ಈ ಹಳ್ಳಿಯಲ್ಲಿ 63 ವರ್ಷಗಳಿಂದಿಲ್ಲ ಮಾಂಸದೂಟ, ಮದ್ಯಪಾನ! ಇಲ್ಲಿನ ಜನರ ಜೀವನಶೈಲಿ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ | Non-Vegetarian Village 
ದೇಶ

ಈ ಹಳ್ಳಿಯಲ್ಲಿ 63 ವರ್ಷಗಳಿಂದಿಲ್ಲ ಮಾಂಸದೂಟ, ಮದ್ಯಪಾನ! ಇಲ್ಲಿನ ಜನರ ಜೀವನಶೈಲಿ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ | Non-Vegetarian Village

Non-Vegetarian Village: ಆಧುನಿಕ ಜೀವನಶೈಲಿಯ ಪ್ರಭಾವದಿಂದ ಇಂದು ಆಹಾರ ಪದ್ಧತಿ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಸಾಮಾನ್ಯ ದಿನದಂತೆ, ಹಬ್ಬ-ಹರಿದಿನಗಳಲ್ಲಿ ಮಾಡುವ ತಿಂಡಿ-ತಿನಿಸುಗಳಲ್ಲಿ ಸಹ ಕೊಂಚ ಬದಲಾವಣೆಗಳು ಕಾಣುತ್ತಿವೆ. ಆದರೆ, ತಮಿಳುನಾಡಿನ ಒಂದು ಪುಟ್ಟ ಗ್ರಾಮ ಮಾತ್ರ ಕಳೆದ 63 ವರ್ಷಗಳಿಂದ ತನ್ನ ಸಂಪ್ರದಾಯ ಮತ್ತು ತತ್ವಗಳಿಗೆ ಬದ್ಧವಾಗಿ ಬದುಕುತ್ತಿದೆ ಎಂಬುದಕ್ಕೆ ಮಾಂಸಹಾರದ ಊಟದ ಮೇಲೆ ಹಾಕಿರುವ ನಿಷೇಧವೇ ಸಾಕ್ಷಿ.

ಈ ಊರಿನಲ್ಲಿ ಮಾಂಸಾಹಾರಕ್ಕೆ ಸಂಪೂರ್ಣ ನಿಷೇಧವಿದೆ. ಅಷ್ಟೇ ಅಲ್ಲ, ಗ್ರಾಮದ ಕೆರೆಯಲ್ಲಿ ಮೀನುಗಳಿದ್ದರೂ ಅವುಗಳನ್ನು ಯಾರೊಬ್ಬರೂ ಹಿಡಿಯುವುದಿಲ್ಲ. ಪ್ರಾಣಿಗಳ ಹತ್ಯೆಗಳು ನಡೆಯಬಾರದು ಎಂಬ ಒಂದೇ ಒಂದು ಕಾರಣಕ್ಕೆ, ಇಲ್ಲಿ ಯಾರೂ ಸಹ ಕುರಿ, ಮೇಕೆ, ಕೋಳಿಗಳನ್ನೂ ಸಾಕುವುದಿಲ್ಲ. ವಳ್ಳಲಾರ್ ಅವರ ಜೀವಕಾರುಣ್ಯದ ಮಾರ್ಗವನ್ನು ಅನುಸರಿಸುತ್ತಿರುವ ಈ ಗ್ರಾಮದ ಜೀವನಶೈಲಿ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ತಮಿಳುನಾಡಿನ ಒಂದು ಪುಟ್ಟ ಗ್ರಾಮ ಕಳೆದ 63 ವರ್ಷಗಳಿಂದ ಮಾಂಸಾಹಾರವನ್ನು ಸಂಪೂರ್ಣವಾಗಿ ತ್ಯಜಿಸಿ, ಸಸ್ಯಾಹಾರವನ್ನೇ ಜೀವನದ ಪ್ರಮುಖ ಭಾಗವಾಗಿಸಿಕೊಂಡಿದೆ. ಅಷ್ಟೇ ಅಲ್ಲ, ಪ್ರಾಣಿ-ಪಕ್ಷಿಗಳ ಮೇಲಿನ ಕರುಣೆ ಮತ್ತು ಜೀವಹಿಂಸೆ ಮಾಡಬಾರದು ಎಂಬ ತತ್ವವನ್ನು ತಮ್ಮ ದೈನಂದಿನ ಬದುಕಿನಲ್ಲಿ ಬಹಳ ಶಿಸ್ತಿನಿಂದ ಪಾಲಿಸುತ್ತಿದೆ. ಈ ವಿಶಿಷ್ಟ ಜೀವನಶೈಲಿಯಿಂದಲೇ ಈ ಗ್ರಾಮದ ಹೆಸರು ಇಂದಿಗೂ ಹಲವರ ಗಮನ ಸೆಳೆಯುತ್ತಿದೆ.

ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯ ಆಲಂಗುಡಿ ಸಮೀಪವಿರುವ ವಡಿಮಾನೈಪಟ್ಟಿ ಗ್ರಾಮವೇ ಈ ವಿಶೇಷತೆಗೆ ಹೆಸರಾಗಿದೆ. ಸುಮಾರು 75 ಕುಟುಂಬಗಳ 300ಕ್ಕೂ ಹೆಚ್ಚು ಜನರು ವಾಸಿಸುವ ಈ ಗ್ರಾಮದಲ್ಲಿ 1963ರಿಂದ ಮಾಂಸಾಹಾರ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ.

ವಳ್ಳಲಾರ್ ತತ್ವಗಳಿಂದ ಬದಲಾಯ್ತು ಪದ್ಧತಿ

ಒಂದು ಕಾಲದಲ್ಲಿ ಇತರ ಗ್ರಾಮಗಳಂತೆ ಇಲ್ಲಿನ ಜನರೂ ಸಸ್ಯಾಹಾರ ಮತ್ತು ಮಾಂಸಾಹಾರ ಎರಡನ್ನೂ ಸೇವಿಸುತ್ತಿದ್ದರು. ಆದರೆ, 1963ರಲ್ಲಿ ವಳ್ಳಲಾರ್ ಅವರ ಜೀವಕಾರುಣ್ಯ ಮತ್ತು ಸನ್ಮಾರ್ಗದ ತತ್ವಗಳಿಂದ ಪ್ರೇರಿತರಾದ ಗ್ರಾಮಸ್ಥರು, ಮಾಂಸಾಹಾರ ತ್ಯಜಿಸುವ ನಿರ್ಧಾರ ಕೈಗೊಂಡರು. ಅಂದಿನಿಂದ ಇಂದಿನವರೆಗೂ ಇಡೀ ಗ್ರಾಮ ಸಸ್ಯಾಹಾರ ಪದ್ಧತಿಯನ್ನೇ ಅನುಸರಿಸುತ್ತ ಬಂದಿದೆ.

ಹಬ್ಬ-ಹರಿದಿನಗಳಲ್ಲಿಯೂ ಈ ನಿಯಮದಲ್ಲಿ ಯಾವುದೇ ಬದಲಾವಣೆಯಿಲ್ಲ. ಹಬ್ಬಗಳಂತಹ ವಿಶೇಷ ಸಂದರ್ಭಗಳಲ್ಲೂ ಮಾಂಸಾಹಾರ ಸೇವಿಸುವುದಿಲ್ಲ. ಬೇರೆ ಊರುಗಳಿಗೆ ಸಂಬಂಧಿಕರ ಮನೆಗೆ ಹೋಗಿದ್ದೇವೆ ಎಂಬ ಕಾರಣಕ್ಕೆ, ಅಲ್ಲಿ ಮಾಂಸಹಾರ ಸೇವಿಸಬಹುದು ಎಂಬ ಚಿಂತನೆಯನ್ನು ಕೈಬಿಡುವ ಇಲ್ಲಿನ ಮಂದಿ, ಸಸ್ಯಾಹಾರವನ್ನೇ ಆಯ್ಕೆ ಮಾಡುತ್ತಾರೆ ಎಂಬುದೇ ಅಚ್ಚರಿಯ ಸಂಗತಿ.

ನೂತನ ದಂಪತಿಗಳು ಪಾಲಿಸುವ ಸಂಪ್ರದಾಯ

ಗ್ರಾಮದ ವಿಶೇಷತೆ ಎಂದರೆ ಹೊರಗಿನಿಂದ ಮದುವೆಯಾಗಿ ಬರುವ ಮಹಿಳೆಯರೂ ಇಲ್ಲಿನ ಆಹಾರ ಪದ್ಧತಿಯನ್ನು ಕ್ರಮೇಣ ಅಳವಡಿಸಿಕೊಳ್ಳಬೇಕು. ಗ್ರಾಮದ 75 ವರ್ಷದ ಜಯಮಣಿ ಅವರ ಜೀವನವೇ ಇದಕ್ಕೆ ಉದಾಹರಣೆ. ಅವರು ಮೂಲತಃ ಮಥೂರು ಗ್ರಾಮದವರು.

ಮದುವೆಗೆ ಮೊದಲು ಮಾಂಸಾಹಾರ ಸೇವಿಸುತ್ತಿದ್ದ ಮಹಿಳೆ, ವಡಿಮಾನೈಪಟ್ಟಿಗೆ ಮದುವೆಯಾಗಿ ಬಂದ ಬಳಿಕ ಪತಿಯ ಆಹಾರ ಪದ್ಧತಿ ಮತ್ತು ಗ್ರಾಮದ ಸಂಪ್ರದಾಯವನ್ನು ಒಪ್ಪಿಕೊಂಡು ಸಸ್ಯಾಹಾರಿಯಾಗಿದ್ದಾರೆ. ಅವರ ನಾಲ್ವರು ಪುತ್ರಿಯರು ಬೇರೆ ಊರುಗಳಿಗೆ ಮದುವೆಯಾಗಿ ಹೋಗಿದ್ದರೂ, ಇಂದಿಗೂ ಕುಟುಂಬದ ಸಸ್ಯಾಹಾರ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ ಎನ್ನಲಾಗಿದೆ.

ಮದ್ಯಪಾನಕ್ಕೂ ಇಲ್ಲ ಅವಕಾಶ

ವಡಿಮಾನೈಪಟ್ಟಿಯ ಮತ್ತೊಂದು ವಿಶೇಷವೆಂದರೆ ಮದ್ಯಪಾನದಿಂದ ದೂರವಿರುವ ಜೀವನಶೈಲಿ. ಗ್ರಾಮದ ಹಿರಿಯರಿಂದ ಹಿಡಿದು ಯುವಕರವರೆಗೂ ಮದ್ಯಪಾನದ ಅಭ್ಯಾಸ ಇಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೊರಗಿನಿಂದ ಗ್ರಾಮಕ್ಕೆ ಬರುವ ಅತಿಥಿಗಳನ್ನು ಪ್ರೀತಿಯಿಂದ ಸ್ವಾಗತಿಸಿ, ಅವರಿಗೆ ಊಟೋಪಚಾರ ಮಾಡುವುದಕ್ಕೂ ಗ್ರಾಮಸ್ಥರು ಹೆಚ್ಚಿನ ಮಹತ್ವ ನೀಡುತ್ತಾರೆ. ಮದುವೆ ಸಮಾರಂಭಗಳನ್ನೂ ವಳ್ಳಲಾರ್ ಅವರ ಧಾರ್ಮಿಕ ಮತ್ತು ಸನ್ಮಾರ್ಗದ ತತ್ವಗಳಿಗೆ ಅನುಗುಣವಾಗಿ ನಡೆಸಲಾಗುತ್ತದೆ.

ರಾಸಾಯನಿಕ ಮುಕ್ತ ಕೃಷಿಗೂ ಆದ್ಯತೆ

ಗ್ರಾಮಸ್ಥರ ಪ್ರಮುಖ ಉದ್ಯೋಗ ಕೃಷಿ. ಕೃಷಿಯಲ್ಲಿಯೂ ನೈಸರ್ಗಿಕ ಪದ್ಧತಿಗೆ ಆದ್ಯತೆ ನೀಡುವ ಅವರು, ರಾಸಾಯನಿಕ ಕೀಟನಾಶಕಗಳನ್ನು ಬಳಸದೆ ಬೆಳೆ ಬೆಳೆಯಲು ಪ್ರಯತ್ನಿಸುತ್ತಾರೆ. ಇದರಿಂದ ಪರಿಸರ ಮತ್ತು ಇತರ ಜೀವಿಗಳಿಗೆ ಹಾನಿಯಾಗುವುದನ್ನು ತಪ್ಪಿಸುವ ಮಹತ್ವದ ಉದ್ದೇಶ ಹೊಂದಿದ್ದಾರೆ.

ಇನ್ನು ವಳ್ಳಲಾರ್ ಅವರ ಪ್ರಸಿದ್ಧ ಮಂತ್ರವಾದ ‘ಅರುಟ್ಪೆರುಂಜ್ಯೋತಿ’ಯಿಂದ ಪ್ರೇರಿತರಾಗಿ, ಗ್ರಾಮದಲ್ಲಿ ಜನಿಸುವ ಮಕ್ಕಳಿಗೆ ‘ಅ’ ಅಕ್ಷರದಿಂದ ಆರಂಭವಾಗುವ ಹೆಸರುಗಳನ್ನು ಇಡುವ ಸಂಪ್ರದಾಯವೂ ಇದೆ. ಪ್ರತಿ ಸೋಮವಾರ ಹಸುಗಳಿಗೆ ಸ್ನಾನ ಮಾಡಿಸಿ, ವಿಶೇಷ ಆಹಾರ ನೀಡುವ ಪದ್ಧತಿಯನ್ನೂ ಗ್ರಾಮಸ್ಥರು ಪಾಲಿಸುತ್ತಾರೆ.

ಒಟ್ಟಾರೆ, ಕಾಲ ಬದಲಾದಂತೆ ಆಹಾರ ಮತ್ತು ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದ್ದರೂ, ವಡಿಮಾನೈಪಟ್ಟಿಯ ಜನರು ಮಾತ್ರ ಕಳೆದ 63 ವರ್ಷಗಳಿಂದ ತಮ್ಮ ತತ್ವ ಮತ್ತು ಸಂಪ್ರದಾಯಗಳನ್ನು ಉಳಿಸಿಕೊಂಡು ಬಂದಿದ್ದಾರೆ. ಸಸ್ಯಾಹಾರ, ಜೀವಕಾರುಣ್ಯ, ಮದ್ಯಪಾನದಿಂದ ದೂರವಿರುವಿಕೆ ಹಾಗೂ ನೈಸರ್ಗಿಕ ಕೃಷಿಗೆ ಆದ್ಯತೆ ನೀಡುವ ಈ ಗ್ರಾಮದ ಬದುಕು ಇಂದಿಗೂ ಹಲವರಲ್ಲಿ ತೀವ್ರ ಕುತೂಹಲ ಕೆರಳಿಸಿದೆ,(ಏಜೆನ್ಸೀಸ್).