Mangani Lal Mandal | ಮಂಗನಿ ಲಾಲ್ ಮಂಡಲ್, ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ 
ದೇಶ

ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಯಾದವ್​ ಕುಟುಂಬಕ್ಕೆ ಬಿಹಾರ ಸರ್ಕಾರ ಆದೇಶ; ಮಾಡುವುದಿಲ್ಲ ಎಂದ ಆರ್​ಜೆಡಿ ನಾಯಕ | Mangani Lal Mandal

ಪಟನಾ: ಸುಮಾರು ಎರಡು ದಶಕಗಳಿಂದ ಲಾಲು ಪ್ರಸಾದ್ ಯಾದವ್ ಕುಟುಂಬದ ಸದಸ್ಯರು ವಾಸಿಸುತ್ತಿರುವ ಎರಡು ಸರ್ಕಾರಿ ಸ್ವಾಮ್ಯದ ಬಂಗಲೆಗಳನ್ನು ಖಾಲಿ ಮಾಡುವಂತೆ ಬಿಹಾರ ಸರ್ಕಾರ ಹೊರಡಿಸಿದ್ದ ಆದೇಶವನ್ನು ಆರ್‌ಜೆಡಿ ನಾಯಕರು ತಿರಸ್ಕರಿಸಿದ್ದಾರೆ.
ಸರ್ಕಾರದ ಆದೇಶದ ಕುರಿತು ಪ್ರತಿಕ್ರಿಯೆ ನೀಡಿರುವ ಆರ್‌ಜೆಡಿ ಹಿರಿಯ ನಾಯಕ ಮಂಗನಿ ಲಾಲ್ ಮಂಡಲ್, ಯಾದವ್​ ಕುಟುಂಬವು ಆ ಬಂಗಲೆಗಳನ್ನು ಬಿಟ್ಟುಕೊಡುವುದಿಲ್ಲ ಎಂದು ತಿರುಗೇಟು ನೀಡಿದರು.
ನಾವು ಯಾವುದೇ ಕಾರಣಕ್ಕೂ ಲಾಲು ಯಾದವ್ ಅವರ ಬಂಗಲೆಯನ್ನು ಖಾಲಿ ಮಾಡುವುದಿಲ್ಲ, ಇದು ರಾಜಕೀಯ ಪ್ರೇರಿತ ನೀತಿಯಾಗಿದ್ದು, ದುರುದ್ದೇಶದಿಂದಾಗಿ ನಮ್ಮ ನಾಯಕರ ವಿರುದ್ಧ ಈ ರೀತಿ ನಡೆದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಲಾಲು ಯಾದವ್​ ಪತ್ನಿ, ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಅವರು ದೀರ್ಘಕಾಲದಿಂದ ಹೊಂದಿದ್ದ 10 ಸರ್ಕ್ಯುಲರ್ ರಸ್ತೆಯಲ್ಲಿರುವ ನಿವಾಸ ಮತ್ತು ಅವರ ಹಿರಿಯ ಮಗ ತೇಜ್ ಪ್ರತಾಪ್ ಯಾದವ್ ಅವರು ವಾಸಿಸುತ್ತಿದ್ದ ಎಂ ಸ್ಟ್ರಾಂಡ್ ರಸ್ತೆಯಲ್ಲಿರುವ ಪ್ರತ್ಯೇಕ ಬಂಗಲೆಯನ್ನು ಮರು ನಿಯೋಜಿಸುವ ಸರ್ಕಾರದ ಇತ್ತೀಚಿನ ನಿರ್ಧಾರದಿಂದ ಈ ವಿವಾದ ಉಂಟಾಗಿದೆ .
ಕಟ್ಟಡ ನಿರ್ಮಾಣ ಇಲಾಖೆ ಹೊರಡಿಸಿದ್ದ ಅಧಿಸೂಚನೆಯ ಬಳಿಕ ಎರಡೂ ಬಂಗಲೆಯನ್ನು ಈಗ ಇತರ ಅಧಿಕಾರಿಗಳಿಗೆ ಹಂಚಿಕೆ ಮಾಡಲಾಗಿದೆ. ಸರ್ಕಾರವು ಉದ್ದೇಶಪೂರ್ವಕ ದ್ವೇಷದಿಂದ ಈ ರೀರಿ ವರ್ತಿಸುತ್ತಿದೆ ಎಂದು ಮಂಗನಿ ಲಾಲ್ ಮಂಡಲ್ ಆರೋಪಿಸಿದ್ದು, ಯಾದವ್ ಕುಟುಂಬವನ್ನು ಅವಮಾನಿಸಲೆಂದೇ ಸರ್ಕಾರ ಈ ಕಾರ್ಯವಿಧಾನಗಳನ್ನು ನೆಪವಾಗಿ ಬಳಸುತ್ತಿದೆ, ಇದರಲ್ಲಿ ರಾಜಕೀಯ ಹೊರತುಪಡಿಸಿ ಬೇರೆನು ಕಾರಣಗಳಿಲ್ಲ ಎಂದು ಆರೋಪಿಸಿದರು.
ಸರ್ಕಾರಿ ವಸತಿ ಗೃಹಗಳನ್ನು ಆಕ್ರಮಿಸಿಕೊಳ್ಳುವುದು ನಿಯಮಬಾಹೀರ ಎನ್ನುವುದಾದರೆ ಇಷ್ಟು ದಿನ ಏಕೆ ಈ ಕ್ರಮ ಕೈಗೊಳ್ಳಲಿಲ್ಲ, ಇಬ್ಬರು ಮುಖ್ಯಮಂತ್ರಿಗಳು ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾಗ ಈ ವಿಷಯವನ್ನು ಏಕೆ ಎತ್ತಲಿಲ್ಲ? ಎಂದು ಪ್ರಶ್ನಿಸಿದರು. ಬಂಗಲೆ ತೆರವಿನ ಸೂಚನೆಗಳನ್ನು ವಿರೋಧಿಸಲು ಪಕ್ಷವು ಯಾವ ಹಂತಕ್ಕಾದರು ಹೋಗಲು ಸಿದ್ಧ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ವಕ್ತಾರ ನೀರಜ್ ಕುಮಾರ್ ಮಾತನಾಡಿದ್ದು, ರಾಬ್ಡಿ ದೇವಿ ನಿಯಮಗಳ ಪ್ರಕಾರ 10 ಸರ್ಕ್ಯುಲರ್ ರಸ್ತೆಯನ್ನು ಖಾಲಿ ಮಾಡಬೇಕು, ಬಂಗಲೆ ಹಸ್ತಾಂತರದ ಸಮಯದಲ್ಲಿ ಯಾವುದೇ ಸರ್ಕಾರಿ ಆಸ್ತಿಯನ್ನು ತೆಗೆದುಕೊಂಡು ಹೋಗದಂತೆ ಸರ್ಕಾರ ನಿಗಾ ಇಡುತ್ತದೆ ಎಂದು ಹೇಳಿದರು(ಏಜೆನ್ಸೀಸ್​).