Ketan Agrawal Murder Case
- ಕುಟುಂಬದ ಒತ್ತಡದಿಂದಾಗಿ ಕೇತನ್ ಜೊತೆ ಮದುವೆಗೆ ಒಪ್ಪಿದ್ದೆ ಎಂದ ಸಿಯಾ ಗೋಯೆಲ್
- ಜೂನ್ 18 ರ ಕೊಲೆಗೂ ಮುನ್ನ, ಜೂನ್ 14 ರಂದೇ ಹಾವಿನ ನಾಟಕವಾಡಿ ಕೊಲ್ಲಲು ಯತ್ನ
- ಬಾಲಿ ಪ್ರವಾಸ ರದ್ದುಗೊಳಿಸಿದ್ದ ಸಿಯಾ, ಲೋಹಗಢ್‌ಗೆ ಹೋಗುವಂತೆ ಹಠ
ಪುಣೆ: ಮಹಾರಾಷ್ಟ್ರದ ಲೋಹಗಡ ಕೋಟೆಯಲ್ಲಿ ಯುವ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಕೇಸ್ನಲ್ಲಿ ಬಂಧಿಯಾಗಿರುವ ಆರೋಪಿ ಮತ್ತು ಭಾವಿ ಪತ್ನಿ ಸಿಯಾ ಗೋಯೆಲ್ ವಿಚಾರಣೆಯು ಚುರುಕುಗೊಂಡಿದ್ದು, ಪ್ರಕರಣಕ್ಕೆ ಪ್ರಮುಖ ತಿರುವು ಸಿಕ್ಕಿದೆ. ಚೇತನ್ ಚೌಧರಿ ಜೊತೆಗಿನ ಸಂಬಂಧ, ಕುಟುಂಬಸ್ಥರ ಒತ್ತಡವೇ ಈ ಭೀಕರ ಕೊಲೆಗೆ ಕಾರಣ ಎನ್ನಲಾಗಿದೆ.
ಪೊಲೀಸರ ಮುಂದೆ ಸಿಯಾ ಹೇಳಿದ್ದೇನು?
ಮಾನಸಿಕವಾಗಿ ಮದುವೆಯಾಗಲು ಸಿದ್ಧಳಾಗಿರಲಿಲ್ಲ. ಮದುವೆಯ ಪ್ರಸ್ತಾಪವನ್ನು ಒಪ್ಪಿಕೊಳ್ಳುವಂತೆ ಕುಟುಂಬದವರು ಒತ್ತಡ ಹೇರಿದ್ದರು. ಈ ಹಿನ್ನೆಲೆ ಅನಿವಾರ್ಯಾವಾಗಿ ಒಪ್ಪಿಕೊಳ್ಳಬೇಕಿತ್ತು ಎನ್ನುವ ಮಾಹಿತಿ ಪೊಲೀಸರ ವಿಚಾರಣೆಯಿಂದ ಬೆಳಕಿಗೆ ಬಂದಿದೆ.
ಚೇತನ್ ಹೇಳಿದ್ದೇನು?
ಇಷ್ಟೇ ಅಲ್ಲದೇ ಆರೋಪಿ ಚೇತನ್ ಸಹ ವಿಚಾರಣೆ ವೇಳೆ ಕೆಲವೊಂದು ಮಾಹಿತಿಯನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ನಿಶ್ಚಿತಾರ್ಥ ಮುರಿದು ಬೇರೆಲ್ಲೋ ಹೋಗಿ ಬದುಕುವುದು ಸಿಯಾಗೆ ಇಷ್ಟವಿರಲಿಲ್ಲ. ಇದು ಕುಟುಂಬದ ಗೌರವವನ್ನು ಹಾಳು ಮಾಡುತ್ತದೆ. ಅವಮಾನವಾಗುತ್ತದೆ. ಕುಟುಂಬದ ಖ್ಯಾತಿ ಮತ್ತು ಗೌರವ ಉಳಿಸಿಕೊಳ್ಳಲು ಕೇತನ್ ಜೀವ ತೆಗೆದುಕೊಳ್ಳುವುದು ಸುಲಭ ಎಂದು ಹೇಳಿದ್ದಳು ಎನ್ನುವುದನ್ನು ವಿವರಿಸಿದ್ದಾನೆ.
ಘಟನೆಯ ವಿವರ
ಪುಣೆಯ ಗಹುಂಜೆ ನಿವಾಸಿಯಾದ ಕೇತನ್ ಅಗರ್ವಾಲ್ ತಮ್ಮ ಕುಟುಂಬದ ರಿಯಲ್ ಎಸ್ಟೇಟ್ ಸಂಸ್ಥೆಯಾದ 'ಸಕ್ಸಸ್ ಗ್ರೂಪ್'ನ ನಿರ್ದೇಶಕ ಮತ್ತು ಮುಖ್ಯ ಮಾರ್ಕೆಟಿಂಗ್ ಅಧಿಕಾರಿಯಾಗಿದ್ದರು. ಜೂನ್ 18 ರಂದು ಕೇತನ್ ತನ್ನ ಭಾವಿ ಪತ್ನಿ ಸಿಯಾ ಗೋಯಲ್ ಅವರ ಹುಟ್ಟುಹಬ್ಬವನ್ನು ಆಚರಿಸಲು ಪುಣೆ ಸಮೀಪದ ಲೋಹಗಢ್ ಕೋಟೆಗೆ ಟ್ರೆಕ್ಕಿಂಗ್ ಹೋಗಿದ್ದರು.
ಲೋಹಗಢ್ ಕೋಟೆಯ ತುದಿಯಲ್ಲಿ ತೀವ್ರ ಗಾಳಿಯ ನಡುವೆ ಫೋಟೋ ತೆಗೆದುಕೊಳ್ಳುವಾಗ ಕೇತನ್ ಕಾಲು ಜಾರಿ ಬಿದ್ದಿದ್ದಾರೆ ಎಂದು ಸಿಯಾ ಮೊದಲು ಪೊಲೀಸರಿಗೆ ತಿಳಿಸಿದ್ದಳು. ತಕ್ಷಣವೇ ಕಾರ್ಯಾಚರಣೆ ನಡೆಸಿದ ರಕ್ಷಣಾ ತಂಡ 3 ಗಂಟೆಗಳ ಬಳಿಕ ಶವವನ್ನು ಹೊರತೆಗೆದಿತ್ತು. ಆರಂಭದಲ್ಲಿ ಇದನ್ನು ಆಕಸ್ಮಿಕ ಸಾವು ಎಂದು ದಾಖಲಿಸಿಕೊಳ್ಳಲಾಗಿತ್ತು. ಆದರೆ ಸಿಯಾಳ ಹೇಳಿಕೆಗಳಲ್ಲಿ ಹಲವು ಅಸಮಂಜಸತೆಗಳು ಕಂಡುಬಂದವು. ಹಣಕಾಸಿನ ವಿವಾದ ಹಾಗೂ ವೈಯಕ್ತಿಕ ಸಂಬಂಧಗಳ ಆಯಾಮದಲ್ಲಿ ತನಿಖೆ ನಡೆಸಿದಾಗ ಇದು ವ್ಯವಸ್ಥಿತ ಕೊಲೆ ಸಂಚು ಎಂಬುದು ಸಾಬೀತಾಗಿದೆ ಎಂದು ಪುಣೆ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಗಿಲ್ ತಿಳಿಸಿದ್ದಾರೆ.
ಚೇತನ್ ಚೌಧರಿ ಜೊತೆಗಿನ ಸಂಬಂಧ
ಪೊಲೀಸ್ ಇನ್ವೆಸ್ಟಿಗೇಷನ್ ಪ್ರಕಾರ, ಸಿಯಾ ಗೋಯಲ್ ಕಳೆದ ವರ್ಷದ ದೀಪಾವಳಿ ಪಾರ್ಟಿಯೊಂದರಲ್ಲಿ ಪುಣೆಯ ಕೊಂಡ್ವಾ ನಿವಾಸಿ ಹಾಗೂ ಡ್ರೈ ಫ್ರೂಟ್ಸ್ ವ್ಯಾಪಾರಿಯಾದ ಚೇತನ್ ಚೌಧರಿ ಎಂಬಾತನನ್ನು ಭೇಟಿಯಾಗಿದ್ದಳು. ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಕೇತನ್‌ನನ್ನು ಮದುವೆಯಾಗಲು ಸಿಯಾಗೆ ಕಿಂಚಿತ್ತೂ ಇಷ್ಟವಿರಲಿಲ್ಲ. ತನ್ನ ಪ್ರೀತಿಯ ಹಾದಿಗೆ ಕೇತನ್ ಅಡ್ಡಿಯಾಗಿದ್ದಾನೆ ಎಂದು ಭಾವಿಸಿದ ಆಕೆ, ಕೊಲೆ ಮಾಡಲು ಮುಂದಾದಳು ಎನ್ನಲಾಗಿದೆ.
ಜೂ.14 ರಂದೇ ಕೊಲೆ ಯತ್ನ?
ಕೇತನ್ ತಂದೆ ವಿಶಾಲ್ ಅಗರ್ವಾಲ್ ಅವರ ಪ್ರಕಾರ, ಜೂನ್ 18 ರಂದು ಕೊಲೆ ಮಾಡುವ ಮುನ್ನವೇ ಅಂದರೆ ಜೂನ್ 14 ರಂದು ಸಿಯಾ ಕೇತನ್‌ನನ್ನು ಕೊಲ್ಲಲು ಯತ್ನಿಸಿದ್ದಳು. ಅಂದೂ ಸಹ ಇಬ್ಬರು ಲೋಹಗಢ್ ಕೋಟೆಯ ಇದೇ ಜಾಗಕ್ಕೆ ಹೋಗಿದ್ದರು. ಆಗ ಸಿಯಾ ಕೇತನ್‌ನನ್ನು ತಳ್ಳಿದ್ದಳು, ಆದರೆ ಕೇತನ್ ಅಲ್ಲಿದ್ದ ಪೊದೆಗಳನ್ನು ಹಿಡಿದು ಪ್ರಾಣ ಉಳಿಸಿಕೊಂಡಿದ್ದರು. ಆ ಸಮಯದಲ್ಲಿ ತಾನು ತಳ್ಳಿದ್ದನ್ನು ಮುಚ್ಚಿಹಾಕಲು ಸಿಯಾ "ಅಲ್ಲಿ ಹಾವು ಬಂದಿತ್ತು, ನಿನ್ನನ್ನು ರಕ್ಷಿಸಲು ತಳ್ಳಿದೆ" ಎಂದು ಸುಳ್ಳು ನಾಟಕವಾಡಿದ್ದಳು.
ಜೂನ್ 18 ರಂದು ಕೇತನ್ ಮತ್ತು ಸಿಯಾ ತಲುಪುವ ಮೊದಲೇ ಚೇತನ್ ಚೌಧರಿ ಕೋಟೆಗೆ ತಲುಪಿದ್ದನು. ನಂತರ ಇಬ್ಬರು ಯಾರಿಲ್ಲದ ಜಾಗಕ್ಕೆ ಹೋದಾಗ 400 ಅಡಿ ಆಳದ ಕಣಿವೆಗೆ ತಳಿದ್ದಾನೆ. ಸಿಯಾ ಮತ್ತು ಚೇತನ್ ಕೆಫೆಯೊಂದರಲ್ಲಿ ಭೇಟಿಯಾಗಿ ಲೋಹಗಢ್ ಕೋಟೆಯಲ್ಲೇ ಈ ಕೃತ್ಯ ಎಸಗುವ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದರು ಎಂಬುದು ತನಿಖೆಯಿಂದ ಬಹಿರಂಗವಾಗಿದೆ. ಅನುಮಾನದ ಆಧಾರದ ಮೇಲೆ ಚೇತನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡೀ ಕೊಲೆ ರಹಸ್ಯ ಬಯಲಾಗಿದೆ.
ಪ್ರಸ್ತುತ ಲೋನಾವಾಲಾ ಗ್ರಾಮಾಂತರ ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಕೊಲೆ ಮತ್ತು ಅಪರಾಧ ಸಂಚು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಡಿಜಿಟಲ್ ದಾಖಲೆಗಳು ಹಾಗೂ ವಿಧಿವಿಜ್ಞಾನ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದ್ದು, ಇಬ್ಬರು ಆರೋಪಿಗಳನ್ನು ಜೂನ್ 29 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ, (ಏಜೆನ್ಸೀಸ್).