School Horror ಸಾಂದರ್ಭಿಕ ಚಿತ್ರ 
ದೇಶ

ಹೆಡ್ಸ್ ಡೌನ್ ಮಾಡದ್ದಕ್ಕೆ ನರ್ಸರಿ ಮಗುವಿಗೆ 8 ನಿಮಿಷ ಹಲ್ಲೆ ನಡೆಸಿದ ಕ್ಲಾಸ್ ಮಾನಿಟರ್! ನೆಟ್ಟಿಗರನ್ನು ಬೆಚ್ಚಿಬೀಳಿಸ್ತಿದೆ ಈ ವೈರಲ್ ವಿಡಿಯೋ..School Horror

ಉತ್ತರ ಪ್ರದೇಶ: ಲಖನೌದ ಎಎಲ್‌ಎಸ್ ಅಕಾಡೆಮಿ ಶಾಲೆಯೊಂದರಲ್ಲಿ ಐದು ವರ್ಷದ ನರ್ಸರಿ ವಿದ್ಯಾರ್ಥಿಯೊಬ್ಬನ ಮೇಲೆ ಅದೇ ತರಗತಿಯ ಕ್ಲಾಸ್ ಮಾನಿಟರ್ (School Horror) ಸುಮಾರು 8 ನಿಮಿಷಗಳ ಕಾಲ ಅಮಾನುಷವಾಗಿ ಥಳಿಸಿದ್ದರಿಂದ ಮುಖದ ತುಂಬೆಲ್ಲಾ ಭೀಕರ ರಕ್ತಗಾಯಗಳಾಗಿವೆ. ಈ ಘಟನೆಯು ಅಲ್ಲಿನ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದ್ದು, ಸದ್ಯ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ತರಗತಿಯಲ್ಲಿ ಶಿಕ್ಷಕಿ ಇಲ್ಲದಿದ್ದಾಗ ನಡೆದ ಕ್ರೌರ್ಯ

ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ತರಗತಿಯಲ್ಲಿ ಶಿಕ್ಷಕಿಯು ಮಕ್ಕಳಿಗೆ ಬೆಂಚ್​ ಮೇಲೆ ತಲೆ ಇಟ್ಟು ಮಲಗುವಂತೆ ಸೂಚನೆ ನೀಡಿದ್ದರು. ಅಲ್ಲದೆ, ಯಾರೂ ತಲೆ ಎತ್ತದಂತೆ ನಿಗಾ ವಹಿಸಲು ಕ್ಲಾಸ್ ಮಾನಿಟರ್‌ಗೆ ಜವಾಬ್ದಾರಿ ವಹಿಸಿ, ಅವರು ಕ್ಲಾಸ್‌ ರೂಮ್‌ನಿಂದ ಹೊರಗೆ ಹೋಗಿದ್ದಾರೆ. ಶಿಕ್ಷಕಿ ಹೊರಗೆ ಹೋಗುತ್ತಿದ್ದಂತೆ ಕ್ಲಾಸ್ ಮಾನಿಟರ್ ತನ್ನ ದರ್ಪ ತೋರಿಸಲು ಆರಂಭಿಸಿದ್ದಾಳೆ.
ಮೊದಲಿಗೆ ಒಬ್ಬ ವಿದ್ಯಾರ್ಥಿನಿ ತಲೆ ಎತ್ತಿದಾಗ ಆಕೆಯ ಮೇಲೆ ಕೈ ಮಾಡಿದ್ದಾಳೆ. ನಂತರ ಸಂತ್ರಸ್ತ 5 ವರ್ಷದ ಪುಟ್ಟ ಬಾಲಕನು ಕೆಲವು ಸೆಕೆಂಡುಗಳ ಕಾಲ ತಲೆ ಎತ್ತಿದ್ದನ್ನು ಗಮನಿಸಿದ ಅವಳು, ತಕ್ಷಣ ಆತನ ಬೆಂಚ್ ಬಳಿ ಧಾವಿಸಿ ಸತತ ನಾಲ್ಕು ಬಾರಿ ಕೆನ್ನೆಗೆ ಬಾರಿಸಿದ್ದಾಳೆ. ನೋವಿನಿಂದ ಮಗು ತಲೆ ಎತ್ತಿ ಅಳಲು ಪ್ರಾರಂಭಿಸಿದಾಗ, ಆತನ ತಲೆಯನ್ನು ಬಲವಂತವಾಗಿ ಬೆಂಚ್ ಮೇಲೆ ಒತ್ತಿ ಹಿಡಿಯಲು ಯತ್ನಿಸಿದ್ದಾಳೆ. ಮಗು ನಿಲ್ಲಿಸದೆ ಅತ್ತಾಗ ಮತ್ತೆ ಆತನ ಮೇಲೆ ಮನಬಂದಂತೆ ಹಲ್ಲೆ ನನಡೆಸಿದ್ದಾಳೆ.

ಬಾಗಿಲು ಹಾಕಿ ಮಗುವನ್ನು ಹಿಂಸಿಸಿದ ಮಾನಿಟರ್!

ಬಹಳಷ್ಟು ಭಯಭೀತನಾದ ಬಾಲಕನು ನೋವು ತಡೆಯಲಾರದೆ ತರಗತಿಯಿಂದ ಹೊರಗೆ ಓಡಿಹೋಗಲು ಪ್ರಯತ್ನಿಸಿದ್ದಾನೆ. ಆದರೆ ಆಕೆಯನ್ನು ತಡೆದ ಬಾಲಕಿಯು, ಆತನನ್ನು ಒಳಗೆ ಎಳೆದುಕೊಂಡು ಬಂದು ಮತ್ತೆ ಕೆನ್ನೆಗೆ ಹೊಡೆದಿದ್ದಾಳೆ. ಅಷ್ಟಕ್ಕೇ ನಿಲ್ಲಿಸದೆ, ಮಗು ಹೊರಗೆ ಹೋಗದಂತೆ ಕ್ಲಾಸ್ ರೂಮ್‌ನ ಪ್ರಮುಖ ಬಾಗಿಲನ್ನು ಒಳಗಿನಿಂದ ಚಿಲಕ ಹಾಕಿದ್ದಾಳೆ. ಈ ನಂತರ ಸುಮಾರು ಎರಡು ನಿಮಿಷಗಳ ಕಾಲ ನಿಂತಿದ್ದ ಮಗುವನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ಆತನ ಸೀಟ್​ನಲ್ಲಿ ಕೂರಿಸಿದ್ದಾಳೆ.
ಇಷ್ಟೆಲ್ಲಾ ಭೀಕರ ದೌರ್ಜನ್ಯ ನಡೆಯುತ್ತಿದ್ದರೂ ತರಗತಿಯ ಉಳಿದ ಮಕ್ಕಳು ಭಯದಿಂದ ತಮ್ಮ ತಲೆಗಳನ್ನು ಕೆಳಗೆ ಹಾಕಿಕೊಂಡೇ ಕುಳಿತಿದ್ದರು. ಸುಮಾರು 10 ನಿಮಿಷಗಳ ನಂತರ ಶಿಕ್ಷಕಿ ಮರಳಿ ಬಂದು ಬಾಗಿಲು ತಟ್ಟಿದಾಗ ಮಾನಿಟರ್ ಬಾಗಿಲು ತೆರೆದಿದ್ದಾಳೆ. ತಕ್ಷಣವೇ ಬಾಲಕನು ಎದ್ದು ಹೋಗಿ ಶಿಕ್ಷಕಿಗೆ ದೂರು ನೀಡಿದ್ದು, ಮಗುವಿನ ಮೇಲೆ ಆದಂತಹ ದಾಳಿಯನ್ನು ಇಬ್ಬರು ಶಿಕ್ಷಕರು ನೋಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪೋಷಕರ ದೂರು – ಮಾನಿಟರ್ ಉಚ್ಚಾಟನೆ

ಮಗು ಶಾಲೆಯಿಂದ ಮನೆಗೆ ಮರಳಿದಾಗ ಆತನ ಮುಖ ಊದಿಕೊಂಡಿರುವುದು ಮತ್ತು ಗಾಯದ ಗುರುತುಗಳನ್ನು ಕಂಡು ಪೋಷಕರು ಗಾಬರಿಗೊಂಡಿದ್ದು, ತಕ್ಷಣವೇ ಶಾಲೆಗೆ ಧಾವಿಸಿದ್ದು, ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಆದಾಗ್ಯೂ, ಈ ಗಂಭೀರ ಘಟನೆಯನ್ನು ಗಣನೆಗೆ ತೆಗೆದುಕೊಂಡಿರುವ ಶಾಲಾ ಆಡಳಿತ ಮಂಡಳಿಯು ಹಲ್ಲೆ ನಡೆಸಿದ ಕ್ಲಾಸ್ ಮಾನಿಟರ್ ಅನ್ನು ಶಾಲೆಯಿಂದ ಉಚ್ಚಾಟಿಸಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್​).