Shashi Tharoor | ಕಾಂಗ್ರೆಸ್ ಸಂಸದ ಶಶಿ ತರೂರ್ 
ದೇಶ

ಕ್ರಿಶ್ಚಿಯನ್ನರ ಮೇಲೆ ಹಲ್ಲೆ..ಇದು ದೇಶದ ಸಂಸ್ಕೃತಿ ಮೇಲಿನ ದಾಳಿ ಎಂದು ಸಂಸದ ತರೂರ್ ಕಿಡಿ​ | Shashi Tharoor

ತಿರುವನಂತಪುರಂ: ಕ್ರಿಸ್‌ಮಸ್‌ಗೆ ಹಬ್ಬದ ಸಂದರ್ಭದಲ್ಲಿ, ಕ್ರಿಶ್ಚಿಯನ್ನರ ಮೇಲೆ ನಡೆದ ದಾಳಿಯ ವರದಿಗಳನ್ನು ಉಲ್ಲೇಖಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಸಂಪ್ರದಾಯಗಳ ಮೇಲೆ ದಾಳಿಯಾದಾಗ, ಅದು ನಮ್ಮೆಲ್ಲರ ಮೇಲೆ ದಾಳಿಯಾದಂತೆ ಎಂದು ಹೇಳಿಕೆ ನೀಡಿದ್ದಾರೆ.
ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ತರೂರ್​, ಈ ವರ್ಷದ ಕ್ರಿಸ್‌ಮಸ್ ಹಬ್ಬವು ಭಾರತದ ಕೆಲವು ಭಾಗಗಳಲ್ಲಿ ಕ್ರಿಶ್ಚಿಯನ್ನರಿಗೆ ಭಯ ಮತ್ತು ಆತಂಕ ತಂದಿದೆ, ಇಂತಹ ಘಟನೆಗಳು ಕೇವಲ ಒಂದು ಸಮುದಾಯದ ಮೇಲೆ ಅಲ್ಲ, ದೇಶದ ಸಂಸ್ಕೃತಿಯ ಮೇಲಿನ ದಾಳಿಯಾಗಿದೆ ಎಂದಿದ್ದಾರೆ.

ದೇಶ್ಯಾದ್ಯಂತ ನಡೆದ ಗದ್ದಲಗಳು..

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿನ ಘಟನೆ ಉಲ್ಲೇಖಿಸಿರುವ ತರೂರ್, ಪಾಲಕ್ಕಾಡ್‌ನ ಪುದುಶ್ಶೇರಿಯಲ್ಲಿ ಕ್ರಿಸ್‌ಮಸ್ ಕರೋಲ್ ಗುಂಪಿನ ಮೇಲೆ ಬಿಜೆಪಿ ಕಾರ್ಯಕರ್ತ ಎಂದು ಹೇಳಲಾದ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾನೆ, ಆಚರಣೆಯಲ್ಲಿ ಭಾಗವಹಿಸುವವರನ್ನು ಥಳಿಸಿ ಸಂಗೀತ ವಾದ್ಯಗಳನ್ನು ನಾಶಪಡಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ನಡೆಯನ್ನು ಜಾತ್ಯತೀತ ಸಂಪ್ರದಾಯದ ಮೇಲಿನ ದಾಳಿ ಎಂದು ಕರೆದ ತರೂರ್, ಈ ಘಟನೆ ರಾಜ್ಯವನ್ನು ಆಘಾತಗೊಳಿಸಿದೆ ಎಂದು ಹೇಳಿದರು. ಇತರ ರಾಜ್ಯಗಳ ವರದಿಗಳಿಂದ ಕಳವಳ ಹೆಚ್ಚಾಗಿದ್ದು, ರಾಯ್‌ಪುರ (ಛತ್ತೀಸ್‌ಗಢ) ಮಾಲ್‌ನಲ್ಲಿ ಸಾಂತಾಕ್ಲಾಸ್ ಪ್ರತಿಮೆಯ ಧ್ವಂಸ, ಜಬಲ್‌ಪುರದಲ್ಲಿ ಅಂಧ ಕ್ರಿಶ್ಚಿಯನ್ ಹುಡುಗಿಯ ಮೇಲೆ ಹಲ್ಲೆ ಮತ್ತು ಉತ್ತರ ಪ್ರದೇಶದ ಚರ್ಚ್‌ನಲ್ಲಿ ಪ್ರಾರ್ಥನೆಯನ್ನು ಅಡ್ಡಿಪಡಿಸುವ ಪ್ರಯತ್ನ ಸೇರಿದಂತೆ ಇತರ ರಾಜ್ಯಗಳ ವರದಿಗಳಿಂದ ಕೇರಳದಲ್ಲಿ ಆತಂಕ ಹೆಚ್ಚಾಗಿದೆ ಎಂದರು.
ಭಾರತದಲ್ಲಿ ಕ್ರಿಶ್ಚಿಯನ್ ಸಮುದಾಯವು ಭಯ ಮತ್ತು ಆತಂಕ'ದ ನಡುವೆ ಈ ವರ್ಷದ ಕ್ರಿಸ್‌ಮಸ್ ಆಚರಿಸುತ್ತಿದೆ ಎಂದು ಆರ್ಚ್‌ಬಿಷಪ್ ನೆತ್ಯೊ ಮಿಡ್‌ನೈಟ್ ಮಾಸ್ ಸಮಯದಲ್ಲಿ ಹೇಳಿದ್ದನ್ನು ಕೇಳಿ ದುಖಃವಾಯಿತು, ಮಣಿಪುರ ಮತ್ತು ಉತ್ತರ ಭಾರತದಲ್ಲಿ ಕಂಡುಬರುತ್ತಿರುವ ಹಿಂಸಾಚಾರವು ಕೇರಳದ ಬಾಗಿಲನ್ನು ತಟ್ಟುತ್ತಿದೆ ಎಂದು ಹೇಳಿದರು. ಈ ಹಿಂದೆ ತಾವು ಸಾಂಪ್ರದಾಯಿಕವಾಗಿ ಕ್ರಿಸ್‌ಮಸ್ ಮುನ್ನಾದಿನ ಅನೇಕ ಚರ್ಚ್‌ಗಳಿಗೆ ಭೇಟಿ ನೀಡುವುದಾಗಿ ಹೇಳಿಕೊಂಡಿದ್ದು, ಆದರೆ ಈ ವರ್ಷ ದೆಹಲಿಯಿಂದ ವಿಮಾನ ವಿಳಂಬವಾದ ಹಿನ್ನಲೆಯಲ್ಲಿ ನಿರೀಕ್ಷೆಯಂತೆ ಎಲ್ಲಾ ಕಡೆ ತೆರಳಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಕ್ಷಣೆ ಎನ್ನುವುದು ಕರ್ತವ್ಯ...

ಸರ್ಕಾರವು ಮೌನ ಮುರಿಯಬೇಕು ಎಂದು ಒತ್ತಾಯಿಸಿರುವ ತರೂರ್, ನಾಗರಿಕರ ರಕ್ಷಣೆ ಎನ್ನುವುದು ಔದಾರ್ಯವಲ್ಲ, ಬದಲಾಗಿ ಕರ್ತವ್ಯ ಎಂಬ ಕಾರ್ಡಿನಲ್ ಅವರ ಮಾತುಗಳನ್ನು, ನವ ಭಾರತದ ಕಲ್ಪನೆಯು ಪ್ರಾರ್ಥನೆ ಮಾಡುವಾಗ ಸಮುದಾಯಗಳು ಭಯದಿಂದ ವಾಸಿಸುವ ಸ್ಥಳವಾಗಿರಬಾರದು ಎಂಬ ಎಚ್ಚರಿಕೆಯನ್ನು ಸಹ ಉಲ್ಲೇಖಿಸಿದ್ದಾರೆ.
ಕೇರಳದ ಅಂತರ-ಧರ್ಮೀಯ ಸಾಮರಸ್ಯದ ಇತಿಹಾಸವನ್ನು ನೆನಪಿಸಿಕೊಂಡಿರುವ ತರೂರ್, ರಾಜ್ಯದಲ್ಲಿ ಕ್ರಿಶ್ಚಿಯನ್ ಧರ್ಮವು ಸುಮಾರು ಎರಡು ಸಹಸ್ರಮಾನಗಳಷ್ಟು ಹಳೆಯದು, ಅದು ಸಾಮಾಜಿಕ ರಚನೆಯ ಕೇಂದ್ರಬಿಂದುವಾಗಿದೆ. ಕರೋಲ್ ಗುಂಪಿನ ಮೇಲಿನ ದಾಳಿಯ ಕುರಿತಾಗಿ ಅಧಿಕಾರಿಗಳು ತ್ವರಿತ ಮತ್ತು ನಿಷ್ಪಕ್ಷಪಾತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು(ಏಜೆನ್ಸೀಸ್​).