸರ್ವಾನುಮತದಿಂದ ಅಂಗೀಕರಿಸಿದೆ. ಒಡಿಶಾ ವಿಧಾನಸಭಾ ಸದಸ್ಯರ ವೇತನ, ಭತ್ಯೆ ಮತ್ತು ಪಿಂಚಣಿ (ತಿದ್ದುಪಡಿ) ಮಸೂದೆ -2025, ಸ್ಪೀಕರ್ ವೇತನ ಮತ್ತು ಭತ್ಯೆ (ತಿದ್ದುಪಡಿ) ಮಸೂದೆ- 2025, ಉಪ ಸ್ಪೀಕರ್ ವೇತನ ಮತ್ತು ಭತ್ಯೆ (ತಿದ್ದುಪಡಿ) ಮಸೂದೆ -2025 ಹಾಗೂ ಸಚಿವರ ವೇತನ ಮತ್ತು ಭತ್ಯೆ (ತಿದ್ದುಪಡಿ) ಮಸೂದೆ-2025. ನಾಲ್ಕು ಮಸೂದೆಗಳನ್ನು ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಬೆಂಬಲಿಸಿದ್ದಾರೆ.
ಪ್ರಸ್ತುತ ಒಡಿಶಾ ವಿಧಾನಸಭೆಯ ಒಬ್ಬ ಸಾಮಾನ್ಯ ಶಾಸಕರು ಸಂಬಳ, ಭತ್ಯೆಗಳು ಮತ್ತು ಇತರ ಆರ್ಥಿಕ ಸವಲತ್ತುಗಳನ್ನು ಸೇರಿಸಿ ಸುಮಾರು 1.11 ಲಕ್ಷ ರೂ.ಗಳ ಪ್ಯಾಕೇಜ್ ಪಡೆಯುತ್ತಾರೆ. ಈಗ ಆ ಪ್ಯಾಕೇಜ್ 3. 45 ಲಕ್ಷ ರೂಪಾಯಿಗೆ ಏರಿಸಲಾಗಿದೆ.
ಈ ಕುರಿತು ಸದನದಲ್ಲಿ ಮಾತನಾಡಿರುವ ಸಂಸದೀಯ ವ್ಯವಹಾರಗಳ ಸಚಿವ ಮುಖೇಶ್ ಮಹಾಲಿಂಗ್, 17ನೇ ವಿಧಾನಸಭೆ ರಚನೆಯಾದ 2024 ಜೂನ್ ತಿಂಗಳಿನಿಂದ ಈ ಪರಿಷ್ಕೃತ ವೇತನ ಜಾರಿಗೆ ಬರಲಿದೆ. ಈ ಮಸೂದೆಗಳು ಯಾವುದೇ ಹಾಲಿ ಶಾಸಕರ ಮರಣದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ 25 ಲಕ್ಷ ರೂಪಾಯಿಗಳ ಸಹಾಯವನ್ನು ಒಳಗೊಂಡಿವೆ. ಜೊತೆಗೆ ಪ್ರತಿ ಐದು ವರ್ಷಗಳಿಗೊಮ್ಮೆ ವೇತನ, ಭತ್ಯೆಗಳು ಮತ್ತು ಪಿಂಚಣಿಯನ್ನು ಹೆಚ್ಚಿಸುವ ನಿಬಂಧನೆಗಳು ಸೇರಿವೆ. ಅಂಗೀಕರಿಸಲಾದ ಮಸೂದೆಗಳಲ್ಲಿ ಒಂದು ಹೊಸ ಮಸೂದೆಯ ಅಗತ್ಯವಿಲ್ಲದೆ ಸುಗ್ರೀವಾಜ್ಞೆಯ ಮೂಲಕ ಅಂತಹ ಹೆಚ್ಚಳವನ್ನು ಅನುಮತಿಸುತ್ತದೆ ಎಂದು ಹೇಳಿದ್ದಾರೆ.
ಅಂಗೀಕರಿಸಲಾದ ಮಸೂದೆಗಳ ಪ್ರಕಾರ, ಸಿಎಂ ಮಾಸಿಕ 3,74,000 ರೂ., ಡಿಸಿಎಂ ಮತ್ತು ಸ್ಪೀಕರ್ ತಲಾ 3,68,000 ರೂ., ಉಪಸಭಾಪತಿ ಮತ್ತು ರಾಜ್ಯ ಸಚಿವರು 3,56,000 ರೂ., ಸಂಪುಟ ಸಚಿವರು ಮತ್ತು ವಿರೋಧ ಪಕ್ಷದ ನಾಯಕರು ತಲಾ 3,62,000 ರೂ. ವೇತನ ಪಡೆಯಲಿದ್ದಾರೆ.ಸರ್ಕಾರಿ ಮುಖ್ಯ ಸಚೇತಕರು ಮತ್ತು ಅವರ ಉಪ ಸಚೇತಕರು ಕ್ರಮವಾಗಿ ತಿಂಗಳಿಗೆ 3,62,000 ಮತ್ತು 3,50,000 ರೂ.ಗಳನ್ನು ಪಡೆಯುತ್ತಾರೆ.
ಶಾಸಕರ ವೇತನ 90,000 ಸಾವಿರ, ಕ್ಷೇತ್ರ ಭತ್ಯೆ 75,000, ಕಾರ್ಯದರ್ಶಿ ಭತ್ಯೆ 75,000, ಸಾರಿಗೆ ಭತ್ಯೆ 50,000, ಪುಸ್ತಕ, ಪೇಪರ್, ನಿಯತಕಾಲಿಕೆಗಳಿಗೆ 10,000, ವಿದ್ಯುತ್ ಬಿಲ್ 20,000, ಸ್ಥಿರ ಪ್ರಯಾಣ ಭತ್ಯೆಯಾಗಿ 50,000 ರೂ.ಗಳು, ವೈದ್ಯಕೀಯ ಭತ್ಯೆಯಾಗಿ 35,000 ರೂ.ಗಳು ಮತ್ತು ದೂರವಾಣಿ ಭತ್ಯೆಯಾಗಿ 15,000 ರೂ.ಗಳನ್ನು ಪಡೆಯುತ್ತಾರೆ ಎಂದು ಮಸೂದೆಯ ನಿಬಂಧನೆ ತಿಳಿಸಿದೆ.
ಅದೇ ರೀತಿ ಮಾಜಿ ಶಾಸಕರಿಗೆ 1.17 ಲಕ್ಷ ರೂಪಾಯಿ ಪಿಂಚಣಿ ದೊರೆಯಲಿದ್ದು, ಇದರಲ್ಲಿ 80,000 ರೂಪಾಯಿ ಪಿಂಚಣಿ, 25,000 ರೂಪಾಯಿ ವೈದ್ಯಕೀಯ ಭತ್ಯೆ, 12,500 ರೂಪಾಯಿ ಪ್ರಯಾಣ ಭತ್ಯೆ ಸೇರಿವೆ. ಪ್ರತಿ ಅವಧಿಗೆ ಶಾಸಕರಿಗೆ ಹೆಚ್ಚುವರಿಯಾಗಿ 3,000 ರೂಪಾಯಿ ಸಿಗಲಿದೆ ಎನ್ನಲಾಗಿದೆ (ಏಜನ್ಸೀಸ್).