ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಾನು ಕಿಂಗ್‌ಮೇಕರ್ ಅಲ್ಲ, ಕಿಂಗ್ ಆಗಿ ಗೆಲುವು ಸಾಧಿಸುತ್ತೇನೆ ಎಂದು ಟಿವಿಕೆ ಮುಖ್ಯಸ್ಥ, ನಟ ವಿಜಯ್ ಹೇಳಿದ್ದಾರೆ.
ಎನ್ಡಿಟಿವಿಯೊಂದಿಗೆ ಮಾತನಾಡಿದ ವಿಜಯ್, ನಮ್ಮ ಪಕ್ಷದ ಸಮಾವೇಶಕ್ಕೆ ಬರುತ್ತಿರುವ ಜನಸಮೂಹವನ್ನು ನೀವು ನೋಡಿದ್ದೀರಾ? ಎಂದು ಪ್ರಶ್ನಿಸಿದರು. ತಮಿಳುನಾಡು ವಿಧಾನಸಭಾ ಚುನಾವಣೆಗೆ ಟಿವಿಕೆ ಭರ್ಜರಿ ತಾಲೀಮು ನಡೆಸುತ್ತಿದೆ.
ಕರೂರ್ ಕಾಲ್ತುಳಿತ ದುರಂತದ ಬಗ್ಗೆ ಮಾತನಾಡಿದ ವಿಜಯ್, ಈ ಘಟನೆ ಆಘಾತಕಾರಿಯಾಗಿತ್ತು, ಹೀಗಾಗುತ್ತದೆ ಎನ್ನುವ ಸಣ್ಣ ಕಲ್ಪನೆಯೂ ನಮಗೆ ಇರಲಿಲ್ಲ ಎಂದರು. ನಮ್ಮ ಪಕ್ಷದ ಭವಿಷ್ಯದ ಬಗ್ಗೆ ಯಾವುದೇ ರೀತಿಯ ದ್ವಂದ್ವಗಳಿಲ್ಲ, ಚುನಾವಣೆಯ ಗೆಲುವಿಗಾಗಿ ಯಾವ ನಿರ್ಧಾರ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಂಡಿದ್ದೇವೆ ಎಂದರು.
ಜನ ನಾಯಗನ್ ಚಿತ್ರ ಬಿಡುಗಡೆಗೆ ಅನುಮತಿ ಸಿಗದ ಕಾರಣ ನಮ್ಮ ನಿರ್ಮಾಪಕರು ಸಂಕಷ್ಟದಲ್ಲಿದ್ದಾರೆ, ರಾಜಕೀಯ ಕಾರಣಕ್ಕೆ ಹೀಗಾಗಬಹುದು ಎಂದು ಮೊದಲೇ ನಿರೀಕ್ಷಿಸಿದ್ದೆ, ಅದಕ್ಕಾಗಿ ಮಾನಸಿಕವಾಗಿ ಸಿದ್ಧನಾಗಿದ್ದೆ ಎಂದರು. ತಮ್ಮನ್ನು ಶಾರುಖ್ ಖಾನ್ ಅಭಿಮಾನಿ ಎಂದು ಹೇಳಿಕೊಂಡಿರುವ ವಿಜಯ್, ಎಂಜಿಆರ್ ಮತ್ತು ಜೆ ಜಯಲಲಿತಾರನ್ನು ಆದರ್ಶ ವ್ಯಕ್ತಿಗಳೆಂದರು.
ತಮ್ಮ ಅಭಿಮಾನಿಗಳನ್ನು ಪಕ್ಷದ ಕಾರ್ಯಕರ್ತರಾಗಿ ಪರಿವರ್ತಿಸುದಕ್ಕಾಗಿ ಮಾತ್ರ ಈ ಚುನಾವಣೆಯಲ್ಲಿ ಹೋರಾಡುತ್ತಿಲ್ಲ, ಗೆಲ್ಲಲು ಕಣಕ್ಕಿಳಿದಿದ್ದೇನು, ಅದೊಂದೆ ನನ್ನ ಪ್ರಮುಖ ಗುರಿ ಎಂದರು. ಟಿವಿಕೆಗೆ ಚುನಾವಣಾ ಚಿಹ್ನೆಯಾಗಿ ಶಿಳ್ಳೆಯನ್ನು ನೀಡಲಾಗಿದ್ದು, ಇದನ್ನು ತಮ್ಮ ಮೊದಲ ಗೆಲುವು ಮತ್ತು ಚುನಾವಣಾ ಯಶಸ್ಸಿಗೆ ದೈವಿಕ ಮುನ್ನುಡಿ ಎಂದು ಕರೆದಿದ್ದಾರೆ.
ಸವಾಲುಗಳು
ಚುನಾವಣೆಯಲ್ಲಿ ಹೇಳಿಕೆ ನೀಡುವುದು ಸುಲಭ, ಆದರೆ, ಕಣದಲ್ಲಿ ಅದನ್ನು ಸಾಬೀತುಪಡಿಸುವುದು ಕಷ್ಟ. ತಮಿಳುನಾಡಿನಂತಹ ರಾಜ್ಯದಲ್ಲಿ ಬೂತ್ ಮಟ್ಟದ ಸಂಘಟನೆ ಬಹಳ ಮುಖ್ಯ. ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ದಶಕಗಳ ಕಾಲದ ಸಂಘಟನಾ ಶಕ್ತಿಯನ್ನು ಹೊಂದಿವೆ. ವಿಜಯ್ರ ಟಿವಿಕೆ ಕೇವಲ ಅವರ ವರ್ಚಸ್ಸಿನ ಮೇಲೆ ಅವಲಂಬಿತವಾಗದೆ, ತಳಮಟ್ಟದ ಸಂಘಟನೆಯನ್ನು ಹೇಗೆ ಮಾಡುತ್ತದೆ ಎನ್ನುವುದರ ಮೇಲೆ ಅವರ ಕಿಂಗ್ ಪಟ್ಟವನ್ನು ನಿರ್ಧರವಾಗಲಿದೆ(ಏಜೆನ್ಸೀಸ್).