ಸಾವಿಗೆ ಶರಣಾದ ವಿದ್ಯಾರ್ಥಿ ಅಹ್ಮದ್ ನಜಾದ್
- ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿ ಅಹ್ಮದ್ ನಜಾದ್
- ಕಡಿಮೆ ಅಂಕ ಗಳಿಸಿದ ಕಾರಣಕ್ಕೆ ಶಿಕ್ಷಕರಿಂದ ಪದೇ ಪದೇ ಚುಚ್ಚು ಮಾತುಗಳು ಆರೋಪ
- ಶಿಕ್ಷಕರ ಮಾತುಗಳಿಂದ ಮನನೊಂದು ನೇಣಿಗೆ ಶರಣು ಎಂದು ಪಾಲಕರು ಆರೋಪ
ಕೊಲ್ಲಂ: ನರ್ಸಿಂಗ್ ವಿದ್ಯಾರ್ಥಿಯೊಬ್ಬ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೇರಳದ ಕೊಲ್ಲಂನ ಓಚಿರಾದಲ್ಲಿ ವರದಿಯಾಗಿದೆ.
ಮೃತ ವಿದ್ಯಾರ್ಥಿಯನ್ನು ಅಹ್ಮದ್ ನಜಾದ್ ಎಂದು ಗುರುತಿಸಲಾಗಿದ್ದು, ಈತ ಕರುನಾಗಪಲ್ಲಿಯ ಅಲುಮ್‌ಕಡವು ನಿವಾಸಿ ಎನ್ನಲಾಗಿದೆ. ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಯಾಗಿದ್ದ ನಜಾದ್, ಶುಕ್ರವಾರ (ಆ.14) ಮುಂಜಾನೆ ಮನೆಯ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಆತನ ಸಾವಿಗೆ ಕಾಲೇಜಿನಲ್ಲಿ ಶಿಕ್ಷಕರು ಕೊಡುತ್ತಿದ್ದ ಮಾನಸಿಕ ಕಿರುಕುಳವೇ ಕಾರಣ ಎಂದು ಕುಟುಂಬಸ್ಥರು ದೂರು ನೀಡಿದ್ದಾರೆ.
ಶಿಕ್ಷಕರಿಂದ ತೀವ್ರ ಮಾನಸಿಕ ಕಿರುಕುಳಕ್ಕೆ ಬೇಸತ್ತು ಪುತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೆತ್ತವರು ಗಂಭೀರವಾಗಿ ಆರೋಪಿಸಿದ್ದಾರೆ. ಕುಟುಂಬದವರ ಪ್ರಕಾರ, ಇತ್ತೀಚೆಗೆ ನಡೆದಿದ್ದ ಪರೀಕ್ಷೆಯಲ್ಲಿ ಆತ ಕಡಿಮೆ ಅಂಕ ಗಳಿಸಿದ್ದಕ್ಕೆ ಶಿಕ್ಷಕರು ಹೀಯಾಳಿಸಿ ಮಾತನಾಡಿದ್ದರು. ಇದರೊಟ್ಟಿಗೆ, ಮುಂದಿನ ಪರೀಕ್ಷೆಗಳಿಗೆ ಅವನನ್ನು ಹಾಜರಾಗಲು ಅವಕಾಶ ಕೊಟ್ಟಿಲ್ಲ. ಇದರಿಂದ ತುಂಬ ಮನನೊಂದ ನಜಾದ್, ಸಾವಿಗೆ ಶರಣಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಘಟನೆಯ ತನಿಖೆಗೆ ಆಗ್ರಹಿಸಿ ಎಸ್‌ಎಫ್‌ಐ ಕಾರ್ಯಕರ್ತರು ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ಕಾಲೇಜು ಅಧಿಕಾರಿಗಳು ವಿದ್ಯಾರ್ಥಿ ಮುಖಂಡರ ಜತೆ ಚರ್ಚೆಯೂ ಮಾಡಿದ್ದಾರೆ. ಮಾತುಕತೆಯ ಬಳಿಕ ಕಾಲೇಜಿನ ಆಡಳಿತ ಮಂಡಳಿಯು ಆರೋಪ ಹೊತ್ತ ನಾಲ್ವರು ಶಿಕ್ಷಕರನ್ನು ಇದೀಗ ಅಮಾನತುಗೊಳಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ,(ಏಜೆನ್ಸೀಸ್).