ಒಂದೇ ಒಂದು ಗಾಡಿಯೂ ಕೆಟ್ಟು ನಿಂತಿಲ್ಲ ಎಂದು ನಿತಿನ್ ಗಡ್ಕರಿ
- ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ವಾಹನಗಳು ಕೆಟ್ಟುಹೋಗುತ್ತಿವೆಯೇ?
- ಎಥೆನಾಲ್ ಪೆಟ್ರೋಲ್‌ನಿಂದ ವಾಹನಗಳಿಗೆ ಯಾವುದೇ ಹಾನಿಯಿಲ್ಲ
- ಒಂದೇ ಒಂದು ಗಾಡಿಯೂ ಕೆಟ್ಟು ನಿಂತಿಲ್ಲ ಎಂದು ನಿತಿನ್ ಗಡ್ಕರಿ
ನವದೆಹಲಿ: ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ವಾಹನಗಳಿಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೈವೇ ಸಚಿವ ನಿತಿನ್ ಗಡ್ಕರಿ (Nitin Gadkari Ethanol Blending) ಹೇಳಿದ್ದಾರೆ.
ಮಂಗಳವಾರ (ಜು.7) ದೆಹಲಿಯಲ್ಲಿ ನಡೆದ ವಿಕಸಿತ ಭಾರತ್ ಸಮಾವೇಶದಲ್ಲಿ ಮಾತನಾಡಿದ ಅವರು ಎಥೆನಾಲ್ ಮಿಶ್ರಿತ ಪೆಟ್ರೋಲ್‌ನಿಂದ ಭಾರತದ ಆರ್ಥಿಕತೆ ಇನ್ನಷ್ಟು ಸುಧಾರಿಸಲಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಒಂದೇ ಒಂದು ವಾಹನ ಕೆಟ್ಟುನಿಂತಿಲ್ಲ!
ಇತ್ತೀಚಿನ ದಿನಗಳಲ್ಲಿ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದಾಗಿ ವಾಹನಗಳು ಕೆಟ್ಟುನಿಲ್ಲುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ. ಇದರ ಬಗ್ಗೆ ಏನು ಹೇಳುತ್ತಿರಿ ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಸಚಿವ ನಿತಿನ್ ಗಡ್ಕರಿ, ಎಥೆನಾಲ್ ಬಳಕೆಯಿಂದ ಇಲ್ಲಿವರೆಗೆ ಯಾವುದೇ ವಾಹನಗಳು ಕೆಟ್ಟುನಿಂತಿಲ್ಲ. ಇದರ ಬಗ್ಗೆ ಯಾವುದೇ ವರದಿಯಾಗಿಲ್ಲ. ಇವೆಲ್ಲಾ ಕೇವಲ ಉಪಾಪೋಗಳಷ್ಟೆ ಎಂದಿದ್ದಾರೆ.
ಇದರಿಂದ ಲಾಭವೇ ಹೊರತು ನಷ್ಟವಿಲ್ಲ!
ಮಾತು ಮುಂದುವರಿಸಿದ ನಿತಿನ್ ಗಡ್ಕರಿ, ಎಥೆನಾಲ್ ಬಳಕೆಯಿಂದ ನಷ್ಟಕ್ಕಿಂತ ಲಾಭದ ಪ್ರಮಾಣವೇ ಅಧಿಕವಿದೆ. ಗ್ರಾಮೀಣ ಭಾಗದ ರೈತರಿಗೆ ಆರ್ಥಿಕ ಸಹಾಯ ದೊರೆಯುತ್ತಿದೆ. ಕಚ್ಚಾ ತೈಲದ ಮೇಲಿನ ಹೊರೆ ಕಡಿಮೆ ಆಗುತ್ತಿದೆ ಹಾಗೂ ಪರಿಸರ ಮಾಲಿನ್ಯ ಕೂಡ ನಿಯಂತ್ರಣಕ್ಕೆ ಬರುತ್ತಿದೆ ಎಂದು ಹೇಳಿದ್ದಾರೆ.
ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿರುವ ಆರೋಪಗಳೇನು?
ಆದರೆ ಇತ್ತೀಚೆಗೆ ಸೋಷಿಯಲ್ ಮೀಡಿಯಾನಲ್ಲಿ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದಾಗಿ ವಾಹನದ ಭಾಗಗಳು ತುಕ್ಕು ಹಿಡಿಯುತ್ತಿವೆ. ಮೈಲೇಜ್ ಕಡಿಮೆ ಆಗುತ್ತಿದೆ. ಹಾಗೂ ಎಥೆನಾಲ್ ತಯಾರಿಕೆ ಮಾಡಲು ನೀರು ಪೋಲಾಗುತ್ತದೆ ಮತ್ತು ಮಾಲಿನ್ಯ ಉಂಟಾಗುತ್ತದೆ ಎಂಬ ಆರೋಪಗಳು ಕೇಳಿಬರುತ್ತಿವೆ, (ಏಜನ್ಸೀಸ್).