ನವದೆಹಲಿ: ದೇಶದಲ್ಲಿ ತೀವ್ರ ಚರ್ಚೆ ಹುಟ್ಟು ಹಾಕಿರುವ ನೋಯ್ಡಾದ ಮಾಡೆಲ್ ಕಮ್ ಗೃಹಿಣಿ ತ್ವಿಶಾ ಶರ್ಮಾ(Twisha Sharma) ಅವರ ಆತ್ಮಹತ್ಯೆ ಪ್ರಕರಣದ ಬಗ್ಗೆ ಕುಟುಂಬಸ್ಥರ ಒತ್ತಾಯಕ್ಕೆ ಮಣಿದಿರುವ ಮಧ್ಯಪ್ರದೇಶ ಸರ್ಕಾರವೂ ಶುಕ್ರವಾರ(ಮೇ 22) ಕೇಂದ್ರ ತನಿಖಾ ದಳ(ಸಿಬಿಐ) ತನಿಖೆಗೆ ಶಿಫಾರಸು ಮಾಡಿದೆ ಎಂದು ವರದಿಯಾಗಿದೆ.
ಈ ಕುರಿತು ಅಧಿಸೂಚನೆ ಹೊರಡಿಸಿರುವ ಮಧ್ಯಪ್ರದೇಶ ಸರ್ಕಾರ, ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯ್ದೆ, 1946 ರ ಸೆಕ್ಷನ್ 6 ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಿ, ಮಧ್ಯಪ್ರದೇಶ ಸರ್ಕಾರವು ರಾಜ್ಯಪಾಲರ ಹೆಸರಿನಲ್ಲಿ, ಈ ನಿರ್ದಿಷ್ಟ ಪ್ರಕರಣದ ತನಿಖೆಗಾಗಿ ರಾಜ್ಯದಾದ್ಯಂತ ಸಿಬಿಐ ಸದಸ್ಯರ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಲು ಔಪಚಾರಿಕ ಒಪ್ಪಿಗೆಯನ್ನು ನೀಡಿದೆ.
ಅಧಿಕಾರವು ಪ್ರಾಥಮಿಕ ಅಪರಾಧದ ತನಿಖೆ, ಅಪರಾಧಕ್ಕೆ ಯಾವುದೇ ಪ್ರಚೋದನೆ ಮತ್ತು ಯಾವುದೇ ಸಂಬಂಧಿತ ಕ್ರಿಮಿನಲ್ ಪಿತೂರಿಯನ್ನು ಸ್ಪಷ್ಟವಾಗಿ ಒಳಗೊಳ್ಳುತ್ತದೆ ಎಂದು ಹೇಳಿದೆ. ಮತ್ತು ಗೃಹ ಇಲಾಖೆಯ ಕಾರ್ಯದರ್ಶಿ ಕೃಷ್ಣವೇಣಿ ದೇಶವತು ಅವರು ಸಹಿ ಮಾಡಿರುವ ಈ ಅಧಿಸೂಚನೆಯನ್ನು, ಪ್ರಕರಣದ ಕಡತಗಳ ತಕ್ಷಣದ ವರ್ಗಾವಣೆಯನ್ನು ಪ್ರಾರಂಭಿಸಲು ಕೇಂದ್ರ ಮತ್ತು ರಾಜ್ಯಗಳ ಉನ್ನತ ಅಧಿಕಾರಿಗಳಿಗೆ ರವಾನಿಸಲಾಗಿದೆ.
ಕಳೆದ ವಾರ 31 ವರ್ಷದ ತ್ವಿಶಾ ಶರ್ಮಾ ಭೋಪಾಲ್‌ನಲ್ಲಿರುವ ಅವರ ಮನೆಯ ಟೆರೇಸ್‌ನಲ್ಲಿ ಸ್ಥಾಪಿಸಲಾದ ವ್ಯಾಯಾಮ ರಾಡ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆ ಬಳಿಕ ಟುಂಬ ಸದಸ್ಯರು ವರದಕ್ಷಿಣೆಗಾಗಿ ಅತ್ತೆ-ಮಾವಂದಿರು ದೀರ್ಘಕಾಲದ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದರು. ಸಹೋದರ ಹರ್ಷಿತ್ ಶರ್ಮಾಗೆ ತೀವ್ರ ಸಂಕಷ್ಟದಲ್ಲಿರುವುದಾಗಿ ಸಂದೇಶ ಕಳುಹಿಸುವ ಮೂಲಕ ಅಸಹಾಯಕತೆ ವ್ಯಕ್ತಪಡಿಸಿದ್ದಳು ಎನ್ನಲಾಗಿದೆ
2024ರಲ್ಲಿ ಡೇಟಿಂಗ್ ಆ್ಯಪ್ ಮೂಲಕ ನಿವೃತ್ತ ಸೆಷನ್ಸ್ ನ್ಯಾಯಾಧೀಶ ಗಿರಿಬಾಲಾ ಸಿಂಗ್ ಅವರ ಮಗ ಸಮರ್ಥ್ ಸಿಂಗ್ ಅವರನ್ನು ಭೇಟಿಯಾಗಿದ್ದ ತ್ವಿಶಾ , 2025 ಡಿಸೆಂಬರ್ನಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಇನ್ನೂ ತ್ವಿಶಾ ನಿಧನರಾದ ಬಳಿಕ ಪತಿ ನಾಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ (ಏಜೆನ್ಸೀಸ್).