ಅಲ್ಪಾವಧಿ ಲಾಭಕ್ಕಲ್ಲ, ಇವರಿಬ್ಬರ ಕಣ್ಣಿಟ್ಟಿರುವುದು ಆ ದೂರದ' ಗುರಿಯ ಮೇಲೆ! ಮೋದಿ-ಟ್ರಂಪ್ ಬಗ್ಗೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ರುಬಿಯೊ ಹೇಳಿದ್ದೇನು? 
ದೇಶ

ಅಲ್ಪಾವಧಿ ಲಾಭಕ್ಕಲ್ಲ, ಇವರಿಬ್ಬರು ಕಣ್ಣಿಟ್ಟಿರುವುದು ಆ ದೂರದ' ಗುರಿಯ ಮೇಲೆ! ಮೋದಿ-ಟ್ರಂಪ್ ಬಗ್ಗೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ರುಬಿಯೊ ಹೇಳಿದ್ದೇನು? Marco Rubio

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೇವಲ ಅಲ್ಪಾವಧಿಯ ಲಾಭಕ್ಕೆ ಕೆಲಸ ಮಾಡುವವರಲ್ಲ. ಅವರಿಬ್ಬರೂ ದೀರ್ಘಾವಧಿಯ ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿರುವ ಅತ್ಯಂತ ಗಂಭೀರ ರಾಜತಾಂತ್ರಿಕ ನಾಯಕರು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ (Marco Rubio) ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಭಾರತ ಮತ್ತು ಅಮೆರಿಕ ನಡುವಿನ ಕಾರ್ಯತಾಂತ್ರಿಕ ಬಾಂಧವ್ಯವು ಹಿಂದೆಂದಿಗಿಂತಲೂ ಹೆಚ್ಚು ದೃಢವಾಗಿ ಮತ್ತು ಸ್ಥಿರವಾಗಿ ಮುನ್ನಡೆಯುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.
ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ನಾಲ್ಕು ದಿನಗಳ ಅಧಿಕೃತ ಪ್ರವಾಸಕ್ಕಾಗಿ ಶನಿವಾರ ಭಾರತಕ್ಕೆ ಆಗಮಿಸಿರುವ ಮಾರ್ಕೊ ರುಬಿಯೊ, ನವದೆಹಲಿಯಲ್ಲಿ ಅಮೆರಿಕ ರಾಯಭಾರ ಕಚೇರಿಯ ನೂತನ ಅನೆಕ್ಸ್ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದಾರೆ.

ಒಂದು ಗಂಟೆಗೂ ಹೆಚ್ಚು ಕಾಲ ಮೋದಿ-ರುಬಿಯೊ ರಹಸ್ಯ ಮುಖಾಮುಖಿ!

ನವದೆಹಲಿಗೆ ಆಗಮಿಸಿದ ಕೆಲವೇ ಗಂಟೆಗಳಲ್ಲಿ ಮಾರ್ಕೊ ರುಬಿಯೊ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಒಂದು ಗಂಟೆಗೂ ಹೆಚ್ಚು ಕಾಲ ಸುದೀರ್ಘ ಜಂಟಿ ಮಾತುಕತೆ ನಡೆಸಿದರು. ಈ ಉನ್ನತ ಮಟ್ಟದ ಸಭೆಯಲ್ಲಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರವಾಗಿ ಮಾರ್ಕೊ ರುಬಿಯೊ ಅವರು ಪ್ರಧಾನಿ ಮೋದಿಯವರಿಗೆ ಶ್ವೇತಭವನಕ್ಕೆ ಭೇಟಿ ನೀಡುವಂತೆ ಅಧಿಕೃತ ಆಹ್ವಾನ ಪತ್ರಿಕೆಯನ್ನು ಹಸ್ತಾಂತರಿಸಿದ್ದಾರೆ.
ಭೇಟಿಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡ ಪ್ರಧಾನಿ ಮೋದಿ, ಅಮೆರಿಕ ವಿದೇಶಾಂಗ ಕಾರ್ಯದರ್ಶಿಗಳೊಂದಿಗೆ ಅತ್ಯಂತ ಫಲಪ್ರದ ಮಾತುಕತೆ ನಡೆದಿದೆ. ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ, ಜಾಗತಿಕ ಭದ್ರತೆ ಹಾಗೂ ಭಾರತ-ಯುಎಸ್ ಸಮಗ್ರ ಜಾಗತಿಕ ಕಾರ್ಯತಾಂತ್ರಿಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ನಾವು ಸುದೀರ್ಘವಾಗಿ ಚರ್ಚಿಸಿದ್ದೇವೆ ಎಂದು ತಿಳಿಸಿದ್ದಾರೆ.

ನಾಯಕರ ನಡುವಿನ ಆ ಕನೆಕ್ಷನ್' ಅದ್ಭುತವಾಗಿದೆ!

ಟ್ರಂಪ್ ಮತ್ತು ಮೋದಿ ನಡುವಿನ ವೈಯಕ್ತಿಕ ಒಡನಾಟವನ್ನು ಉಲ್ಲೇಖಿಸಿದ ರುಬಿಯೊ, ಇದು ಟ್ರಂಪ್ ಅವರ ಮೊದಲ ಅವಧಿಯ ಆಡಳಿತದ ಅವಧಿಯಲ್ಲೇ ಆರಂಭವಾದ ಗಾಢವಾದ ವೈಯಕ್ತಿಕ ಸಂಬಂಧವಾಗಿದೆ. ಟ್ರಂಪ್ ಭಾರತಕ್ಕೆ ಭೇಟಿ ನೀಡಿದ್ದಾಗ ಬೆಳೆದ ಈ ಸ್ನೇಹ, ಈಗ ಅವರ ಎರಡನೇ ಅವಧಿಯ ಆಡಳಿತದಲ್ಲೂ ಮುಂದುವರಿದಿದೆ. ನೀವೇ ಆ ಇಬ್ಬರು ನಾಯಕರ ನಡುವಿನ ಬಾಂಧವ್ಯವನ್ನು ಸೂಕ್ಷ್ಮವಾಗಿ ಗಮನಿಸಬಹುದು. ಜಾಗತಿಕ ರಾಜಕಾರಣದಲ್ಲಿ ಇಬ್ಬರು ಪ್ರಭಾವಿ ನಾಯಕರ ನಡುವಿನ ಇಂತಹ ವೈಯಕ್ತಿಕ ಕನೆಕ್ಷನ್ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದರು.

ಕೋಲ್ಕತ್ತಾದಿಂದ ಆರಂಭವಾದ ಪ್ರವಾಸ: ಜೈಪುರ, ಆಗ್ರಾಕ್ಕೂ ಭೇಟಿ

ಶನಿವಾರ ಮುಂಜಾನೆ ಕೋಲ್ಕತ್ತಾಗೆ ಆಗಮಿಸುವ ಮೂಲಕ ಮಾರ್ಕೊ ರುಬಿಯೊ ತಮ್ಮ 4 ದಿನಗಳ ಭಾರತ ಪ್ರವಾಸವನ್ನು ಆರಂಭಿಸಿದರು. ಅಲ್ಲಿ ಅವರು ಸಂತ ಮದರ್ ತೆರೆಸಾ ಅವರ ಮಿಷನರೀಸ್ ಆಫ್ ಚಾರಿಟಿಯ ಪ್ರಧಾನ ಕಚೇರಿಯಾದ 'ಮದರ್ ಹೌಸ್'ಗೆ ಭೇಟಿ ನೀಡಿ ಗೌರವ ಸಲ್ಲಿಸಿದರು. ನವದೆಹಲಿಯಲ್ಲಿ ಭಾನುವಾರ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಅವರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ತದನಂತರ ಮಂಗಳವಾರ ದೆಹಲಿಯಲ್ಲಿ ನಡೆಯಲಿರುವ ಅತ್ಯಂತ ಮಹತ್ವದ ಕ್ವಾಡ್ ವಿದೇಶಾಂಗ ಸಚಿವರ ಸಭೆಯಲ್ಲೂ ರುಬಿಯೊ ಭಾಗವಹಿಸಲಿದ್ದಾರೆ. ಈ ಪ್ರವಾಸದ ಭಾಗವಾಗಿ ಅವರು ಆಗ್ರಾ ಮತ್ತು ಜೈಪುರಕ್ಕೂ ಭೇಟಿ ನೀಡಲಿದ್ದಾರೆ.
ಭಾರತದೊಂದಿಗೆ ನಾವು ಕೆಲಸ ಮಾಡಬೇಕಾದ ಹಲವು ಪ್ರಮುಖ ವಿಷಯಗಳಿವೆ. ಭಾರತವು ನಮ್ಮ ಅತ್ಯುತ್ತಮ ಮಿತ್ರ ಮತ್ತು ಬಲಿಷ್ಠ ಪಾಲುದಾರ ರಾಷ್ಟ್ರವಾಗಿದೆ. ನಾವು ಅವರೊಂದಿಗೆ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದೇವೆ, ಹೀಗಾಗಿ ಈ ಪ್ರವಾಸ ಅತ್ಯಂತ ನಿರ್ಣಾಯಕವಾಗಿದೆ ಎಂದು ಮಾರ್ಕೊ ರುಬಿಯೊ ಹೇಳಿದ್ದಾರೆ.
ಇತ್ತೀಚೆಗೆ ಭಾರತೀಯ ಸರಕುಗಳ ಮೇಲೆ ಅಮೆರಿಕ ವಿಧಿಸಿರುವ ಸುಂಕಗಳು ಮತ್ತು ಅದರಿಂದ ಉಂಟಾಗಿರುವ ವ್ಯಾಪಾರ ಉದ್ವಿಗ್ನತೆಗಳ ನಡುವೆಯೇ ಈ ಪ್ರವಾಸ ಆಯೋಜನೆಗೊಂಡಿರುವುದು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಉಭಯ ನಾಯಕರೂ ವೈಯಕ್ತಿಕವಾಗಿ ಈ ಸಂಬಂಧವನ್ನು ಗಟ್ಟಿಗೊಳಿಸಲು ಬದ್ಧರಾಗಿರುವುದರಿಂದ ಈ ಭೇಟಿಯು ಮುಂಬರುವ ದಿನಗಳಲ್ಲಿ ಜಾಗತಿಕ ಆರ್ಥಿಕತೆ ಮತ್ತು ಭದ್ರತೆಯ ಮೇಲೆ ದೊಡ್ಡ ಪ್ರಭಾವ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ,(ಏಜೆನ್ಸೀಸ್​).