Prashant Kishor | ಬಂಕಿಪುರ ಉಪಚುನಾವಣೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ ಪ್ರಶಾಂತ್ ಕಿಶೋರ್!... ಬಿಜೆಪಿಗೆ ವಿಧಿಸಿದ ಆ ಷರತ್ತು ಇಲ್ಲಿದೆ ನೋಡಿ
ಪಟನಾ: ಬಿಹಾರದ ಬಂಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ವಾತಾವರಣ ತೀವ್ರ ಕಾವು ಪಡೆದುಕೊಂಡಿದೆ. ಜನ್ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ (Prashant Kishor), ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವು ಮತದಾರರನ್ನು ಸೆಳೆಯಲು ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯಸಭಾ ಸಂಸದ ನಿತೀಶ್ ಕುಮಾರ್ ಅವರ ಎಐ ನಿರ್ಮಿತ ನಕಲಿ ವಿಡಿಯೋವನ್ನು ಬಳಸಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಕಿಶೋರ್, ಈ ವಿಡಿಯೋದ ಸತ್ಯಾಸತ್ಯತೆಯನ್ನು ಸಾಬೀತುಪಡಿಸುವಂತೆ ಬಿಜೆಪಿಗೆ ಸವಾಲು ಹಾಕಿದ್ದು, ಒಂದು ವೇಳೆ ವಿಡಿಯೋ ನಿಜ ಎಂದು ಸಾಬೀತಾದರೆ ತಾವು ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.
ಬಂಕಿಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯಸಭೆಗೆ ಆಯ್ಕೆಯಾದ ನಂತರ ಈ ಉಪಚುನಾವಣೆ ಎದುರಾಗಿದೆ. ಪಟನಾದ ಹೃದಯಭಾಗದಲ್ಲಿರುವ ಬಂಕಿಪುರ ಕ್ಷೇತ್ರವು ಬಿಜೆಪಿಯ ಅತ್ಯಂತ ಸುರಕ್ಷಿತ ಭದ್ರಕೋಟೆ ಎನಿಸಿಕೊಂಡಿದೆ. ನಿತಿನ್ ನವೀನ್ ಇಲ್ಲಿ ಐದು ಬಾರಿ ಹಾಗೂ ಅವರ ತಂದೆ ನವೀನ್ ಕಿಶೋರ್ ಪ್ರಸಾದ್ ಸಿನ್ಹಾ ಮೂರು ಬಾರಿ ಗೆಲುವು ಸಾಧಿಸಿದ್ದರು. ಆದರೆ, ಪ್ರಶಾಂತ್ ಕಿಶೋರ್ ತಮ್ಮ ರಾಜಕೀಯ ಪಾದಾರ್ಪಣೆಗೆ ಇದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವುದರಿಂದ ಈ ಉಪಚುನಾವಣೆ ಬಿಜೆಪಿಗೆ ಅತ್ಯಂತ ಪ್ರತಿಷ್ಟೆಯ ಕಣವಾಗಿ ಮಾರ್ಪಟ್ಟಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ 58 ಸೆಕೆಂಡುಗಳ ವಿಡಿಯೋ ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಶಾಂತ್ ಕಿಶೋರ್, ಇದು ಎಐ ಡೀಪ್‌ಫೇಕ್ ವಿಡಿಯೋ ಎಂದು ಪ್ರತಿಪಾದಿಸಿದರು. ಬಂಕಿಪುರದ ಜನತೆ ಈಗಾಗಲೇ ತೀರ್ಮಾನ ಮಾಡಿದ್ದಾರೆ. ನಿತೀಶ್ ಕುಮಾರ್ ಅವರ ಹೆಸರಿನಲ್ಲಿ ಎನ್‌ಡಿಎ ಬಿಡುಗಡೆ ಮಾಡಿರುವ ವಿಡಿಯೋ ಸಂಪೂರ್ಣ ನಕಲಿ ಮತ್ತು ಎಐ ತಂತ್ರಜ್ಞಾನದಿಂದ ಕೂಡಿದ್ದು. ಸೋಲಿನ ಭಯದಿಂದ ಬಿಜೆಪಿ ಇಂತಹ ವಿಡಿಯೋ ಬಿಡುಗಡೆ ಮಾಡಿದೆ ಎಂದು ಕಿಶೋರ್ ವಾಗ್ದಾಳಿ ನಡೆಸಿದರು.
ನಾನು ಬಿಜೆಪಿಗೆ ಸವಾಲು ಹಾಕುತ್ತಿದ್ದೇನೆ, ನಿತೀಶ್ ಜಿ ಅವರಿಂದಲೇ ಇದನ್ನು ದೃಢೀಕರಿಸಿ. ಅವರು ಇದನ್ನು ನಿಜ ಎಂದು ಸಾಬೀತುಪಡಿಸಿದರೆ, ಚುನಾವಣೆಗೆ ಇನ್ನೆರಡು ದಿನ ಇರುವಾಗಲೇ ನಾನು ನನ್ನ ಉಮೇದುವಾರಿಕೆಯನ್ನು ಹಿಂಪಡೆಯುತ್ತೇನೆ. ಬಿಜೆಪಿ ಈಗಾಗಲೇ ಸೋತಿದೆ, ಎಷ್ಟು ಮತಗಳ ಅಂತರದಿಂದ ಸೋಲುತ್ತದೆ ಎಂಬುದಷ್ಟೇ ಉಳಿದಿರುವ ಪ್ರಶ್ನೆ ಎಂದರು. ಅಂತಿಮ ಹಂತದ ಪ್ರಚಾರದ ಭಾಗವಾಗಿ ಬಿಜೆಪಿ ಈ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ನಿತೀಶ್ ಕುಮಾರ್ ಅವರು ಎನ್‌ಡಿಎ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದ್ದರು.
ಪ್ರಶಾಂತ್ ಕಿಶೋರ್ ಆರೋಪಕ್ಕೆ ಜೆಡಿಯು ತಿರುಗೇಟು
ಪ್ರಶಾಂತ್ ಕಿಶೋರ್ ಆರೋಪಕ್ಕೆ ಜೆಡಿಯು ರಾಜ್ಯ ಅಧ್ಯಕ್ಷ ಉಮೇಶ್ ಕುಶ್ವಾಹ ಪ್ರತಿಕ್ರಿಯಿಸಿದ್ದು, ಕಿಶೋರ್ ನಿತೀಶ್ ಕುಮಾರ್ ಅವರಿಗೆ ಅಪಮಾನ ಮಾಡುತ್ತಿದ್ದಾರೆ ಮತ್ತು ಬಿಹಾರದ ಜನತೆ ಇದನ್ನು ಸಹಿಸುವುದಿಲ್ಲ ಎಂದಿದ್ದಾರೆ. ಎಎನ್‌ಐ ಜೊತೆ ಮಾತನಾಡಿದ ಕುಶ್ವಾಹ, ನೈಜ ವಿಡಿಯೋ ಮತ್ತು ಎಐ ವಿಡಿಯೋ ನಡುವಿನ ವ್ಯತ್ಯಾಸವನ್ನು ಜನ ಈಗ ಅರ್ಥಮಾಡಿಕೊಳ್ಳಬಲ್ಲರು. ಇದು ಡಿಜಿಟಲ್ ಯುಗ ಎಂದು ಹೇಳಿದರು(ಏಜೆನ್ಸೀಸ್).