Vlogging  
ದೇಶ

ವ್ಲಾಗ್ ಮಾಡಲು ಬರಲ್ಲ, ಆದ್ರೂ ಪ್ರಯತ್ನಿಸ್ತೀನಿ: ಒಂದೇ ವಿಡಿಯೋದಿಂದ ಇಂಟರ್ನೆಟ್ ಸೆನ್ಸೇಷನ್ ಆದ 70ರ ಹರೆಯದ ವೃದ್ಧ!

ಲಖನೌ: ಕಲೆ ಮತ್ತು ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಉತ್ತರ ಪ್ರದೇಶದ 70 ವರ್ಷದ ವೃದ್ಧರೊಬ್ಬರು ಸಾಬೀತುಪಡಿಸಿದ್ದಾರೆ. ವಿನೋದ್ ಕುಮಾರ್ ಶರ್ಮಾ ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ತಮ್ಮ ಚೊಚ್ಚಲ 'ವ್ಲಾಗ್' (Vlog) ವಿಡಿಯೋ ಈಗ ಜಗತ್ತಿನಾದ್ಯಂತ ಕೋಟ್ಯಂತರ ಜನರ ಹೃದಯ ಗೆದ್ದಿದೆ.
3 ದಿನದಲ್ಲಿ 3 ಕೋಟಿ ವೀಕ್ಷಣೆ! @instauncle_9 ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶರ್ಮಾ ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ಅಪ್‌ಲೋಡ್ ಆದ ಕೇವಲ 72 ಗಂಟೆಗಳಲ್ಲಿ ಬರೋಬ್ಬರಿ 3 ಕೋಟಿ (30 ಮಿಲಿಯನ್) ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅಲ್ಲದೆ, 20 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.

ವಿನೋದ್ ಶರ್ಮಾ ಅವರ ಪ್ರಾಮಾಣಿಕ ನುಡಿ

ವಿಡಿಯೋದಲ್ಲಿ ಅತ್ಯಂತ ವಿನಮ್ರವಾಗಿ ಮಾತನಾಡಿರುವ ಶರ್ಮಾ, "ನನ್ನ ಹೆಸರು ವಿನೋದ್ ಕುಮಾರ್ ಶರ್ಮಾ. ನಾನು ಉತ್ತರ ಪ್ರದೇಶದವನು. ನನಗೆ ವ್ಲಾಗ್ ಮಾಡಲು ಬರುವುದಿಲ್ಲ... ಆದರೆ ನಾನು ಪ್ರಯತ್ನಿಸುತ್ತಿದ್ದೇನೆ," ಎಂದು ಹಿಂದಿಯಲ್ಲಿ ಹೇಳಿದ್ದಾರೆ. ಅವರ ಈ ಮುಗ್ಧತೆ ಮತ್ತು ಹೊಸದನ್ನು ಕಲಿಯುವ ಹಂಬಲಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ಖ್ಯಾತ ನಾಮರಿಂದಲೂ ಪ್ರಶಂಸೆ

ಶರ್ಮಾ ಅವರ ಈ ಧೈರ್ಯವನ್ನು ನೋಡಿ ಬಾಲಿವುಡ್ ನಟ ಅನುಪಮ್ ಖೇರ್ ಮತ್ತು ಟಿವಿ ತಾರೆ ಜಯ್ ಭಾನುಶಾಲಿ ಸೇರಿದಂತೆ ಹಲವು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ವಯಸ್ಸು ಕೇವಲ ಒಂದು ಸಂಖ್ಯೆ ಅಷ್ಟೇ, ನಾವು ನಿಮ್ಮೊಂದಿಗಿದ್ದೇವೆ," ಎಂದು ಸಾವಿರಾರು ಯುವಕರು ಅವರಿಗೆ ಬೆಂಬಲ ಸೂಚಿಸಿದ್ದಾರೆ.

ರಾತ್ರೋರಾತ್ರಿ ಹೆಚ್ಚಿದ ಫಾಲೋವರ್ಸ್

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿನೋದ್ ಕುಮಾರ್ ಅವರ ಫಾಲೋವರ್ಸ್ ಸಂಖ್ಯೆ ದಿಢೀರನೆ 64,000 ದಾಟಿದೆ. ಇಂದಿನ ಕಾಲದಲ್ಲಿ ಅತಿ ಹೆಚ್ಚು ಎಡಿಟಿಂಗ್ ಮಾಡಿದ ವಿಡಿಯೋಗಳ ಮಧ್ಯೆ, ಶರ್ಮಾ ಅವರ ಸರಳ ಮತ್ತು ನೈಜ ಮಾತುಗಳು ಜನರಿಗೆ ತಮ್ಮ ಮನೆಯ ಹಿರಿಯರನ್ನು ನೆನಪಿಸುವಂತೆ ಮಾಡಿದೆ.ಯಾವುದೇ ವೃತ್ತಿಪರ ತರಬೇತಿ ಇಲ್ಲದೆ, ಕೇವಲ ಆತ್ಮವಿಶ್ವಾಸದಿಂದ ಸಾಮಾಜಿಕ ಜಾಲತಾಣಕ್ಕೆ ಪದಾರ್ಪಣೆ ಮಾಡಿದ ಶರ್ಮಾ ಅವರ ಈ ಯಶೋಗಾಥೆ ಈಗ ಡಿಜಿಟಲ್ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿದೆ,(ಏಜೆನ್ಸೀಸ್).