ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಪ್ರಧಾನಿ ಮೋದಿ
ನವದೆಹಲಿ: ಒಂದು ಕಾಲದಲ್ಲಿ ಮಹಾತ್ಮ ಗಾಂಧಿಯವರೊಂದಿಗೆ ಭಾರತದ ಜಾಗತಿಕ ಗುರುತು ಹೊಂದಿತ್ತು, ಆದರೆ ಈಗ ಅದು ಬದಲಾವಣೆ ಹೊಂದಿದ್ದು, ಪ್ರಧಾನಿ ನರೇಂದ್ರ ಮೋದಿ ಭಾರತದ ಅತಿದೊಡ್ಡ ಬ್ರಾಂಡ್ ರಾಯಭಾರಿಯಾಗಿದ್ದಾರೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಕಳೆದ ಒಂದು ದಶಕದಲ್ಲಿ ವಿದೇಶಗಳಲ್ಲಿ ಭಾರತದ ಇಮೇಜ್ ಗಮನಾರ್ಹವಾಗಿ ಬದಲಾವಣೆಯಾಗಿದೆ. 10-15 ವರ್ಷಗಳ ಹಿಂದೆ ಯಾವುದೇ ಭಾರತೀಯ ವಿದೇಶಕ್ಕೆ ಹೋದರೆ, ಅಲ್ಲಿ ತಾನೂ ಭಾರತೀಯ ಎಂದು ಪರಿಚಯ ಮಾಡಿಕೊಳ್ಳಲು ಹಿಂಜರಿಯುತ್ತಿದ್ದ, ತನ್ನನ್ನು ಏಷ್ಯನ್ ಎಂದು ಪರಿಚಯಿಸಿಕೊಳ್ಳುತ್ತಿದ್ದ ಎಂದು ತಿಳಿಸಿದ್ದಾರೆ.
ಮುಂದುವರೆದು ಏಷ್ಯಾದಲ್ಲಿ ಎಲ್ಲಿಂದ ಬಂದವರು ಅಂತ ಕೇಳಿದ್ರೆ, ಆಗ ನಾನು ಭಾರತೀಯ ಅಂತ ಹೇಳ್ತಿದ್ದರು. ವಿದೇಶಗಳಲ್ಲಿ ಭಾರತದ ಗುರುತು ಮಹಾತ್ಮ ಗಾಂಧಿಯವರೊಂದಿಗೆ ನಿಕಟ ಸಂಬಂಧ ಹೊಂದಿದೆ. ಅಲ್ಲಿ ಯಾರ ಜೊತೆಗಾದ್ರೂ ಮಾತನಾಡಿದಾಗ ತಾನು ಭಾರತೀಯ ಎಂದು ಹೇಳಿದರೆ, ಅವರು ಭಾರತ! ಓ ಮಿಸ್ಟರ್ ಗಾಂಧಿ ಎಂದು ಹೇಳ್ತಿದ್ದರು. ಅಷ್ಟರಮಟ್ಟಿಗೆ ದೇಶದ ಇಮೇಜ್ ಮತ್ತು ಗುರುತು ಗಾಂಧೀಜಿಯೊಂದಿಗೆ ಅಂಟಿಕೊಂಡಿತ್ತು ಎಂದಿದ್ದಾರೆ.
ಆದರೆ ಇಂದು ನಾನು ಆತ್ಮವಿಶ್ವಾಸದಿಂದ ಹೇಳುತ್ತೇನೆ, ನೀವು ಜಗತ್ತಿನ ಯಾವುದೇ ದೇಶಕ್ಕೆ ಹೋಗಬಹುದು. ಚಿಕ್ಕ ಕೆರಿಬಿಯನ್ ದ್ವೀಪದಿಂದ ಹಿಡಿದು ಅಮೆರಿಕ, ದಕ್ಷಿಣ ಏಷ್ಯಾದಿಂದ ಪಶ್ಚಿಮ ಏಷ್ಯಾದ ಯಾವುದೇ ದೇಶಕ್ಕೆ ಹೋಗಿ, ಅಲ್ಲಿ ನೀವು ಯಾರಿಗಾದ್ರೂ ನಾನು ಭಾರತದವನು ಅಂತ ಹೇಳಿದ್ರೆ, ಅವರ ಮುಖದಲ್ಲಿ ನಗು ಮೂಡಿ ಭಾರತ! ಓಹ್ ಮಿಸ್ಟರ್ ಮೋದಿ ಎಂದು ಉದ್ಘಾರ ಕಾಣಬಹುದು ಎಂದು ಹೇಳಿದ್ದಾರೆ (ಏಜೆನ್ಸೀಸ್).