ಇದು ಮಹಿಳಾ ಮಸೂದೆಯಲ್ಲ ದೇಶದ ಚುನಾವಣಾ ನಕ್ಷೆ ಬದಲಿಸುವ ಯತ್ನ: ಕೇಂದ್ರದ ವಿರುದ್ಧ ರಾಹುಲ್ ವಾಗ್ದಾಳಿ! Rahul Gandhi
- ಕೇಂದ್ರ ಬಿಜೆಪಿ ಸರ್ಕಾರ ಪ್ರಸ್ತಾಪ ಮಾಡಿರುವ ಮಸೂದೆಗಳ ಬಗ್ಗೆ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
- ಮಹಿಳಾ ಮೀಸಲಾತಿ ಮಸೂದೆಯು ದೇಶದ ಚುನಾವಣಾ ನಕ್ಷೆಯನ್ನು ಬದಲಾಯಿಸುವ ಒಂದು ಪ್ರಯತ್ನ ಎಂದ ರಾಗಾ
- ಕ್ಷೇತ್ರ ಮರುವಿಂಗಡಣೆ ಮಾಡುವ ಸರ್ಕಾರದ ನಿರ್ಧಾರವನ್ನು ರಾಹುಲ್ ಗಾಂಧಿ ಟೀಕಿಸಿದರು
- ಕ್ಷೇತ್ರ ಮರುವಿಂಗಡಣೆಯ ಮೂಲಕ ಲೋಕಸಭಾ ಸೀಟುಗಳ ಸಂಖ್ಯೆಯನ್ನು ಬದಲಿಸಲು ಹೊರಟಿರುವುದು ದೇಶವಿರೋಧಿ ಕೃತ್ಯ ಎಂದು ರಾಹುಲ್
ನವದೆಹಲಿ: ಕೇಂದ್ರ ಬಿಜೆಪಿ ಸರ್ಕಾರ ಸಂಸತ್ತಿನ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿರುವ ಮಹಿಳಾ ಮೀಸಲಾತಿ ಮಸೂದೆಯು ದೇಶದ ಚುನಾವಣಾ ನಕ್ಷೆಯನ್ನು ಬದಲಾಯಿಸುವ ಒಂದು ಪ್ರಯತ್ನವಾಗಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ( Rahul Gandhi ) ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರ ಪ್ರಸ್ತಾಪ ಮಾಡಿರುವ ಮೂರು ಮಸೂದೆಗಳನ್ನು ಉದ್ದೇಶಿಸಿ ಸಂಸತ್ತಿನಲ್ಲಿಂದು ಮಾತನಾಡಿದ ರಾಹುಲ್ ಗಾಂಧಿ, ಲೋಕಸಭೆಯ ಸೀಟುಗಳ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸುವ ಮತ್ತು ಕ್ಷೇತ್ರ ಮರುವಿಂಗಡಣೆ (delimitation) ಮಾಡುವ ಸರ್ಕಾರದ ನಿರ್ಧಾರವನ್ನು ಮಹಿಳಾ ಮೀಸಲಾತಿ ಬಿಲ್‌ಗೆ ಲಿಂಕ್ ಮಾಡಿರುವುದನ್ನು ರಾಹುಲ್ ಗಾಂಧಿ ಟೀಕಿಸಿದರು.
ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡಬೇಕಾದರೆ ಮೊದಲು ಕ್ಷೇತ್ರ ಮರುವಿಂಗಡಣೆಯಾಗಬೇಕು ಎಂಬ ಸರ್ಕಾರದ ಷರತ್ತಿನ ಹಿಂದೆ ಬೇರೆಯದೇ ಉದ್ದೇಶವಿದೆ. ಮಹಿಳಾ ಮೀಸಲಾತಿಯನ್ನು ಕೇವಲ ಒಂದು ನೆಪವಾಗಿ ಬಳಸಿಕೊಂಡು, ಸರ್ಕಾರವು ತನ್ನ ಅನುಕೂಲಕ್ಕೆ ತಕ್ಕಂತೆ ಲೋಕಸಭಾ ಸೀಟುಗಳ ಹೆಚ್ಚಳ ಮತ್ತು ಕ್ಷೇತ್ರಗಳ ಬದಲಾವಣೆಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಇದು ಮಹಿಳಾ ಸಬಲೀಕರಣಕ್ಕಾಗಿ ತಂದಿರುವ ಮಸೂದೆಯಲ್ಲ. 2023ರಲ್ಲೇ ಎಲ್ಲರ ಬೆಂಬಲದೊಂದಿಗೆ ಮಹಿಳಾ ಮೀಸಲಾತಿ ಬಿಲ್ ಅಂಗೀಕಾರವಾಗಿದ್ದರೂ, ಈಗ ಅದರ ಜೊತೆಗೆ ಕ್ಷೇತ್ರ ಮರುವಿಂಗಡಣೆಯನ್ನು ಸೇರಿಸಿರುವುದು ಭಾರತದ ಚುನಾವಣಾ ನಕ್ಷೆಯನ್ನೇ ಬದಲಿಸುವ ಪ್ರಯತ್ನವಾಗಿದೆ ಎಂದು ರಾಹುಲ್ ಗಾಂಧಿ ಅವರು ದೂರಿದರು. ಅಲ್ಲದೆ, ಹಳೆಯ ಬಿಲ್ ಅನ್ನು ಹಾಗೆಯೇ ಜಾರಿಗೆ ತನ್ನಿ, ನಾವು ಬೆಂಬಲಿಸುತ್ತೇವೆ ಎಂದರು.
ಸರ್ಕಾರವು ಮಹಿಳಾ ಮೀಸಲಾತಿಯನ್ನು ಕೇವಲ ಒಂದು ದಾಳವಾಗಿ ಬಳಸುತ್ತಿದೆ. ಕ್ಷೇತ್ರ ಮರುವಿಂಗಡಣೆಯ ಮೂಲಕ ಲೋಕಸಭಾ ಸೀಟುಗಳ ಸಂಖ್ಯೆಯನ್ನು ಬದಲಿಸಲು ಹೊರಟಿರುವುದು ದೇಶವಿರೋಧಿ ಕೃತ್ಯ. ಮಹಿಳಾ ಮೀಸಲಾತಿಗೂ ಮತ್ತು ಕ್ಷೇತ್ರಗಳ ಗಡಿ ಬದಲಾವಣೆಗೂ ಲಿಂಕ್ ಇಟ್ಟಿರುವುದು ಸರಿಯಲ್ಲ. ಸರ್ಕಾರದ ಈ ನಡೆ 'ದೇಶ ವಿರೋಧಿ' ಎಂದು ಕರೆದಿರುವ ರಾಹುಲ್, ಪ್ರತಿಪಕ್ಷಗಳು ಒಗ್ಗೂಡಿ ಇದನ್ನು ಸೋಲಿಸುತ್ತವೆ ಮತ್ತು ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಅಂದಹಾಗೆ, ಕ್ಷೇತ್ರ ಮರುವಿಂಗಡಣೆ (ಡೆಲಿಮಿಟೇಶನ್) ಪ್ರಕ್ರಿಯೆಯು 2011ರ ಜನಗಣತಿಯ ಅಂಕಿಅಂಶಗಳನ್ನು ಆಧರಿಸಿ ನಡೆಯಲಿದ್ದು, ಇದು ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸಿರುವ ದಕ್ಷಿಣ ಭಾರತದ ರಾಜ್ಯಗಳಿಗೆ ಹಿನ್ನಡೆಯಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ. ಹಿಂದಿ ಭಾಷಿಕರು ಹೆಚ್ಚಾಗಿರುವ ಉತ್ತರ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ, ಅಲ್ಲಿ ಸಂಸತ್ ಸ್ಥಾನಗಳ ಸಂಖ್ಯೆ ಹೆಚ್ಚಾಗಲಿದೆ. ಇದು ಬಿಜೆಪಿಯ ಭದ್ರಕೋಟೆಗಳೆಂದು ಪರಿಗಣಿಸಲ್ಪಟ್ಟ ರಾಜ್ಯಗಳಿಗೆ ಹೆಚ್ಚಿನ ರಾಜಕೀಯ ಬಲ ನೀಡಲಿದ್ದು, 2029ರ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣದ ರಾಜ್ಯಗಳ ಅಗತ್ಯವಿಲ್ಲದೆಯೇ ಬಿಜೆಪಿ ಅಧಿಕಾರಕ್ಕೆ ಬರಲು ದಾರಿಯಾಗುತ್ತದೆ ಎಂದು ಎಂ.ಕೆ. ಸ್ಟಾಲಿನ್ ಮತ್ತು ರೇವಂತ್ ರೆಡ್ಡಿ ಅವರಂತಹ ನಾಯಕರು ವಾದಿಸುತ್ತಿದ್ದಾರೆ.
ದಕ್ಷಿಣದ ರಾಜ್ಯಗಳ ಈ ತೀವ್ರ ವಿರೋಧದ ನಡುವೆಯೂ, ಕೇಂದ್ರ ಸರ್ಕಾರವು ಈ ಪ್ರಕ್ರಿಯೆಯಿಂದ ಯಾವುದೇ ರಾಜ್ಯಕ್ಕೂ ಅನ್ಯಾಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಸಂಸತ್ತಿನಲ್ಲಿ ಈ ಬಗ್ಗೆ ಭರವಸೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, "ಪೂರ್ವದಿಂದ ಪಶ್ಚಿಮಕ್ಕೆ, ಉತ್ತರದಿಂದ ದಕ್ಷಿಣಕ್ಕೆ ಯಾವುದೇ ರಾಜ್ಯಕ್ಕೂ ಅನ್ಯಾಯವಾಗದಂತೆ ನೋಡಿಕೊಳ್ಳುವುದು ನನ್ನ ಗ್ಯಾರಂಟಿ" ಎಂದು ಘೋಷಿಸಿದ್ದಾರೆ. ಕ್ಷೇತ್ರ ಮರುವಿಂಗಡಣೆಯಿಂದಾಗಿ ಅಭಿವೃದ್ಧಿ ಹೊಂದಿದ ರಾಜ್ಯಗಳು ತಮ್ಮ ರಾಜಕೀಯ ಪ್ರಭಾವವನ್ನು ಕಳೆದುಕೊಳ್ಳದಂತೆ ಸಮತೋಲನ ಕಾಯ್ದುಕೊಳ್ಳುವ ಭರವಸೆಯನ್ನು ಸರ್ಕಾರ ನೀಡಿದೆ, (ಏಜೆನ್ಸೀಸ್).