Narendra Modi | ಪ್ರಧಾನಿ ನರೇಂದ್ರ ಮೋದಿ
ತಿರುವನಂತಪುರಂ: ಎಡಪಂಥೀಯರು ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಅವಕಾಶ ನೀಡುವಂತೆ ದಕ್ಷಿಣ ರಾಜ್ಯದ ನಾಗರಿಕರನ್ನು ಒತ್ತಾಯಿಸಿದರು.
ಕೇರಳ ರಾಜಧಾನಿ ತಿರುವನಂತಪುರಂನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಎಲ್‌ಡಿಎಫ್ ಮತ್ತು ಕಾಂಗ್ರೆಸ್ ಎರಡರ ಅಧಿಕಾರಾವಧಿಗಳು ಭ್ರಷ್ಟಾಚಾರದಿಂದ ಕೂಡಿದ್ದವು, ಇದರಿಂದ ರಾಜ್ಯದ ಬಡವರು ಮತ್ತು ಮಧ್ಯಮ ವರ್ಗದ ಜನರು ಕಷ್ಟಪಟ್ಟು ಸಂಪಾದಿಸಿದ ಹಣ ಲೂಟಿಯಾಗುತ್ತಿದೆ ಎಂದು ಹೇಳಿದರು.
ಕೇರಳದ ಆಕಾಂಕ್ಷೆಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ರಾಜ್ಯದ ಜನರಿಗೆ ಬಿಜೆಪಿಯ ಮೇಲೆ ವಿಶ್ವಾಸವಿದೆ ಎಂದಿರುವ ಪ್ರಧಾನಿ ಮೋದಿ, ರಾಜ್ಯ ರಾಜಧಾನಿಯಾದ ತಿರುವನಂತಪುರಂ ನಗರವನ್ನು ಭಾರತದ ಅತ್ಯುತ್ತಮ ನಗರಗಳಲ್ಲಿ ಒಂದನ್ನಾಗಿ ಮಾಡಲು ನಾನು ಸಂಪೂರ್ಣ ಬೆಂಬಲವನ್ನು ನೀಡುತ್ತೇನೆ. ತಿರುವನಂತಪುರಂನ ಬಿಜೆಪಿಯ ಗೆಲುವು ಸಾಮಾನ್ಯವಲ್ಲ, ಇದು ಐತಿಹಾಸಿಕ ಮತ್ತು ಅಭೂತಪೂರ್ವವಾಗಿದೆ, ಈ ನಗರ ಕೇರಳದಲ್ಲಿ ಬಿಜೆಪಿಗೆ ಅಡಿಪಾಯ ಹಾಕಿದ್ದು, ಇಲ್ಲಿನ ಜನ ಬಿಜೆಪಿಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಾರೆ ಎಂದರು.
ಭ್ರಷ್ಟಾಚಾರವು ಕೇರಳದ ಅಭಿವೃದ್ಧಿಗೆ ಅಡ್ಡಿಯಾಗಿದ್ದು, ಇದು ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿರುವ ಉಳಿತಾಯದ ಮೇಲೂ ಪರಿಣಾಮ ಬೀರಿದೆ. ಸಹಕಾರಿ ಬ್ಯಾಂಕ್ ಹಗರಣವು ಬಡವರು ಮತ್ತು ಮಧ್ಯಮ ವರ್ಗದವರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಲೂಟಿ ಮಾಡಲು ಕಾರಣವಾಗಿದ್ದು, ಬಿಜೆಪಿಗೆ ಒಂದು ಅವಕಾಶ ನೀಡಿದರೆ ಲೂಟಿಕೋರರಿಂದ ಪ್ರತಿ ರೂಪಾಯಿಯನ್ನು ಹಿಂದಕ್ಕೆ ಪಡೆಯುವ ಭರವಸೆ ನೀಡುತ್ತೇವೆ ಎಂದು ಹೇಳಿದರು.
ಶಬರಿಮಲೆ ದೇವಸ್ಥಾನದ ಚಿನ್ನದ ಕಳ್ಳತನವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಇಡೀ ದೇಶ, ನಾವೆಲ್ಲರೂ, ಭಗವಾನ್ ಅಯ್ಯಪ್ಪನ ಮೇಲೆ ಅಚಲ ನಂಬಿಕೆಯನ್ನು ಇಟ್ಟಿದ್ದೇವೆ. ಆದರೆ ಎಲ್‌ಡಿಎಫ್ ಸರ್ಕಾರ ಶಬರಿಮಲೆ ದೇವಾಲಯದ ಸಂಪ್ರದಾಯಗಳಿಗೆ ಹಾನಿ ಮಾಡುವಲ್ಲಿ ಯಾವುದೇ ಕಲ್ಲನ್ನು ಬಿಟ್ಟಿಲ್ಲ. ಈಗ ಇಲ್ಲಿಂದ ಚಿನ್ನದ ಕಳ್ಳತನದ ವರದಿಗಳು ಹೊರಬರುತ್ತಿವೆ. ಭಗವಂತನ ಪಕ್ಕದಿಂದಲೇ ಚಿನ್ನವನ್ನು ಕಳವು ಮಾಡಲಾಗಿದೆ ಎಂದರು.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಅವಕಾಶ ನೀಡಿದರೆ, ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಮತ್ತು ಎಲ್ಲಾ ಅಪರಾಧಿಗಳನ್ನು ಜೈಲಿಗೆ ಕಳುಹಿಸುವುದಾಗಿ ಪ್ರತಿಜ್ಞೆ ಮಾಡಿದರು(ಏಜೆನ್ಸೀಸ್).