ಮುಸ್ಲಿಮರು ಭಾಗವಹಿಸುವುದರಿಂದ ತಪ್ಪೇನು ಇಲ್ಲ... ಮಹಾರಾಷ್ಟ್ರ ಸಿಎಂ ಪತ್ನಿ ಅಮೃತಾ ಅಚ್ಚರಿ ಹೇಳಿಕೆ! Amruta Fadnavis
- ಗರ್ಬಾ ಕಾರ್ಯಕ್ರಮದಲ್ಲಿ ಮುಸ್ಲಿಮರು ಭಾಗವಹಿಸಬಹುದು ಎಂದ ಅಮೃತಾ ಫಡ್ನವೀಸ್
- ಹಬ್ಬಗಳು ಎಲ್ಲರನ್ನು ಒಗ್ಗೂಡಿಸಬೇಕೆಂದ ಮಹಾರಾಷ್ಟ್ರದ ಮುಖ್ಯಮಂತ್ರಿ ಪತ್ನಿ
- ಗರ್ಬಾಗೆ ಮುಸ್ಲಿಮರ ಪ್ರವೇಶ ನಿರ್ಬಂಧಿಸಬೇಕೆಂಬ ವಿಎಚ್ಪಿ ವಾದ ಬೆಂಬಲಿಸಿದ ನಿತೇಶ್
- ನವರಾತ್ರಿಯಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ಸಚಿವರ ಆರೋಪ
ಮುಂಬೈ: ಮುಸ್ಲಿಮರು ಗರ್ಬಾದಲ್ಲಿ ಭಾಗವಹಿಸುವ ಕುರಿತು ಮಾತನಾಡಿದ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ( Amruta Fadnavis ), ಧಾರ್ಮಿಕ ಆಚರಣೆಗಳು ಎಲ್ಲರಿಗೂ ಒಂದೇ, ಅದರಲ್ಲಿ ಯಾವುದೇ ಜಾತಿ ಮತಗಳಿಲ್ಲ, ಇದರಲ್ಲಿ ಪ್ರತಿಯೊಬ್ಬರು ಭಾಗವಹಿಸಬಹುದು ಎಂದು ಹೇಳಿದರು.
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಅವರು ಇತ್ತೀಚೆಗೆ ನೀಡಿದ್ದ ವಿವಾದಾತ್ಮಕ ಹೇಳಿಕೆ ಕುರಿತು ಇಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅಮೃತಾ, ಹಬ್ಬಗಳು ಎಲ್ಲರನ್ನು ಒಗ್ಗೂಡಿಸುವಂತಿರಬೇಕು. ಮುಸ್ಲಿಂ ವ್ಯಕ್ತಿಗಳು ಗರ್ಬಾ ಕಾರ್ಯಕ್ರಮಕ್ಕೆ ಬಂದು ಹಬ್ಬವನ್ನು ಗೌರವಯುತವಾಗಿ ಆಚರಿಸಿದರೆ ಅದು ತುಂಬಾ ಒಳ್ಳೆಯದು, ಅದರಲ್ಲಿ ಯಾವುದೇ ತಪ್ಪಿಲ್ಲ ಮತ್ತು ಮುಸ್ಲಿಮರು ಯಾವುದೇ ನಿಬಂಧನೆ ಇಲ್ಲದೆ ಮುಕ್ತವಾಗಿ ಭಾಗವಹಿಸಬಹುದು ಎಂದರು.
ವಿವಿಧ ಸಮುದಾಯಗಳ ಜನರು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದೇ ಎಂಬ ವಿಚಾರದಲ್ಲಿ ರಾಜಕೀಯ ಚರ್ಚೆ ಜೋರಾಗಿ ನಡೆಯುತ್ತಿರುವ ಸಂದರ್ಭದಲ್ಲೇ ಅಮೃತಾ ಅವರು ನೀಡಿರುವ ಈ ಒಂದು ಹೇಳಿಕೆ ಎಲ್ಲರ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗೆ ನಾಂದಿಯಾಡಿದೆ.
ನಿತೇಶ್ ರಾಣೆ ಹೇಳಿದ್ದೇನು?
ಇದಕ್ಕೂ ಮುನ್ನ ಸಚಿವ ನಿತೇಶ್ ರಾಣೆ ಅವರು ವಿಶ್ವ ಹಿಂದೂ ಪರಿಷತ್ ನೀಡಿರುವ ಕರೆಯನ್ನು ಬೆಂಬಲಿಸಿದ್ದರು. ನವರಾತ್ರಿ ಸಂದರ್ಭದಲ್ಲಿ ನಡೆಯುವ ಗರ್ಬಾ ಮತ್ತು ದಾಂಡಿಯಾ ಕಾರ್ಯಕ್ರಮಗಳಿಗೆ ಮುಸ್ಲಿಮರಿಗೆ ಪ್ರವೇಶ ನಿರ್ಬಂಧಿಸಬೇಕು ಎಂಬ ವಿಎಚ್ಪಿ ನಿಲುವಿಗೆ ಅವರು ಬೆಂಬಲ ವ್ಯಕ್ತಪಡಿಸಿದ್ದರು. ಅಕ್ಟೋಬರ್ 11 ರಿಂದ ನವರಾತ್ರಿ ಆರಂಭವಾಗಲಿದ್ದು, ರಾಜ್ಯಾದ್ಯಂತ ನಡೆಯುವ ಗರ್ಬಾ ಕಾರ್ಯಕ್ರಮಗಳಿಗೆ ಮುಸ್ಲಿಮರಿಗೆ ಪ್ರವೇಶ ನೀಡಬಾರದು ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ. ಕಾರ್ಯಕ್ರಮ ಆಯೋಜಕರು ಭಾಗವಹಿಸುವವರ ಗುರುತನ್ನು ಪರಿಶೀಲಿಸಬೇಕು ಹಾಗೂ ಪ್ರವೇಶಕ್ಕೂ ಮುನ್ನ ಆಧಾರ್ ಕಾರ್ಡ್ ಅನ್ನು ಪರಿಶೀಲಿಸಬೇಕು ಎಂಬ ಮಾರ್ಗಸೂಚಿಗಳನ್ನೂ ಸಂಸ್ಥೆ ನೀಡಿದೆ ಎಂದು ವರದಿಯಾಗಿದೆ. ಈ ಸಂಗತಿ ಚರ್ಚೆಯಾಗುತ್ತಿರುವುದರ ನಡುವೆಯೇ ಈ ಬೆಳವಣಿಗೆಗಳು ನಡೆದಿವೆ.
ಲವ್ ಜಿಹಾದ್ ಕುರಿತು ನಿತೇಶ್ ಆರೋಪವೇನು?
ನಿತೇಶ್ ರಾಣೆ ಅವರು ನವರಾತ್ರಿಯಂತಹ ಹಬ್ಬಗಳಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ಆರೋಪಿಸಿದ್ದಾರೆ. ಅದು ಯಾರೇ ಆಗಿರಲಿ ಮೂರ್ತಿ ಪೂಜೆಯನ್ನು ಅನುಸರಿಸದವರು ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು ಎಂದು ನಿತೇಶ್ ರಾಣೆ ಹೇಳಿದ್ದಾರೆ. ಅಷ್ಟೇ ಅಲ್ಲದೇ ಗರ್ಬಾ ಮತ್ತು ದಾಂಡಿಯಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರ ಗುರುತು ಪರಿಶೀಲನೆಗೂ ಬೆಂಬಲ ನೀಡಿದ್ದಾರೆ. ಪ್ರವೇಶಿಸುವ ಮೊದಲು ಹನುಮಾನ್ ಚಾಲೀಸ್ ಪಠಿಸುವಂತೆ ಸೂಚಿಸಬೇಕು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್).