Bankipur Bypoll 
ದೇಶ

ಬಿಜೆಪಿಯ 35 ವರ್ಷದ ಅಧಿಪತ್ಯಕ್ಕೆ ಪ್ರಶಾಂತ್​ ಕಿಶೋರ್​ ಬ್ರೇಕ್​...ಆದರೆ ನಷ್ಟವಾಗಿದ್ದು ಮಾತ್ರ ಆರ್​ಜೆಡಿಗೆ! | Bankipur Bypoll

ಬಿಹಾರದ ಬಂಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ತೀರ್ಪು ರಾಜ್ಯ ರಾಜಕೀಯದಲ್ಲಿ ಒಂದು ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಬಿಜೆಪಿಯ ನೀರಜ್ ಕುಮಾರ್ ಅವರನ್ನು 19,324 ಮತಗಳ ಬೃಹತ್ ಅಂತರದಿಂದ ಸೋಲಿಸುವ ಮೂಲಕ, ಕಳೆದ 35 ವರ್ಷಗಳಿಂದ ಆ ಕ್ಷೇತ್ರದಲ್ಲಿ ನೆಲೆಸಿದ್ದ ಬಿಜೆಪಿಯ ಭದ್ರಕೋಟೆಯನ್ನು ಭೇದಿಸಿದ್ದಾರೆ. ಈ ಕ್ಷೇತ್ರವು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್​ ನವೀನ್ ಕುಟುಂಬದ ಸಾಂಪ್ರದಾಯಿಕ ನೆಲೆ ಎನಿಸಿಕೊಂಡಿತ್ತು.

ಕಳೆದ 20 ವರ್ಷಗಳಿಂದ ನಿತಿನ್ ನವೀನ್ ಮತ್ತು ಅದಕ್ಕೂ ಮುನ್ನ 15 ವರ್ಷಗಳ ಕಾಲ ಅವರ ತಂದೆ ನವೀನ್ ಕಿಶೋರ್ ಪ್ರಸಾದ್ ಸಿನ್ಹಾ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ರಾಜ್ಯಸಭೆಗೆ ಆಯ್ಕೆಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ತೆರವಾದ ಈ ಸ್ಥಾನದಲ್ಲಿ ಶೇಕಡಾ 34.24 ರಷ್ಟು ಕಡಿಮೆ ಮತದಾನವಾಗಿದ್ದರೂ, ಪ್ರಶಾಂತ್ ಕಿಶೋರ್​ರ ಈ ಗೆಲುವು ಬಿಹಾರದ ರಾಜಕೀಯ ಸಮೀಕರಣಗಳನ್ನೇ ಬದಲಾಯಿಸಿದೆ.

ಆರ್‌ಜೆಡಿಗೆ ಅಸ್ತಿತ್ವದ ಪ್ರಶ್ನೆ!..

ಈ ಚುನಾವಣೆಯ ನಿಜವಾದ ಕಥೆ ಬಿಜೆಪಿಯ ಸೋಲಷ್ಟೇ ಅಲ್ಲ, ಬಿಹಾರದ ಪ್ರಮುಖ ವಿಪಕ್ಷವಾದ ರಾಷ್ಟ್ರೀಯ ಜನತಾ ದಳದ ದೊಡ್ಡ ಹಿನ್ನಡೆ. ಆರ್‌ಜೆಡಿ ಅಭ್ಯರ್ಥಿ ರೇಖಾ ಕುಮಾರಿ ಕೇವಲ 14,273 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿದ್ದ ಜನ ಸುರಾಜ್ ಪಾರ್ಟಿ, ಈಗ ಪ್ರಶಾಂತ್ ಕಿಶೋರ್ ಗೆಲುವಿನ ಮೂಲಕ ಬಿಹಾರ ವಿಧಾನಸಭೆಗೆ ಪ್ರವೇಶ ಪಡೆದಿದೆ. ಬಿಜೆಪಿ ರಾಜ್ಯದ ಆಡಳಿತ ಪಕ್ಷವಾಗಿ ಉಳಿದುಕೊಂಡಿದೆಯಾದರೂ, ಆರ್‌ಜೆಡಿಗೆ ಈ ಫಲಿತಾಂಶವು ತನ್ನ ಅಸ್ತಿತ್ವದ ಮೇಲೆಯೇ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿದೆ.

ಕಳೆದ ಮೂರು ದಶಕಗಳಿಂದ ಬಿಹಾರ ರಾಜಕೀಯವು ಲಾಲೂ ಪ್ರಸಾದ್ ಯಾದವ್ ನೇತೃತ್ವದ ಆರ್‌ಜೆಡಿ ಮತ್ತು ನಿತೀಶ್ ಕುಮಾರ್​ ಅವರ ಜೆಡಿಯು ಸುತ್ತಲೇ ಸುತ್ತುತ್ತಿತ್ತು. ಆದರೆ, ಏಪ್ರಿಲ್‌ನಲ್ಲಿ ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು, ಸಾಮ್ರಾಟ್ ಚೌಧರಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚಿಸಿದಾಗ, ವಿಪಕ್ಷ ಸ್ಥಾನದಲ್ಲಿ ಆರ್‌ಜೆಡಿ ಬಲವಾಗಿ ನಿಲ್ಲಬೇಕಿತ್ತು. ರಾಜಕೀಯ ವಿಶ್ಲೇಷಕ ಅಮಿತಾಭ್ ತಿವಾರಿ ಪ್ರಕಾರ, ಆರ್‌ಜೆಡಿ 2010 ರಲ್ಲಿ 22 ಸ್ಥಾನಗಳಿಗೆ ಕುಸಿದಿತ್ತು, ನಂತರ 2015 ರಲ್ಲಿ ನಿತೀಶ್ ಬೆಂಬಲದಿಂದ 80 ಸ್ಥಾನ ತಲುಪಿತ್ತಾದರೂ, 2025 ರ ಚುನಾವಣೆಯಲ್ಲಿ ಮತ್ತೆ 25 ಸ್ಥಾನಗಳಿಗೆ ಕುಸಿದಿತ್ತು. ಈಗ ಬಂಕಿಪುರದಲ್ಲಿ ಮೂರನೇ ಸ್ಥಾನಕ್ಕೆ ಬಿದ್ದಿರುವುದು ಆ ಪಕ್ಷದ ಸಾಂಪ್ರದಾಯಿಕ ಬೆಂಬಲ ಕುಸಿಯುತ್ತಿರುವುದನ್ನು ಸ್ಪಷ್ಟಪಡಿಸುತ್ತದೆ.

ಪಿಕೆ ಕಡೆಗೆ ವಾಲಿದ್ದೇಕೆ ಮುಸ್ಲಿಂ ಮತದಾರರು...?

ಈ ಹಿನ್ನಡೆಗೆ ಪ್ರಮುಖ ಕಾರಣವೆಂದರೆ ಆರ್‌ಜೆಡಿಯ ಸಾಂಪ್ರದಾಯಿಕ ಮುಸ್ಲಿಂ-ಯಾದವ್ ವೋಟ್​​ ಬ್ಯಾಂಕ್​ನಲ್ಲಿ ಉಂಟಾದ ಬಿರುಕು. ಸಿಎಸ್‌ಡಿಎಸ್ ಲೋಕನೀತಿ ಸಮೀಕ್ಷೆಯಂತೆ 2020 ರ ಚುನಾವಣೆಯಲ್ಲಿ 62% ಹಾಗೂ 2025 ರಲ್ಲಿ 70% ರಷ್ಟು ಮುಸ್ಲಿಂ ಮತದಾರರು ಆರ್‌ಜೆಡಿಗೆ ಬೆಂಬಲ ನೀಡಿದ್ದರು. ಆದರೆ, ಬಂಕಿಪುರದಲ್ಲಿ ಬಿಜೆಪಿಯನ್ನು ಎದುರಿಸಿ ಸೋಲಿಸಲು ಆರ್‌ಜೆಡಿಗಿಂತ ಪ್ರಶಾಂತ್ ಕಿಶೋರ್ ಸೂಕ್ತ ಆಯ್ಕೆ ಎಂದು ಭಾವಿಸಿದ ಮುಸ್ಲಿಂ ಮತದಾರರು ದೊಡ್ಡ ಪ್ರಮಾಣದಲ್ಲಿ ಪಿಕೆ ಕಡೆಗೆ ವಾಲಿದ್ದಾರೆ. ಮುಸ್ಲಿಂ ಮತದಾರರ ಈ ತಂತ್ರಗಾರಿಕೆಯ ಮತದಾನ ಆರ್‌ಜೆಡಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದೆ.
ಒಟ್ಟಾರೆಯಾಗಿ, ಬಂಕಿಪುರ ಉಪಚುನಾವಣೆಯು ಬಿಜೆಪಿಗೆ ತನ್ನ 30 ವರ್ಷಗಳ ಕೋಟೆಯನ್ನು ಕಳೆದುಕೊಂಡ ಆಘಾತ ನೀಡಿದ್ದರೆ, ಪ್ರಶಾಂತ್ ಕಿಶೋರ್​​​ಗೆ ತಮ್ಮ ರಾಜಕೀಯ ಪ್ರಯೋಗಕ್ಕೆ ಮನ್ನಣೆ ತಂದುಕೊಟ್ಟಿದೆ. ಆದರೆ, ಆರ್‌ಜೆಡಿಗೆ ಮಾತ್ರ ಇದು ಬಿಹಾರದಲ್ಲಿ ಬಿಜೆಪಿಗೆ ಪ್ರಮುಖ ಎದುರಾಳಿಯಾಗಿ ಉಳಿಯಲು ನಡೆಸುತ್ತಿರುವ ಕಠಿಣ ಹೋರಾಟ ಮತ್ತು ತನ್ನ ಸಾಂಪ್ರದಾಯಿಕ ಮತದಾರರನ್ನು ಕಳೆದುಕೊಳ್ಳುತ್ತಿರುವ ಎಚ್ಚರಿಕೆಯ ಗಂಟೆಯಾಗಿದೆ(ಏಜೆನ್ಸೀಸ್​).