ರಾಂಚಿ: ದಿನಂಪ್ರತಿ ಇನ್ಸ್ಟಾಗ್ರಾಂನಲ್ಲಿ ಗಂಟೆಗಟ್ಟಲೇ ರೀಲ್ಸ್ ನೋಡುವುದನ್ನು ರೂಢಿ ಮಾಡಿಕೊಂಡಿದ್ದ ಮಹಿಳೆಯೊಬ್ಬರ ಕೆಲವು ತಾಸು ಇಂಟರ್ನೆಟ್(internet access) ಬರದೇ ನೋಡಲಾಗದ್ದಕ್ಕೆ ತೀವ್ರ ಹತಾಶೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಕೊರ್ಬಾ ಜಿಲ್ಲೆಯ ಕೆರಕಾಚಾರ್ ಗ್ರಾಮದ ಮಂಗ್ಲೋ ಬಾಯಿ ಸಾರಥಿ ಎಂಬ ಮಹಿಳೆ ರೀಲ್ಸ್ ನೋಡುವ ವ್ಯಸನಿಯಾಗಿದ್ದರು. ಪ್ರತಿದಿನ ಗಂಟೆಗಟ್ಟಲೆ ರೀಲ್ಸ್ ನೋಡುತ್ತಿದ್ದರು ಎನ್ನಲಾಗಿದೆ. ಶನಿವಾರ ರೀಲ್ಸ್ ನೋಡುವಾಗ ಇಂಟರ್ನೆಟ್ ಸಮಸ್ಯೆ ಉದ್ಭವಿಸಿದೆ. ರೀಲ್ಸ್ ದೀರ್ಘಕಾಲದವರೆಗೆ ನೋಡಲಾಗಿಲ್ಲ.
ಇದರಿಂದ ಹತಾಷೆಗೊಂಡ ಮಹಿಳೆ ಮಂಗ್ಲೋ ಬಾಯಿ ಸಾರಧಿ ತನ್ನ ಮೊಬೈಲ್ ಅನ್ನು ನೆಲಕ್ಕೆ ಎಸೆದು ಹೊಡೆದಾಕಿದ್ದಾಳೆ. ಬಳಿಕ ಕೀಟನಾಶಕ ವಿಷವನ್ನು ಸೇವಿಸಿದ್ದಾಳೆ. ಇದನ್ನೂ ನೋಡಿದ ಆಕೆಯ ಪುತ್ರಿ ಘಟನೆ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾಳೆ ಎನ್ನಲಾಗಿದೆ.
ತಕ್ಷಣ ಕುಟುಂಬಸ್ಥರು ಮಹಿಳೆಯನ್ನು ಕರ್ತಲಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿ ಪ್ರಥಮ ಚಿಕಿತ್ಸೆಯ ಬಳಿಕ ಕೊರ್ಬಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೋಮವಾರ(ಸೆ. 07) ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದುಮ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ (ಏಜೆನ್ಸೀಸ್).