ಈಗ ಮಾಡು ಡಾಕ್ಯುಮೆಂಟರಿ..; ಬುಮ್ರಾಗೆ ಸಿಕ್ಸರ್ ಹೊಡೆಯೋ ಕನಸು ಕಂಡಿದ್ದ ಪಾಕ್​ ಬ್ಯಾಟರ್​ಗೆ ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್ 
ದೇಶ

ಈಗ ಮಾಡು ಡಾಕ್ಯುಮೆಂಟರಿ..; ಬುಮ್ರಾಗೆ ಸಿಕ್ಸರ್ ಹೊಡೆಯೋ ಕನಸು ಕಂಡಿದ್ದ ಪಾಕ್​ ಬ್ಯಾಟರ್​ಗೆ ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್ | Sahibzada Farhan

ಕೊಲಂಬೊ: ಕ್ರಿಕೆಟ್ ಮೈದಾನದಲ್ಲಿ ಅತಿಯಾದ ಆತ್ಮವಿಶ್ವಾಸ ಕೆಲವೊಮ್ಮೆ ಹೇಗೆ ತಿರುಗುಬಾಣವಾಗುತ್ತದೆ ಎಂಬುದಕ್ಕೆ ಪಾಕಿಸ್ತಾನದ ಬ್ಯಾಟರ್ ಸಾಹಿಬ್‌ಜಾದ ಫರ್ಹಾನ್(Sahibzada Farhan) ಅವರ ಇತ್ತೀಚಿನ ಪ್ರಸಂಗವೇ ಸಾಕ್ಷಿ. 2026ರ ಟಿ20 ವಿಶ್ವಕಪ್‌ನ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತದ ವಿರುದ್ಧ ಅಬ್ಬರಿಸುವ ಕನಸು ಕಂಡಿದ್ದ ಫರ್ಹಾನ್, ಅಂತಿಮವಾಗಿ ಶೂನ್ಯಕ್ಕೆ ಔಟಾಗಿ ಮುಖಭಂಗ ಅನುಭವಿಸಿದ್ದಾರೆ.

ವೈರಲ್ ವಿಡಿಯೋದಲ್ಲೇನಿತ್ತು..?

ಪಂದ್ಯಕ್ಕೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಸಖತ್ ಸೌಂಡ್ ಮಾಡಿತ್ತು. ಅದರಲ್ಲಿ ಪಾಕಿಸ್ತಾನದ ಅಭಿಮಾನಿಯೊಬ್ಬ ಬೌಂಡರಿ ಲೈನ್ ಹತ್ತಿರ ಫೀಲ್ಡಿಂಗ್ ಮಾಡುತ್ತಿದ್ದ ಫರ್ಹಾನ್ ಬಳಿ ಬಂದು, ಫರ್ಹಾನ್ ಭಾಯ್, ಈ ಬಾರಿ ಬುಮ್ರಾಗೆ ಸಿಕ್ಸರ್ ಸಿಡಿಸಿ 32 ಗಂಟೆಗಳ ಕಾಲದ ದೊಡ್ಡ ಸಿನಿಮಾ ಮಾಡೋಣ, ಅವರನ್ನು ಬಿಡಬೇಡಿ ಎಂದು ಪ್ರಚೋದನಾತ್ಮಕವಾಗಿ ಕೇಳಿಕೊಂಡಿದ್ದ. ಇದಕ್ಕೆ ಫರ್ಹಾನ್ ನಗುನಗುತ್ತಲೇ ತಲೆ ಅಲ್ಲಾಡಿಸಿ ಸಮ್ಮತಿಸಿದ್ದರು.
ಹಳೇ ವೈರತ್ವದ ಹಿನ್ನೆಲೆ
ವಾಸ್ತವವಾಗಿ, 2025ರ ಏಷ್ಯಾ ಕಪ್‌ನಲ್ಲಿ ಫರ್ಹಾನ್ ಅವರು ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಸತತ ಸಿಕ್ಸರ್‌ಗಳನ್ನು ಬಾರಿಸಿದ್ದರು. ಆ ಸಾಧನೆಯ ಬಗ್ಗೆ ಅವರು ಒಂದು ಕಿರು ಸಾಕ್ಷ್ಯಚಿತ್ರವನ್ನೂ ಬಿಡುಗಡೆ ಮಾಡಿದ್ದರು. ಆ ಘಟನೆಯನ್ನು ನೆನಪಿಸಿಕೊಂಡೇ ಅಭಿಮಾನಿ ಈ 32 ಗಂಟೆಯ ಸಿನಿಮಾ ಬಗ್ಗೆ ಮಾತನಾಡಿದ್ದ. ಆದರೆ ಅಂದು ಸಿಕ್ಸರ್ ಹೊಡೆದಿದ್ದ ಫರ್ಹಾನ್‌ಗೆ ಇಂದು ಅದೃಷ್ಟ ಕೈಕೊಟ್ಟಿದೆ.

ಶೂನ್ಯಕ್ಕೆ ಶರಣಾದ 'ಹೀರೋ'

ಟಾರ್ಗೆಟ್ ಬೆನ್ನಟ್ಟಲು ಬಂದ ಪಾಕಿಸ್ತಾನಕ್ಕೆ ಆರಂಭದಲ್ಲೇ ಆಘಾತ ಕಾದಿತ್ತು. ಬುಮ್ರಾ ಅವರನ್ನು ಎದುರಿಸುವ ಮೊದಲೇ, ಹಾರ್ದಿಕ್ ಪಾಂಡ್ಯ ಎಸೆದ ಮೊದಲ ಓವರ್‌ನಲ್ಲೇ ಫರ್ಹಾನ್ ದೊಡ್ಡ ಹೊಡೆತಕ್ಕೆ ಕೈಹಾಕಿ ಕ್ಯಾಚ್ ನೀಡಿ ನಿರ್ಗಮಿಸಿದರು. ಬುಮ್ರಾ ಅವರಿಗೆ ಸಿಕ್ಸರ್ ಹೊಡೆಯುವ ಮಾತಿರಲಿ, ಕನಿಷ್ಠ ಒಂದು ರನ್ ಗಳಿಸಲೂ ಅವರಿಗೆ ಸಾಧ್ಯವಾಗಲಿಲ್ಲ.

ನೆಟ್ಟಿಗರ ಟ್ರೋಲ್ ಸುರಿಮಳೆ

ಫರ್ಹಾನ್ ಸೊನ್ನೆಕ್ಕೆ ಔಟಾಗುತ್ತಿದ್ದಂತೆ ಭಾರತೀಯ ಅಭಿಮಾನಿಗಳು ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. 32 ಗಂಟೆಯ ಸಿನಿಮಾ ಇರಲಿ, 32 ಸೆಕೆಂಡ್ ಕೂಡ ಕ್ರೀಸ್‌ನಲ್ಲಿ ನಿಲ್ಲಲಾಗಲಿಲ್ಲ ಎಂದು ಕಾಲೆಳೆಯುತ್ತಿದ್ದಾರೆ. ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಕೂಡ ಈ ಹಿಂದೆ ಫರ್ಹಾನ್ ಅವರ ಸಾಕ್ಷ್ಯಚಿತ್ರದ ಬಗ್ಗೆ ವ್ಯಂಗ್ಯವಾಡಿದ್ದರು.
ಒಟ್ಟಿನಲ್ಲಿ, ಮೈದಾನದಲ್ಲಿ ಮಾತಿನ ಬದಲು ಪ್ರದರ್ಶನ ನೀಡಿದ್ದರೆ ಫರ್ಹಾನ್ ಈ ಅವಮಾನದಿಂದ ಬಚಾವಾಗಬಹುದಿತ್ತು ಎಂಬುದು ಕ್ರಿಕೆಟ್ ಪ್ರೇಮಿಗಳ ಅಭಿಪ್ರಾಯವಾಗಿದೆ,(ಏಜೆನ್ಸೀಸ್).