ನೋಯ್ಡಾ ಟೆಕ್ಕಿ ದುರಂತ ಸಾವು: ಸಿಎಂ ಯೋಗಿ ಗರಂ; ಬಿಲ್ಡರ್ ಅರೆಸ್ಟ್, ನೋಯ್ಡಾ ಅಥಾರಿಟಿ ಸಿಇಒಗೆ ಶಾಕ್ 
ದೇಶ

ನೋಯ್ಡಾ ಟೆಕ್ಕಿ ದುರಂತ ಸಾವು: ಸಿಎಂ ಯೋಗಿ ಗರಂ; ಬಿಲ್ಡರ್ ಅರೆಸ್ಟ್, ನೋಯ್ಡಾ ಅಥಾರಿಟಿ ಸಿಇಒಗೆ ಶಾಕ್ | Noida techie tragic death

ಲಖನೌ: ನೋಯ್ಡಾದ ಸೆಕ್ಟರ್ 150ರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಯುವರಾಜ್ ಮೆಹ್ತಾ(Noida techie tragic death) ಅವರು ನೀರು ತುಂಬಿದ ಗುಂಡಿಗೆ ಬಿದ್ದು ಮೃತಪಟ್ಟ ಘಟನೆಯು ಉತ್ತರ ಪ್ರದೇಶ ರಾಜಕೀಯ ಮತ್ತು ಆಡಳಿತ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ದಾರುಣ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಧಿಕಾರಿಗಳಿಗೆ ಚಳಿ ಬಿಡಿಸಿದ್ದು, ಬಿಲ್ಡರ್ ಬಂಧನ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ.

ಸಿಎಂ ಯೋಗಿ ಕೆಂಗಣ್ಣು: ಎಸ್‌ಐಟಿ ತನಿಖೆಗೆ ಆದೇಶ

ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಿಎಂ ಯೋಗಿ ಆದಿತ್ಯನಾಥ್, ಈ ಸಾವಿಗೆ ಅಧಿಕಾರಿಗಳ ಮತ್ತು ಬಿಲ್ಡರ್‌ನ ಬೇಜವಾಬ್ದಾರಿಯೇ ಕಾರಣ ಎಂದು ಕಿಡಿಕಾರಿದ್ದಾರೆ. ಪ್ರಕರಣದ ತನಿಖೆಗಾಗಿ ತಕ್ಷಣವೇ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿದ್ದು, ಘಟನೆಗೆ ಸಂಬಂಧಿಸಿದ ಪ್ರತಿಯೊಂದು ಆಯಾಮವನ್ನು ತನಿಖೆ ಮಾಡಲು ಸೂಚಿಸಲಾಗಿದೆ.
ಬಿಲ್ಡರ್ ಅಭಯ್ ಕುಮಾರ್ ಬಂಧನ
ಸೊಸೈಟಿಯ ನಿರ್ಮಾಣ ಹಂತದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಆರೋಪದ ಮೇಲೆ ಎಂಜೆ ವಿಶ್ ಟೌನ್ ಸೊಸೈಟಿಯ (MJ Wish Town Society) ಬಿಲ್ಡರ್ ಅಭಯ್ ಕುಮಾರ್​ರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ನಿರ್ಮಾಣ ಸ್ಥಳದಲ್ಲಿ ತಡೆಗೋಡೆ ಅಥವಾ ಬ್ಯಾರಿಕೇಡ್‌ಗಳನ್ನು ಅಳವಡಿಸದೆ ನಿರ್ಲಕ್ಷ್ಯ ವಹಿಸಿದ್ದೇ ಟೆಕ್ಕಿಯ ಸಾವಿಗೆ ನೇರ ಕಾರಣ ಎಂಬ ಪ್ರಾಥಮಿಕ ವರದಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ನೋಯ್ಡಾ ಅಥಾರಿಟಿ ಸಿಇಒ ಲೋಕೇಶ್ ಎಂ ಪದಚ್ಯುತಿ

ಆಡಳಿತಾತ್ಮಕ ವೈಫಲ್ಯದ ಹೊಣೆ ಹೊರಿಸಿ ನೋಯ್ಡಾ ಪ್ರಾಧಿಕಾರದ ಸಿಇಒ ಲೋಕೇಶ್ ಎಂ ಅವರನ್ನು ಸ್ಥಾನದಿಂದ ತಕ್ಷಣವೇ ತೆಗೆದುಹಾಕಲಾಗಿದೆ. ಅಲ್ಲದೆ, ಲೋಕೇಶ್​ರನ್ನು ಪ್ರಸ್ತುತ ಯಾವುದೇ ಹುದ್ದೆ ನೀಡದೆ ವೇಟಿಂಗ್ ಲಿಸ್ಟ್​ನಲ್ಲಿ ಇರಿಸಲಾಗಿದ್ದು, ಈ ಕ್ರಮವು ಭ್ರಷ್ಟ ಅಥವಾ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳಿಗೆ ಸಿಎಂ ನೀಡಿರುವ ಬಲವಾದ ಸಂದೇಶ ಎಂದು ವಿಶ್ಲೇಷಿಸಲಾಗುತ್ತಿದೆ.

ಘಟನೆಯ ಹಿನ್ನೆಲೆ: ಅಪ್ಪಾ ನನ್ನ ಉಳಿಸಿ ಎಂಬ ಕೊನೆಯ ಕರೆ

ಸಾಫ್ಟ್‌ವೇರ್ ಎಂಜಿನಿಯರ್ ಯುವರಾಜ್ ಮೆಹ್ತಾ ಅವರು ಕಳೆದ ಶುಕ್ರವಾರ ರಾತ್ರಿ ಮಂಜಿನ ಮರೆಯಲ್ಲಿ ದಾರಿ ತಪ್ಪಿ ಕಾರಿನ ಸಮೇತ ಆಳವಾದ ನೀರಿನ ಗುಂಡಿಗೆ ಬಿದ್ದಿದ್ದರು. ಸಾಯುವ ಮುನ್ನ ಅವರು ತನ್ನ ತಂದೆಗೆ ಫೋನ್ ಮಾಡಿ ಸಹಾಯಕ್ಕಾಗಿ ಅಂಗಲಾಚಿದ್ದರು. ರಕ್ಷಣಾ ಕಾರ್ಯಾಚರಣೆ ತಡವಾದ ಕಾರಣ ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.
ಯುವರಾಜ್ ಮೆಹ್ತಾ ಅವರ ತಂದೆ ರಾಜ್​ಕುಮಾರ್​ ಮೆಹ್ತಾ ಅವರು ನೀಡಿದ ಪ್ರತಿಕ್ರಿಯೆ ಅತ್ಯಂತ ಹೃದಯವಿದ್ರಾವಕವಾಗಿದೆ. ಮಗನ ಸಾವಿನ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಆಡಳಿತ ವ್ಯವಸ್ಥೆಯ ವಿರುದ್ಧ ಕಣ್ಣೀರು ಹಾಕುತ್ತಾ ಆಕ್ರೋಶ ಹೊರಹಾಕಿದ್ದಾರೆ.

ಅವನು ನನ್ನನ್ನು ಉಳಿಸಿ ಎಂದು ಅಂಗಲಾಚುತ್ತಿದ್ದ

ನನ್ನ ಮಗ ಸಾಯುವ ಮುನ್ನ ನನಗೆ ಫೋನ್ ಮಾಡಿದ್ದ. 'ಅಪ್ಪಾ, ನಾನು ಗುಂಡಿಗೆ ಬಿದ್ದಿದ್ದೇನೆ, ನನ್ನನ್ನು ಉಳಿಸಿಕೊಳ್ಳಿ, ನನಗೆ ಸಾಯಲು ಇಷ್ಟವಿಲ್ಲ' ಎಂದು ಫೋನ್‌ನಲ್ಲಿ ಕಿರುಚುತ್ತಿದ್ದ. ಅವನು ಸುಮಾರು ಒಂದೂವರೆ ಗಂಟೆಗಳ ಕಾಲ ಸಾವಿನೊಂದಿಗೆ ಹೋರಾಡಿದ್ದಾನೆ. ಕತ್ತಲೆಯಲ್ಲಿ ಸಹಾಯಕ್ಕಾಗಿ ಮೊಬೈಲ್ ಟಾರ್ಚ್ ತೋರಿಸುತ್ತಿದ್ದ. ನಾನೂ ಕೂಡ ಅವನನ್ನು ಉಳಿಸಿಕೊಳ್ಳಲು ಓಡೋಡಿ ಬಂದೆ, ಆದರೆ ಈ ವ್ಯವಸ್ಥೆಯ ವೈಫಲ್ಯ ಅವನನ್ನು ನನ್ನಿಂದ ಮಗನನ್ನು ಕಿತ್ತುಕೊಂಡಿತು ಎಂದು ರವೀಂದರ್ ಮೆಹ್ತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಈ ಘಟನೆಯು ಸ್ಥಳೀಯ ನಿವಾಸಿಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ರಸ್ತೆಗಳಲ್ಲಿ ಸರಿಯಾದ ದೀಪದ ವ್ಯವಸ್ಥೆ ಮತ್ತು ಸುರಕ್ಷತಾ ಬ್ಯಾರಿಕೇಡ್‌ಗಳಿಲ್ಲದ ಬಗ್ಗೆ ಜನರು ಆಕ್ರೋಶ ಹೊರಹಾಕಿದ್ದರು. ಈಗ ಸರ್ಕಾರದ ಈ ಮಿಂಚಿನ ಕ್ರಮವು ಜನರಲ್ಲಿ ಸ್ವಲ್ಪ ಮಟ್ಟಿನ ಸಮಾಧಾನ ತಂದಿದೆ,(ಏಜೆನ್ಸೀಸ್).