ದಳಪತಿ ವಿಜಯ್ ಸರ್ಕಾರ ರಚನೆಗೆ ಹಕ್ಕು ಮಂಡಿಸಿರುವುದು. 
ದೇಶ

ಯಾವುದೇ ಒತ್ತಡಕ್ಕೆ ಮಣಿದಿಲ್ಲ; ಬಹುಮತ ಸಾಬೀತುಪಡಿಸುವವರಿಗೆ ಸರ್ಕಾರ ರಚನೆಗೆ ಆಹ್ವಾನ; ತಮಿಳುನಾಡು ರಾಜ್ಯಪಾಲರು | Governor

ಚೆನ್ನೈ: ತಮಿಳುನಾಡಿನಲ್ಲಿ ರಾಜಕೀಯ ಹೈಡ್ರಾಮ ಮುಂದುವರೆದಿದ್ದು, ಸರ್ಕಾರ ರಚಿಸಲು ಬೇಕಾಗಿರುವ 118 ಸಂಖ್ಯೆಯ ಶಾಸಕರ ಬೆಂಬಲವನ್ನು ತೋರಿಸುವ ಯಾವುದೇ ಪಕ್ಷಕ್ಕೂ ಸರ್ಕಾರ ರಚಿಸಲು ಆಹ್ವಾನಿಸಲಾಗುವುದು ಎಂದು ತಮಿಳುನಾಡು ರಾಜ್ಯಪಾಲ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ ಎಂದು ಶುಕ್ರವಾರ(ಮೇ 08) ವರದಿಯಾಗಿದೆ.
ತಮಿಳುನಾಡು ಚುನಾವಣೆಯಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ದಶಕಗಳ ಕಾಲದ ಪ್ರಾಬಲ್ಯವನ್ನು ಸೋಲಿಸಿ 108 ಸ್ಥಾನ ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ನಟ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಸರ್ಕಾರ ರಚಿಸಲು ನಿರಾಕರಿಸಿದ ರಾಜ್ಯಪಾಲ ವಿಶ್ವನಾಥ್ ರಾಜೇಂದ್ರ ಅರ್ಲೇಕರ್ ವಿರುದ್ಧ ಟೀಕೆ ವ್ಯಕ್ತವಾಗುತ್ತಿದೆ.
ಸಂಪ್ರದಾಯದ ಪ್ರಕಾರ, ಏಕೈಕ ಅತಿದೊಡ್ಡ ಪಕ್ಷವನ್ನು ರಾಜ್ಯಪಾಲರು ಸರ್ಕಾರ ರಚಿಸಲು ಮತ್ತು ಸದನದಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸಲು ಆಹ್ವಾನಿಸುತ್ತಾರೆ. ಈ ಹಿನ್ನೆಲೆ ಎರಡು ದಿನ ರಾಜ್ಯಪಾಲರ ಕಚೇರಿಗೆ ಭೇಟಿ ನೀಡಿದ್ದ ವಿಜಯ್, ಸರ್ಕಾರ ರಚಿಸುವ ಹಕ್ಕು ಮಂಡಿಸಿದ್ದರು. ಆದರೆ ರಾಜ್ಯಪಾಲರು ಕನಿಷ್ಠ 118 ಶಾಸಕರ ಬೆಂಬಲದ ಪುರಾವೆಗಳನ್ನು ಸಲ್ಲಿಸುವಂತೆ ಕೇಳಿ ವಾಪಸ್ ಕಳುಹಿಸಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಜಭವನದ ಮೂಲಗಳು, 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರದೇ ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ. ಸರ್ಕಾರ ರಚಿಸಲು ಹಕ್ಕು ಮಂಡಿಸುವ ಯಾವುದೇ ಪಕ್ಷದಿಂದ ಬೆಂಬಲದ ವಿವರಗಳನ್ನು ಪಡೆಯುವುದು ಸಾಮಾನ್ಯ ಸಾಂವಿಧಾನಿಕ ಪ್ರಕ್ರಿಯೆಯ ಭಾಗವಾಗಿದೆ.
ರಾಜ್ಯಪಾಲರು ಕೇಂದ್ರದ ಒತ್ತಡಕ್ಕೆ ಮಣಿದು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪವನ್ನು ನಿರಾಕರಿಸಿದ್ದು, ಸಾಂವಿಧಾನಿಕ ಮಾನದಂಡಗಳಿಗೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ರಾಜಭವನ ಹೇಳಿದೆ (ಏಜೆನ್ಸೀಸ್).