ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ
ನವದೆಹಲಿ: ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ(Marco Rubio), ವಿದೇಶದಲ್ಲಿ ನಡೆಯುತ್ತಿರುವ ಭಾರತೀಯರ ಮೇಲಿನ ಜನಾಂಗೀಯ ದಾಳಿಗಳ ಬಗ್ಗೆ ಮಾತನಾಡಿದ್ದು, ಪ್ರಪಂಚದ ಪ್ರತಿಯೊಂದು ದೇಶದಲ್ಲೂ ಧರ್ಮಾಂಧರಿದ್ದಾರೆ ಮತ್ತು ಅವರನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ನವದೆಹಲಿಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಕೆಲವರು ಆನ್‌ಲೈನ್‌ನಲ್ಲಿ ಅಥವಾ ಬೇರೆಡೆ ಜನಾಂಗೀಯ ಕಾಮೆಂಟ್‌ಗಳನ್ನು ಮಾಡುತ್ತಾರೆ. ಯಾಕೆಂದರೆ ಪ್ರಪಂಚದ ಪ್ರತಿಯೊಂದು ದೇಶದಲ್ಲೂ ಮೂರ್ಖ ಜನರಿದ್ದಾರೆ. ಅಮೆರಿಕದಲ್ಲಿ ಮಾತ್ರವಲ್ಲ, ಇಲ್ಲಿಯೂ ಅಂತಹ ಜನರು ಇರಬಹುದು. ಅವರು ಈ ರೀತಿಯ ಹುಚ್ಚುತನದ ಕಾಮೆಂಟ್‌ಗಳನ್ನು ಮಾಡುತ್ತಲೇ ಇರುತ್ತಾರೆ. ಅವರನ್ನು ನಾವು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಅಮೆರಿಕ ಯಾವಾಗಲೂ ಎಲ್ಲರನ್ನೂ ಸಮಾನವಾಗಿ ಸ್ವಾಗತಿಸುವ ದೇಶವಾಗಿದೆ. ಮತ್ತು ವಿಶ್ವದ ನಾನಾ ದೇಶಗಳ ಜನರಿಂದ ಅಮೇರಿಕನ್ ಸಂಸ್ಕೃತಿ ಶ್ರೀಮಂತವಾಗಿದೆ. ಅಮೆರಿಕನ್ ಜೀವನವನ್ನು ಅಳವಡಿಸಿಕೊಂಡ ಭಾರತೀಯರು ಅಮೆರಿಕ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಹೊಸ ವೀಸಾ ನಿಯಮಗಳ ಕುರಿತು ಸ್ಪಷ್ಟೀಕರಣ
ಅಮೆರಿಕದಲ್ಲಿ ಕಾನೂನುಬದ್ಧವಾಗಿ ವಾಸಿಸುವ ವಲಸಿಗರು ಶಾಶ್ವತ ನಿವಾಸಕ್ಕೆ (ಗ್ರೀನ್ ಕಾರ್ಡ್/ಶಾಶ್ವತ ನಿವಾಸ) ಅರ್ಜಿ ಸಲ್ಲಿಸಲು ಬಯಸಿದರೆ ಮೊದಲು ದೇಶವನ್ನು ತೊರೆದು ವಿದೇಶದಿಂದ ಅರ್ಜಿ ಸಲ್ಲಿಸಬೇಕು ಎಂಬ ಅಮೆರಿಕದ ಹೊಸ ನೀತಿಗೆ ಪ್ರತಿಕ್ರಿಯಿಸಿದ ರೂಬಿಯೋ, ಈ ಬದಲಾವಣೆಗಳು ಭಾರತವನ್ನು ಮಾತ್ರ ಗುರಿಯಾಗಿಸಿಕೊಂಡಿಲ್ಲ, ಬದಲಾಗಿ ತಮ್ಮ ವಲಸೆ ನೀತಿಯನ್ನು ಆಧುನೀಕರಿಸುವ ಪ್ರಕ್ರಿಯೆಯ ಭಾಗವಾಗಿ ಜಾಗತಿಕವಾಗಿ ಜಾರಿಗೆ ತರಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಕಳೆದ ಕೆಲವು ವರ್ಷಗಳಲ್ಲಿ 20 ಮಿಲಿಯನ್‌ಗಿಂತಲೂ ಹೆಚ್ಚು ಜನರು ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾರೆ. ಆ ಬಿಕ್ಕಟ್ಟನ್ನು ಪರಿಹರಿಸಲು ಈ ಸುಧಾರಣೆಗಳನ್ನು ತರಲಾಗಿದೆ. ಯಾರು, ಯಾವಾಗ ಮತ್ತು ಎಷ್ಟು ಜನರು ದೇಶವನ್ನು ಪ್ರವೇಶಿಸಬಹುದು ಎಂಬುದರ ಮೇಲೆ ವ್ಯವಸ್ಥೆಯನ್ನು ಸುವ್ಯವಸ್ಥಿತಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).