ನವದೆಹಲಿ: ದೆಹಲಿಯ ಜವಾಹರ್ ಲಾಲ್ ವಿಶ್ವವಿದ್ಯಾಲಯದಲ್ಲಿ ಸೋಮವಾರ ರಾತ್ರಿ ನಡೆದ ಪ್ರತಿಭಟನೆಯಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಗುರಿಯಾಗಿಸಿ ನಿಮ್ಮ ಸಮಾಧಿಯನ್ನು ನಾವು ತೋಡುತ್ತೇವ ಎಂಬ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
2020 ದೆಹಲಿ ಗಲಭೆಗೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಉಮರ್ ಖಾಲೀದ್, ಶಾರ್ಜಿಲ್ ಇಮಾಮ್ಗೆ ಸುಪ್ರೀಂಕೋರ್ಟ್ ಜಾಮೀನು ನಿರಾಕರಿಸಿದ ಹಿನ್ನೆಲೆ ಸೋಮವಾರ ರಾತ್ರಿ ದೆಹಲಿಯ ಜೆಎನ್ಯು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಗುಂಪೊಂದು ಪ್ರತಿಭಟನೆ ನಡೆಸಿದೆ. ಅದರಲ್ಲಿ ಮೋದಿ, ಶಾ ಗುರಿಯಾಗಿಸಿ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಲಾಗಿದೆ ಎನ್ನಲಾಗಿದೆ.
ಜೆಎನ್ಯುದಿಂದ ಕ್ರಮ
ಪ್ರಧಾನಿ ಮೋದಿ, ಶಾ ವಿರುದ್ಧದ ಘೋಷಣೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಎನ್ಯು ಆಡಳಿತ ಮಂಡಳಿ, ಯಾವುದೇ ಕಾನೂನುಬಾಹಿರ ನಡವಳಿಕೆ ಅಥವಾ ರಾಷ್ಟ್ರವಿರೋಧಿ ಚಟುವಟಿಕೆಯನ್ನು ಸಹಿಸುವುದಿಲ್ಲ. ಸೋಮವಾರದ ಘಟನೆ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿದೆ. ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿದ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ವಿಶ್ವವಿದ್ಯಾನಿಲಯಗಳು ನಾವೀನ್ಯತೆ ಮತ್ತು ಹೊಸ ಆಲೋಚನೆಗಳ ಕೇಂದ್ರಗಳಾಗಿವೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮೂಲಭೂತ ಹಕ್ಕು. ಆದರೆ ವಿಶ್ವವಿದ್ಯಾಲಯಗಳನ್ನು ದ್ವೇಷದ ಪ್ರಯೋಗಾಲಗಳಾಗಿ ಪರಿವರ್ತಿಸಲು ಅನುಮತಿ ನೀಡಲ್ಲ. ಘಟನೆಯಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳು ತಕ್ಷಣದ ಅಮಾನತು, ಉಚ್ಚಾಟನೆ ಹಾಗೂ ವಿವಿಯಿಂದ ಶಾಶ್ವತವಾಗಿ ನಿಷೇಧಿಸುವುದು ಸೇರಿದಂತೆ ಶಿಸ್ತು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದೆ.
ಆಕ್ಷೇಪಾರ್ಹ ಹೇಳಿಕೆಗಳ ಸಂಬಂಧ ಜೆಎನ್ಯು ಆಡಳಿತ ಮಂಡಳಿಯ ವಸಂತ್ ಕುಂಜ್ (ಉತ್ತರ)ದ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರತಿಭಟನೆಯ ಸಿಸಿಟಿವಿ ದೃಶ್ಯಾವಳಿಗಳು ಮತ್ತು ವೀಡಿಯೊಗಳನ್ನು ಪರಿಶಿಲೀಸುತ್ತಿದ್ದಾರೆ (ಏಜೆನ್ಸೀಸ್).