Lalit Modi | ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ
Lalit Modi: ತಮ್ಮ ಮೇಲೆ ಅಂಟಿರುವ ಭ್ರಷ್ಟ ಮತ್ತು ತಲೆಮರೆಸಿಕೊಂಡಿರುವ ಅಪರಾಧಿ ಎಂಬ ಹಣೆಪಟ್ಟಿಯನ್ನು ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ತಿರಸ್ಕರಿಸಿದ್ದು, ತಾವು ಎಲ್ಲಿಂದಲೂ ಓಡಿ ಹೋಗುತ್ತಿಲ್ಲ ಎಂದಿರುವ ಅವರು, ಭಾರತ ಸರ್ಕಾರಕ್ಕೆ ದೊಡ್ಡ ಶಕ್ತಿಯಿದೆ, ಒಂದು ವೇಳೆ ನನ್ನನ್ನು ಹಿಡಿಯಬೇಕಾಗಿದ್ದರೆ ಅವರು ಎಂದೋ ಹಿಡಿಯುತ್ತಿದ್ದರು ಎಂದು ಹೇಳಿದ್ದಾರೆ.
ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಲಲಿತ್ ಮೋದಿ, 2010ರಲ್ಲೇ ಭಾರತವನ್ನು ತೊರೆದಿದ್ದರೂ, ತಾವು ತಲೆಮರೆಸಿಕೊಂಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಭಾರತ ಸರ್ಕಾರದ ಕೈಗಳು ಬಹಳ ಉದ್ದವಾಗಿವೆ. ಒಂದು ವೇಳೆ ಅವರಿಗೆ ನನ್ನನ್ನು ಹಿಡಿಯಬೇಕೆಂಬ ನಿಜವಾದ ಇಚ್ಛೆಯಿದ್ದಿದ್ದರೆ, ಅವರು ಎಂದೋ ನನ್ನನ್ನು ಕರೆದುಕೊಂಡು ಹೋಗಬಹುದಿತ್ತು ಎಂದು ಹೇಳಿದ್ದಾರೆ.
ಭಾರತದಂತಹ ಜಾಗತಿಕ ಸೂಪರ್ ಪವರ್ ದೇಶದಿಂದ ತಪ್ಪಿಸಿಕೊಂಡು ಇಡೀ ಪ್ರಪಂಚವನ್ನು ಸಾರುವುದು ಅಸಾಧ್ಯದ ಮಾತು ಎಂದಿರುವ ಐಪಿಎಲ್ ಮಾಜಿ ಅಧ್ಯಕ್ಷ, ತಾವು ಜಗತ್ತಿನಾದ್ಯಂತ ಮುಕ್ತವಾಗಿ ಪ್ರಯಾಣಿಸುತ್ತಿರುವುದಾಗಿ ತಿಳಿಸಿದ್ದಾರೆ. ಒಂದು ವೇಳೆ ತಾವು ಓಡುತ್ತಿದ್ದರೆ ಯಾವುದಾದರೊಂದು ದೇಶದಲ್ಲಿ ಸಿಕ್ಕಿಬೀಳುತ್ತಿದ್ದೆವು, ಆದರೆ ಸರ್ಕಾರಕ್ಕಿಂತ ಹೆಚ್ಚಾಗಿ ಮಾಧ್ಯಮಗಳೇ ಈ ರೀತಿ ಬಿಂಬಿಸುತ್ತಿವೆ ಎಂದು ದೂರಿದ್ದಾರೆ.
ಭಾರತಕ್ಕೆ ಮರಳಿ ತಮ್ಮ ಮೇಲಿರುವ ಆರೋಪಗಳನ್ನು ಕಾನೂನುಬದ್ಧವಾಗಿ ಮುಕ್ತಗೊಳಿಸಿಕೊಳ್ಳುವ ಯಾವುದೇ ಯೋಜನೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಲಲಿತ್ ಮೋದಿ, ಈಗ ತಮ್ಮ ಆದ್ಯತೆಗಳು ಸಂಪೂರ್ಣವಾಗಿ ಬದಲಾಗಿವೆ ಮತ್ತು ತಾವು ಯಾರಿಗೂ ಏನನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ. ತಮ್ಮನ್ನು ವೈಯಕ್ತಿಕವಾಗಿ ಗುರಿಯಾಗಿಸಿಕೊಳ್ಳಲಾಗಿದ್ದು, ಅವರ ಮೇಲಿರುವ ಎಲ್ಲಾ ಪ್ರಕರಣಗಳು ರಾಜಕೀಯ ಪ್ರೇರಿತವಾಗಿವೆ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿರುವ ಅವರು, ಪ್ರತಿ ಬಾರಿ ಚುನಾವಣೆ ಬಂದಾಗಲೂ ರಾಹುಲ್ ಗಾಂಧಿ ತಮ್ಮ ರ‍್ಯಾಲಿಗಳಲ್ಲಿ ಮತ್ತು ಸಂಸತ್ತಿನಲ್ಲಿ ತಮ್ಮ ಹೆಸರನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಾರೆ, ಭಾರತದಲ್ಲಿ ಕ್ರಿಕೆಟ್ ದೊಡ್ಡ ಭಾವನಾತ್ಮಕ ವಿಷಯವಾಗಿರುವುದರಿಂದ, ಸಾರ್ವಜನಿಕರ ಗಮನ ಸೆಳೆಯಲು ತಮ್ಮ ಹೆಸರನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಲಲಿತ್ ಮೋದಿ ಆರೋಪಿಸಿದ್ದಾರೆ.
ಪಿ. ಚಿದಂಬರಂ ಬೆದರಿಕೆ ಹಾಕಿದ್ರು
2009 ರ ಐಪಿಎಲ್ ಟೂರ್ನಿಯನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಿದ ಹಿಂದಿನ ಕಥೆ ಬಿಚ್ಚಿಟ್ಟಿರುವ ಲಲಿತ್ ಮೋದಿ, ಅಂದಿನ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರು ತಮಗೆ ಬೆದರಿಕೆ ಹಾಕಿದ್ದರು ಮತ್ತು ಟೂರ್ನಿಯನ್ನು ಉದ್ದೇಶಪೂರ್ವಕವಾಗಿ ತಡೆದಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಚಿದಂಬರಂ ಅತ್ಯಂತ ಪ್ರಭಾವಿ ಗೃಹ ಸಚಿವರಾಗಿದ್ದರು. ಅವರಿಗೆ ನಾನು ಭಾರತದಲ್ಲಿ ಐಪಿಎಲ್ ನಡೆಸುವುದು ಇಷ್ಟವಿರಲಿಲ್ಲ. ದೇಶದ ಬಿಜೆಪಿ ಆಡಳಿತವಿರುವ ರಾಜ್ಯಗಳು ಪಂದ್ಯಗಳನ್ನು ನಡೆಸಲು ಅನುಮತಿ ನೀಡಿದ್ದರೂ, ಕಾಂಗ್ರೆಸ್ ಆಡಳಿತವಿದ್ದ ರಾಜ್ಯ ಸರ್ಕಾರಗಳು ಭದ್ರತೆಯ ನೆಪವೊಡ್ಡಿ ಅನುಮತಿ ನಿರಾಕರಿಸಿದ್ದವು ಎಂದು ದೂರಿದ್ದಾರೆ. ಪಂದ್ಯಾವಳಿಯನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸುವ ಮುನ್ನ ತಾವು ಐಪಿಎಲ್ ವೇಳಾಪಟ್ಟಿಯನ್ನು ಬರೋಬ್ಬರಿ 154 ಬಾರಿ ಬದಲಾಯಿಸಬೇಕಾಗಿ ಬಂದಿತ್ತು ಎಂಬ ಅಚ್ಚರಿಯ ವಿಷಯವನ್ನು ಐಪಿಎಲ್ ಮಾಜಿ ಅಧ್ಯಕ್ಷರು ಬಹಿರಂಗಪಡಿಸಿದ್ದಾರೆ(ಏಜೆನ್ಸೀಸ್).