ನವದೆಹಲಿ: ಭಾರತೀಯ ರೈಲ್ವೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತಿದ್ದು, ಪ್ರಯಾಣಿಕರಿಗೆ ಅತ್ಯುತ್ತಮ ಸಾರಿಗೆ ಸೌಲಭ್ಯ ಒದಗಿಸುವ ಕಸರತ್ತು ಭರ್ಜರಿಯಾಗಿ ನಡೆಯುತ್ತಿದೆ. ಈ ನಡುವೆ ಸೋಷಿಯಲ್ ಮೀಡಿಯಾನಲ್ಲಿ ವಂದೇ ಭಾರತ್ ರೈಲಿನ ಹೊಸದೊಂದು ವಿಡಿಯೋ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಬರೋಬ್ಬರಿ ಗಂಟೆಗೆ 180 ಕಿಲೋಮೀಟರ್ ವೇಗದಲ್ಲಿ ಸಾಗುತ್ತಿದ್ದರೂ ಕಿಂಚಿತ್ತೂ ನಡುಕವಿಲ್ಲದೆ ಸಾಗುತ್ತಿರುವ ದೃಶ್ಯ ನೆಟ್ಟಿಗರ ಹುಬ್ಬೇರಿಸಿದೆ.
ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ಟ್ರಯಲ್ ರನ್ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆದೆ. ರೈಲಿನೊಳಗೆ ಟೆಸ್ಟಿಂಗ್ ನಡೆಯುವಾಗ ಮೊಬೈಲ್ ಸ್ಪೀಡೋಮೀಟರ್‌ನಲ್ಲಿ ವೇಗ ನಿಧಾನವಾಗಿ ಏರುತ್ತಾ ಬರೋಬ್ಬರಿ 180 km/h ಮುಟ್ಟುತ್ತದೆ.
ಸ್ಪೀಡೋಮೀಟರ್ ಪಕ್ಕದಲ್ಲೇ ಎರಡು ಗ್ಲಾಸ್‌ಗಳ ಮೇಲೆ ನೀರಿನಿಂದ ತುಂಬಿದ ಮತ್ತೊಂದು ಲೋಟವನ್ನು ಬ್ಯಾಲೆನ್ಸ್ ಮಾಡಿ ಇಡಲಾಗಿತ್ತು. ಗಾಳಿಯ ವೇಗದಲ್ಲಿ ರೈಲು ಹಳಿಗಳ ಮೇಲೆ ಚಿಮ್ಮುತ್ತಿದ್ದರೂ, ಆ ಗ್ಲಾಸ್‌ನಿಂದ ಒಂದೇ ಒಂದು ಹನಿ ನೀರೂ ಕೆಳಗೆ ಚೆಲ್ಲಲಿಲ್ಲ.
ಇಷ್ಟೊಂದು ಅಪಾಯಕರ ವೇಗದಲ್ಲೂ ರೈಲು ಎಷ್ಟೊಂದು ಸ್ಥಿರವಾಗಿ ಮತ್ತು ಆರಾಮದಾಯಕವಾಗಿ ಚಲಿಸುತ್ತದೆ ಎಂಬುದಕ್ಕೆ ಈ ದೃಶ್ಯವೇ ಸಾಕ್ಷಿಯಾಗಿದೆ. ರಾಯ್‌ಬರೇಲಿಯ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ ಸಿದ್ಧಗೊಂಡಿರುವ ಈ ಹೊಸ ರೇಕ್‌ನ ಪರೀಕ್ಷಾರ್ಥ ಸಂಚಾರ ಇದಾಗಿದ್ದು, ಸದ್ಯ ಇಂಟರ್ನೆಟ್‌ನಲ್ಲಿ ಈ ವಿಡಿಯೋ ಭಾರಿ ಮೆಚ್ಚುಗೆ ಗಳಿಸುತ್ತಿದೆ.
ಭಾರತದ ಹೆಮ್ಮೆಯ ಸೆಮಿ ಹೈಸ್ಪೀಡ್ ವಂದೇ ಭಾರತ್ ರೈಲುಗಳು ಹಳಿಗಳ ಮೇಲೆ ಇಳಿದಾಗಿನಿಂದಲೂ ಜನರಿಗೆ ಅಚ್ಚುಮೆಚ್ಚಾಗಿದೆ. ಈ ರೈಲಿನಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನದ ಕಾರಣ ಇಂದು ಪ್ರಯಾಣಿಕರು, ಅತ್ಯಂತ ಕಡಿಮೆ ಸಮಯದಲ್ಲಿ, ಸುಸಜ್ಜಿತ ವ್ಯವಸ್ಥೆಯೊಂದಿದೆ ಪ್ರಯಾಣ ಮಾಡುವಂತಾಗಿದೆ.
ಪ್ರತ್ಯೇಕ ಎಂಜಿನ್ ಇಲ್ಲ: ಸಾಮಾನ್ಯ ರೈಲುಗಳಂತೆ ಇದಕ್ಕೆ ಮುಂದೆ ಎಳೆಯಲು ಪ್ರತ್ಯೇಕ ಎಂಜಿನ್ ಬೇಕಿಲ್ಲ. ಬದಲಿಗೆ ಪ್ರತಿ ಬೋಗಿಯ ಕೆಳಗಡೆಯೇ ಮೋಟಾರ್ ವ್ಯವಸ್ಥೆ ಇರುವುದರಿಂದ, ಕ್ಷಣಾರ್ಧದಲ್ಲಿ ಇದು ಹೆಚ್ಚಿನ ವೇಗ ಪಡೆದುಕೊಳ್ಳುತ್ತದೆ ಮತ್ತು ಸರಾಗವಾಗಿ ಬ್ರೇಕ್ ಹಾಕಲು ಸಾಧ್ಯವಾಗುತ್ತದೆ.
ವಿಮಾನದಂತಹ ವೈಶಿಷ್ಟ್ಯಗಳು: ಸೆನ್ಸಾರ್ ಆಧಾರಿತ ಸ್ವಯಂಚಾಲಿತ ಬಾಗಿಲುಗಳು, 180 ಡಿಗ್ರಿ ತಿರುಗುವ ರಿಕ್ಲೈನರ್ ಸೀಟುಗಳು, ಜಿಪಿಎಸ್ ಆಧಾರಿತ ಮಾಹಿತಿ ಪರದೆಗಳು, ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾಗಳು ಮತ್ತು ಸುಧಾರಿತ ಸುರಕ್ಷತಾ ವ್ಯವಸ್ಥೆಗಳು ಪ್ರಯಾಣಿಕರಿಗೆ ರಾಜಾತಿಥ್ಯ ನೀಡುತ್ತವೆ.
ಸದ್ದು-ಗದ್ದಲವಿಲ್ಲದ ಜರ್ನಿ: ಸಾಮಾನ್ಯ ರೈಲುಗಳಲ್ಲಿ ಕಂಡುಬರುವ ಹಳಿಗಳ ಕರ್ಕಶ ಸದ್ದು ಅಥವಾ ದೇಹ ಕುಲುಕಾಡುವ ಅನುಭವ ಇಲ್ಲಿರುವುದಿಲ್ಲ. ಇದನ್ನು ಸಾಬೀತುಪಡಿಸಲೇ ಈ ‘ಗ್ಲಾಸ್ ವಾಟರ್ ಟೆಸ್ಟ್’ ನಡೆಸಲಾಗಿದೆ.
ಒಂದೊಮ್ಮೆ ಭಾರತೀಯ ರೈಲುಗಳೆಂದರೆ ಗಂಟೆಗೆ 60-70 ಕಿ.ಮೀ ವೇಗದಲ್ಲಿ ಸಾಗುವ, ತಡವಾಗಿ ಬರುವ ವ್ಯವಸ್ಥೆ ಎಂದೇ ಜನ ಭಾವಿಸಿದ್ದರು. ಆದರೆ ವಂದೇ ಭಾರತ್ ಆಗಮನದ ನಂತರ ದೇಶೀಯ ರೈಲು ಪ್ರಯಾಣದ ಚಿತ್ರಣವೇ ಸಂಪೂರ್ಣ ಬದಲಾಗಿದೆ. ಭಾರತದ ಎಂಜಿನಿಯರ್‌ಗಳ ಪ್ರತಿಭೆ ಮತ್ತು 'ಮೇಕ್ ಇನ್ ಇಂಡಿಯಾ' ಪರಿಕಲ್ಪನೆ ಎಂಥ ಅದ್ಭುತವನ್ನು ಸೃಷ್ಟಿಸಬಲ್ಲದು ಎಂಬುದಕ್ಕೆ ಗಂಟೆಗೆ 180 ಕಿ.ಮೀ ವೇಗದಲ್ಲೂ ನೀರು ಚೆಲ್ಲದ ಈ ಟ್ರಯಲ್ ರನ್ ವಿಡಿಯೋ ಸಾಕ್ಷಿಯಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ, (ಏಜೆನ್ಸೀಸ್).