ಕಾಂಗ್ರೆಸ್ ನಾಯಕ ಮಾಣಿಕ್ಯಂ ಟ್ಯಾಗೋರ್
ಚೆನ್ನೈ: ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಗೂ ಮುನ್ನ ಇಂಡಿಯಾ ಮೈತ್ರಿಕೂಟದಲ್ಲಿ ಸೀಟ್ ಹಂಚಿಕೆ ಮತ್ತು ಅಧಿಕಾರ ಹಂಚಿಕೆಯ ಮಾತುಗಳು ಕೇಳಿ ಬರುತ್ತಿದ್ದು, ಕಾಂಗ್ರೆಸ್ ಸಂಸದರೊಬ್ಬರು ಸೀಟು ಹಂಚಿಕೆ ಮಾತ್ರವಲ್ಲ, ಅಧಿಕಾರ ಹಂಚಿಕೆಯೂ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಆಡಳಿತಾರೂಢ ಮೈತ್ರಿಕೂಟದ ಭಾಗವಾಗಿ ಕಾಂಗ್ರೆಸ್ ಇರುತ್ತದೆ ಎಂದು ಹೇಳಿದ್ದರೂ, ಕಾಂಗ್ರೆಸ್ ನಾಯಕ ಮಾಣಿಕ್ಯಂ ಟ್ಯಾಗೋರ್, ಅಧಿಕಾರ ಹಂಚಿಕೆಯಾಗಬೇಕು, ಕೇವಲ ಸೀಟು ಅಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ತನ್ನದೇ ಆದ ಮತ ನೆಲೆ ಇರುವುದರಿಂದ ಮೈತ್ರಿ ಇಲ್ಲದೆ ಯಾವುದೇ ಪಕ್ಷವು ರಾಜ್ಯದಲ್ಲಿ ಗೆಲ್ಲಲು ಸಾಧ್ಯವಿಲ್ಲ. ತಮಿಳುನಾಡಿನಲ್ಲಿ ಮೈತ್ರಿ ರಾಜಕೀಯ ಅನಿವಾರ್ಯ, ವಾಸ್ತವ. ಈಗ ಕೇವಲ ಸೀಟು ಹಂಚಿಕೆಯಲ್ಲ, ಅಧಿಕಾರ ಹಂಚಿಕೆಯ ಬಗ್ಗೆ ಚರ್ಚಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಇನ್ನೂ ತಮ್ಮ ಎಕ್ಸ್ ಬರಹದ ಬಗ್ಗೆ ಇಂಡಿಯಾ ಟುಡೇ ಜೊತೆ ಮಾತನಾಡಿದ ಟ್ಯಾಗೋರ್, ಈ ಒತ್ತಾಯವು ತಳಮಟ್ಟದಿಂದ ಬರುತ್ತಿದೆ. ಕಾರ್ಯಕರ್ತರು, ಜನರು ಸರ್ಕಾರದ ಭಾಗವಾಗಬೇಕೆಂದು ಬೇಡಿಕೆ ಇಡುತ್ತಿದ್ದಾರೆ. ಕಾಂಗ್ರೆಸ್ ಭರವಸೆಗಳನ್ನು ನೀಡುತ್ತದೆ, ಅದನ್ನೂ ಪೂರೈಸಬೇಕೆಂದರೆ ನಾವು ಅಧಿಕಾರದಲ್ಲಿರಬೇಕು ಎಂದು ತಿಳಿಸಿದ್ದಾರೆ.
ಕಾಲ ಬದಲಾಗಿದೆ, ನಾವು ಚುನಾವಣಾ ಮೈತ್ರಿಯಲ್ಲಿದ್ದರೆ, ಸರ್ಕಾರದಲ್ಲೂ ಇರಬೇಕು. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಮೈತ್ರಿ ಪಕ್ಷಗಳ ಜೊತೆ ಅಧಿಕಾರ ಹಂಚಿಕೊಂಡಿದೆ. ಅದು ರಾಜ್ಯಗಳಲ್ಲಿಯೂ ಪುನರಾವರ್ತಿಸಬೇಕಿದೆ ಎಂದಿದ್ದಾರೆ.
ಕಾಂಗ್ರೆಸ್ ಅನ್ನು ನೈಸರ್ಗಿಕ ಮಿತ್ರ ಎಂದು ಬಣ್ಣಿಸಿದ ಟಿವಿಕೆ
ಚುನಾವಣೆಗೂ ರಾಜಕೀಯ ಸಮೀಕರಣಗಳು ಬದಲಾವಣೆಯಾಗುತ್ತಿರುವ ಮಧ್ಯೆಯೂ ಕಾಂಗ್ರೆಸ್ ಡಿಎಂಕೆ ಮೈತ್ರಿಕೂಟದಿಂದ ಹೊರಹೋಗಲ್ಲ ಎಂದು ಹೇಳಿದೆ. ಆದ್ಯಾಗೂ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವೂ ಕಾಂಗ್ರೆಸ್ ಅನ್ನು ನೈಸರ್ಗಿಕ ಮಿತ್ರ ಎಂದು ಕರೆದಿದೆ.
ಟಿವಿಕೆ ವಕ್ತಾರ ಫೆಲಿಕ್ಸ್ ಜೆರಾಲ್ಡ್ ಮಾತನಾಡಿ, ವಿಜಯ್ ಮತ್ತು ರಾಹುಲ್ ಗಾಂಧಿ ಸ್ನೇಹಿತರು, ಕಾಂಗ್ರೆಸ್ ಟಿವಿಕೆ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿದೆ. ಆದರೆ ತಮಿಳುನಾಡು ಕಾಂಗ್ರೆಸ್ ನಾಯಕತ್ವದೊಳಗಿನ ಆಂತರಿಕ ಹಿತಾಸಕ್ತಿಗಳು ಮಾತುಕತೆಗಳನ್ನು ವಿಳಂಬಗೊಳಿಸಬಹುದು ಎಂದು ಹೇಳಿದ್ದಾರೆ (ಏಜೆನ್ಸೀಸ್).