TVK Vijay | ಟಿವಿಕೆ ಮುಖ್ಯಸ್ಥ ವಿಜಯ್
ಚೆನ್ನೈ: ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಮತ್ತು ಯಾರಿಗೂ ತಲೆ ಬಾಗುವುದಿಲ್ಲ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಹೇಳಿಕೆ ನೀಡಿರುವುದು ದೇಶ್ಯಾದ್ಯಂತ ಸದ್ದು ಮಾಡಿದೆ. ಕರೂರ್ ಕಾಲ್ತುಳಿತ ಪ್ರಕರಣ ವಿಷಯವಾಗಿ ಕೇಂದ್ರೀಯ ತನಿಖಾ ದಳ (ಸಿಬಿಐ) ವಿಜಯ್ರನ್ನು ವಿಚಾರಣೆ ನಡೆಸಿದ ಕೆಲ ದಿನಗಳ ಬಳಿಕ ಈ ಹೇಳಿಕೆಗಳು ಹೊರ ಬಿದ್ದಿವೆ.
ಮಾಮಲ್ಲಪುರಂನಲ್ಲಿ ನಡೆದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪಕ್ಷದ ಪದಾಧಿಕಾರಿಗಳ ಕಾರ್ಯತಂತ್ರ ಸಭೆಯಲ್ಲಿ ಮಾತನಾಡಿದ ವಿಜಯ್, ಇದು ಕೇವಲ ಚುನಾವಣೆಯಲ್ಲ, ಪ್ರಜಾಪ್ರಭುತ್ವದ ಯುದ್ಧ. ನೀವು ಈ ಯುದ್ಧವನ್ನು ಎದುರಿಸುವ ನನ್ನ ಕಮಾಂಡೋಗಳು ಎಂದು ಹೇಳಿದರು.
ರಾಜಕೀಯದಲ್ಲಿರುವವರು ಅಣ್ಣಾ ಅವರನ್ನು ಮರೆತಿದ್ದಾರೆ, ಅವರ ಪಕ್ಷದ ಹೆಸರಿನಲ್ಲಿ ಅಣ್ಣಾ ಇದ್ದಾರೆ, ಇಲ್ಲಿ ಅಣ್ಣಾ ಎಂದರೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ದ್ರಾವಿಡ ರಾಜಕೀಯದ ಪ್ರಮುಖ ಸಿದ್ಧಾಂತವಾದಿ ಸಿಎನ್ ಅಣ್ಣಾದೊರೈ ಅವರನ್ನು ಉಲ್ಲೇಖಿಸುತ್ತಾರೆ.
ಅಧಿಕಾರದಲ್ಲಿರುವ ಪಕ್ಷಗಳಿಗೆ ಮತಗಟ್ಟೆಗಳು ನಕಲಿ ಮತ ಕೇಂದ್ರಗಳಾಗಿವೆ, ಪ್ರತಿಯೊಂದು ಮತವನ್ನು ರಕ್ಷಿಸಿ, ಎಲ್ಲರನ್ನೂ ಭೇಟಿ ಮಾಡಿ. ದುಷ್ಟ ಶಕ್ತಿ (ಡಿಎಂಕೆ) ಮತ್ತು ಭ್ರಷ್ಟ ಶಕ್ತಿ (ಎಐಎಡಿಎಂಕೆ) ಯನ್ನು ಎದುರಿಸುವ ಧೈರ್ಯ ಟಿವಿಕೆಗೆ ಮಾತ್ರ ಇದೆ ಎಂದು ವಿಜಯ್ ಹೇಳಿದರು.
ನಾಳೆಯಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದ ವಿಜಯ್,ಮುಂಬರುವ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಬೆಂಬಲವನ್ನು ಒಟ್ಟುಗೂಡಿಸಲು 234 ಕ್ಷೇತ್ರಗಳಲ್ಲಿಯೂ ಪ್ರವಾಸ ನಡೆಸಲಾಗುವುದು ಎಂದು ಹೇಳಿದರು.
ಮುಂಬರುವ ಚುನಾವಣೆಗೆ ಟಿವಿಕೆ ಇನ್ನೂ ಯಾವುದೇ ಪಕ್ಷದೊಂದಿಗೆ ಮೈತ್ರಿ ಘೋಷಿಸಿಲ್ಲ. ಮೈತ್ರಿಯ ವಿಷಯವಾಗಿ ನಿರ್ಧಾರ ತೆಗೆದುಕೊಳ್ಳುವವರು ವಿಜಯ್ ಮಾತ್ರ, ಯಾವುದೇ ಮಿತ್ರಪಕ್ಷಗಳಿಲ್ಲದೆ ನಾವು ಏಕಾಂಗಿಯಾಗಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಜಯ್ರ ಈ ಹೇಳಿಕೆಯ ಕೇವಲ ಮಾತಲ್ಲ, ಅದು ಮುಂಬರುವ ಚುನಾವಣಾ ಕದನಕ್ಕೆ ಮುನ್ನುಡಿ ಎಂಬಂತೆ ನೋಡಲಾಗುತ್ತಿದೆ, ಸಿಬಿಐ ವಿಚಾರಣೆ ನಟನ ಬಗ್ಗೆ ರಾಜ್ಯಾದ್ಯಂತ ಅನುಕಂಪದ ಅಲೆ ಮೂಡುವಂತೆ ಮಾಡಿದ್ದು, ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಚಿತ್ರನಟರು ದೊಡ್ಡ ಸದ್ದು ಮಾಡಿದ್ದು, ಈಗ ವಿಜಯ್ ಸರದಿ. ಇದರಲ್ಲಿ ವಿಜಯ್ ಯಶಸ್ವಿಯಾಗುತ್ತಾರಾ..? ಕಾದು ನೋಡಬೇಕಿದೆ.
ಸೆಪ್ಟೆಂಬರ್ 27, 2025 ರಂದು ಕರೂರ್‌ನಲ್ಲಿ ನಡೆದ ವಿಜಯ್ ನೇತೃತ್ವದ ಟಿವಿಕೆ (TVK) ರ್ಯಾಲಿಯಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 41 ಜನರು ಸಾವನ್ನಪ್ಪಿದ್ದರು. ನಿಗದಿತ ಸಮಯಕ್ಕಿಂತ ಸುಮಾರು 7 ಗಂಟೆ ತಡವಾಗಿ ವಿಜಯ್ ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಗಿತ್ತು. ಈ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಸಿಬಿಐ (CBI) ನಡೆಸುತ್ತಿದ್ದು, ಇತ್ತೀಚೆಗೆ ವಿಜಯ್ ಅವರನ್ನು ವಿಚಾರಣೆಗೊಳಪಡಿಸಿದೆ(ಏಜೆನ್ಸೀಸ್).