NSS helps to grow harmony 
ದೇಶ

ಸಾಮರಸ್ಯ ಬೆಳೆಯಲು ಎನ್​ಎಸ್​ಎಸ್​ ಪೂರಕ

ಚಿಕ್ಕನಾಯಕನಹಳ್ಳಿ: ರಾಷ್ಟೀಯ ಸೇವಾ ಯೋಜನೆಯ ಮೂಲಕ ನಡೆಯುವ ವಾರ್ಷಿಕ ಶಿಬಿರಗಳು ಪ್ರತಿ ಗ್ರಾಮಗಳಲ್ಲಿ ಜನರ ನಡುವೆ ಸಾಮರಸ್ಯ ಭಾವನೆ ಬೆಳೆಸಬೇಕು ಎಂದು ಚಿಕ್ಕನಾಯಕನಹಳ್ಳಿಯ ನವೋದಯ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಿ.ಕೆ. ಚಂದ್ರಶೇಖರ್​ ತಿಳಿಸಿದರು.
ಪಟ್ಟಣದ ನವೋದಯ ಪ್ರಥಮ ದರ್ಜೆ ಕಾಲೇಜಿನಿಂದ ಗೋಪಾಲನಹಳ್ಳಿಯಲ್ಲಿ ಆಯೋಜಿಸಿದ್ದ ಎನ್​ಎಸ್​ಎಸ್​ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟಿಸಿ ಮಾತನಾಡಿ, ಶಿಬಿರಗಳ ಮೂಲಕ ಹಳ್ಳಿಗಳಲ್ಲಿರುವ ದ್ವೇಷದ ಭಾವನೆ ದೂರವಾಗಿ ನಾವೆಲ್ಲರೂ ಒಂದು ಎನ್ನುವ ಭಾವ ಬೆಳೆಯಬೇಕು. ಎನ್​ಎಸ್​ಎಸ್​ ಉದ್ದೇಶ ಅರಿವು ಮೂಡಿಸುವ ಕಾರ್ಯ ಆಗಿದ್ದು, ಜನರ ಆರೋಗ್ಯ, ಸ್ವಚ್ಛತೆ, ಪರಿಸರಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಶಿಬಿರದಲ್ಲಿ ಹಮ್ಮಿಕೊಳ್ಳಬೇಕು ಎಂದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಎಚ್​.ಎಸ್​. ಪ್ರಕಾಶ್​ ಮಾತನಾಡಿ, ವಿದ್ಯಾರ್ಥಿಗಳ ಬೌದ್ಧಿಕ ಹಾಗೂ ಮಾನಸಿಕವಾಗಿ ಶಿಬಿರದಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು. ಯೋಜನಾಧಿಕಾರಿ ಡಾ.ಚಂದ್ರಶೇಖರ್​ ಮಾತನಾಡಿ, ಶಿಬಿರದ ಮೂಲಕ ಸಮುದಾಯ ಸೇವೆಗಳನ್ನು ಗ್ರಾಮೀಣ ಜನರಿಗೆ ತಲುಪಿಸುವ ಉದ್ದೇಶ ನಮ್ಮದು ಎಂದರು.
ಸಹ ಶಿಬಿರಾಧಿಕಾರಿ ಡಾ.ಶ್ರೀನಿವಾಸ್​ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ರವಿಕುಮಾರ್​, ಗ್ರಾಮದ ಹಿರಿಯರಾದ ಬಸವರಾಜು, ಗ್ರಾಪಂ ಮಾಜಿ ಸದಸ್ಯೆ ಅಂಬಿಕಾ, ಪ್ರಾಧ್ಯಾಪಕ ಡಾ. ಅರುಣ ಕುಮಾರ್​, ಚಂದ್ರಿಕಾ ಇದ್ದರು.