ಸುಳ್ಳು ಸುದ್ದಿಗಳಿಗೆ ದೆಹಲಿ ಪೊಲೀಸರ ಕ್ಲಾರಿಟಿ
- ದೆಹಲಿ ನೀಟ್ ಪ್ರತಿಭಟನೆಯಲ್ಲಿ NSA ಕಾಯ್ದೆ ಬಳಕೆಯಾಗುತ್ತಿದೆಯೇ?
- ಸುಳ್ಳು ಸುದ್ದಿಗಳಿಗೆ ದೆಹಲಿ ಪೊಲೀಸರ ಕ್ಲಾರಿಟಿ
- ಗಲಭೆಕೋರರ ಪಾಸ್‌ಪೋರ್ಟ್ ರದ್ದುಗೊಳಿಸುವ ಎಚ್ಚರಿಕೆ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಕೆಲವು ದಿನಗಳಿಂದ ಕಾಕ್ರೋಚ್ ಜನತಾ ಪಕ್ಷ (CJP) ನೇತೃತ್ವದಲ್ಲಿ ನಡೆಯುತ್ತಿರುವ ನೀಟ್ ಪರೀಕ್ಷಾ ಅಕ್ರಮ ವಿರೋಧಿ ಹೋರಾಟ ದಿನದಿಂದ ದಿನಕ್ಕೆ ದೊಡ್ಡ ಮಟ್ಟದ ಕಿಚ್ಚು ಹೊತ್ತಿಸುತ್ತಿದೆ.
ಇದರ ನಡುವೆ, ದೆಹಲಿಯಲ್ಲಿ ಪ್ರತಿಭಟನಾಕಾರರನ್ನು ಅಡಗಿಸಲು ಪೊಲೀಸ್ ಆಯುಕ್ತರಿಗೆ ‘ರಾಷ್ಟ್ರೀಯ ಭದ್ರತಾ ಕಾಯ್ದೆ’ (NSA) ಅಡಿಯಲ್ಲಿ ವಿಶೇಷ ತಡೆಗಟ್ಟುವ ಬಂಧನ ಅಧಿಕಾರ ನೀಡಲಾಗಿದೆ ಎಂಬ ಸುದ್ದಿ ಎಲ್ಲೆಡೆ ಕಾಡ್ಗಿಚ್ಚಿನಂತೆ ಹರಡಿತ್ತು. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ, ಸ್ವತಃ ದೆಹಲಿ ಪೊಲೀಸರು (Delhi Police on NSA) ಅಸಲಿ ಸತ್ಯ ಏನೆಂಬುದನ್ನು ಬಹಿರಂಗಪಡಿಸಿದ್ದಾರೆ.
ದೆಹಲಿ ಪೊಲೀಸರು ನೀಡಿದ ಸ್ಪಷ್ಟನೆ ಏನು?
ಜನರಲ್ಲಿ ಗೊಂದಲ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತುಕೊಂಡ ದೆಹಲಿ ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಎನ್‌ಎಸ್‌ಎ (NSA) ಅಡಿಯಲ್ಲಿ ಪೊಲೀಸ್ ಆಯುಕ್ತರಿಗೆ ನೀಡಲಾಗುವ ಈ ಅಧಿಕಾರವು ಯಾವುದೇ ನಿರ್ದಿಷ್ಟ ಪ್ರತಿಭಟನೆಯನ್ನು ಹತೋಟಿಗೆ ತರಲು ನೀಡಿದ್ದಲ್ಲ. ಇದು ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುವ ಆಡಳಿತಾತ್ಮಕ ಪ್ರಕ್ರಿಯೆಯ ಭಾಗವಾಗಿದೆ.
ಜುಲೈ 19 ರಿಂದ ಅಕ್ಟೋಬರ್ 18 ರವರೆಗಿನ ಈ ತ್ರೈಮಾಸಿಕ ಆದೇಶವನ್ನು ಜುಲೈ 7 ರಂದೇ ಹೊರಡಿಸಲಾಗಿತ್ತು. ಅಂದರೆ, ಸಿಜೆಪಿ ಪ್ರತಿಭಟನೆಗಳು ಆರಂಭವಾಗುವ ಮುನ್ನವೇ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, ಯಾವುದೇ ರೀತಿಯ ಸುಳ್ಳು ಸುದ್ದಿಗಳು ಹಾಗೂ ಆಧಾರರಹಿತ ವರದಿಗಳನ್ನು ಸಾರ್ವಜನಿಕರು ನಂಬಬಾರದು. ಅಧಿಕೃತ ಮೂಲಗಳಿಂದ ಬರುವ ಮಾಹಿತಿಯನ್ನು ಮಾತ್ರ ಪರಿಗಣಿಸಬೇಕು ಎಂದು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
ಹಿಂಸಾಚಾರ ನಡೆಸಿದ್ರೆ ಪಾಸ್‌ಪೋರ್ಟ್ ರದ್ದು!
ಮತ್ತೊಂದೆಡೆ, ಪ್ರತಿಭಟನೆ ಹೆಸರಿನಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಧ್ವಂಸ ಹಾಗೂ ಗಲಭೆ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ದೆಹಲಿ ಪೊಲೀಸ್ ಇಲಾಖೆ ಸ್ಕೆಚ್ ಹಾಕಿದೆ. ಮೆಟ್ರೋ ಬಂದ್ ಹಾಗೂ ಜುಲೈ 20 ರಂದು ನಡೆದ ಗಲಾಟೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಹಿಂಸಾಚಾರದಲ್ಲಿ ಭಾಗಿಯಾದ ಕಿಡಿಗೇಡಿಗಳನ್ನು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಗುರುತಿಸುತ್ತಿದ್ದಾರೆ. ಅಂತಹವರ ವಿರುದ್ಧ ಎಫ್‌ಐಆರ್ ದಾಖಲಿಸುವುದು ಮಾತ್ರವಲ್ಲದೆ, ಅವರ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸುವ ಅತಿ ಕಠಿಣ ಪ್ರಕ್ರಿಯೆಗೆ ಚಾಲನೆ ನೀಡಲು ಮುಂದಾಗಿದ್ದಾರೆ.
ಪೊಲೀಸರ ಮೇಲೆಯೇ NSA ಹಾಕಿ : ಸಿಜೆಪಿ ವಕ್ತಾರ ಸೌರವ್ ದಾಸ್
ಪೋಲಿಸರ ಈ ಎಲ್ಲಾ ನಡೆಯ ವಿರುದ್ಧ ಸಿಜೆಪಿ ವಕ್ತಾರ ಸೌರವ್ ದಾಸ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾವಿಲ್ಲಿ ಯಾವುದೇ ದೇಶ ವಿರೋಧಿ ಕೆಲಸ ಮಾಡುತ್ತಿಲ್ಲ, ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಶಾಂತಿಯುತವಾಗಿ ಹೋರಾಡುತ್ತಿದ್ದೇವೆ. ಆದರೆ, ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಮಾಡಿ, ಪೆಲೆಟ್ ಗನ್ ಬಳಸಿ ಜನರ ಕಣ್ಣು ಕಳೆದುಕೊಳ್ಳುವಂತೆ ಮಾಡಿದ, ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ಎಸಗಿದ ಪೊಲೀಸ್ ಅಧಿಕಾರಿಗಳು ಹಾಗೂ ಆರ್‌ಎಎಫ್ (RAF) ಸಿಬ್ಬಂದಿಗಳ ಮೇಲೆಯೇ ಎನ್‌ಎಸ್‌ಎ ಹಾಕಬೇಕು. ದೇಶದ ಭದ್ರತೆಗೆ ನಿಜವಾದ ಬೆದರಿಕೆ ಅವರಿಂದಲೇ ಹೊರತು ನಮ್ಮಿಂದಲ್ಲ ಎಂದು ಸೌರವ್ ದಾಸ್ ಆಕ್ರೋಶ ಹೊರಹಾಕಿದ್ದಾರೆ.
ಪ್ರಧಾನಿ ಮೋದಿ, ಅಮಿತ್ ಶಾಗೆ ಎಚ್ಚರಿಕೆ!
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ದಾಸ್, ಪ್ರತಿಭಟನಾ ಸ್ಥಳಕ್ಕೆ ಮಿಲಿಟರಿ ಬೆಟಾಲಿಯನ್‌ಗಳನ್ನು ತರಲಾಗುತ್ತಿದೆ, ಟ್ಯಾಂಕರ್‌ಗಳನ್ನು ತರಿಸಲಾಗುತ್ತಿದೆ ಎಂಬ ವರದಿಗಳಿವೆ. ಸರ್ಕಾರ ಇಲ್ಲಿ ವಿದ್ಯಾರ್ಥಿಗಳ ರಕ್ತ ಹರಿಸಲು ಹೊರಟಿದೆಯಾ? ಜುಲೈ 20 ರಂದು ಚೆಲ್ಲಿದ ರಕ್ತ ಸಾಲದೇ? ಇಂತಹ ದುಸ್ಸಾಹಸಕ್ಕೆ ಸರ್ಕಾರ ಕೈಹಾಕಬಾರದು ಎಂದು ಎಚ್ಚರಿಸಿದ್ದಾರೆ.
ಅಲ್ಲದೆ, ಬಿಜೆಪಿ ಹಿರಿಯ ನಾಯಕರಿಗೆ ಮನವಿ ಮಾಡಿದ ಅವರು, ಈ ಸರ್ಕಾರವನ್ನು ನರೇಂದ್ರ ಮೋದಿ ಮತ್ತು ಅಮಿತ್ ಶಾ ಇಬ್ಬರೇ ನಡೆಸುತ್ತಿದ್ದಾರೆ. ಇಂತಹ ದುಸ್ಸಾಹಸಗಳಿಂದ ದೇಶವನ್ನು ನಾಶ ಮಾಡಲು ಹೊರಟಿರುವ ಈ ನಾಯಕರಿಗೆ ಉಳಿದ ನಾಯಕರು ಬುದ್ಧಿ ಹೇಳಬೇಕು. ಅಗತ್ಯಬಿದ್ದರೆ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಖಾರವಾಗಿ ನುಡಿದಿದ್ದಾರೆ, (ಏಜನ್ಸೀಸ್).