Narendra Modi | ಪ್ರಧಾನಿ ನರೇಂದ್ರ ಮೋದಿ 
ದೇಶ

ರೈತರು ಹಾಗೂ ಯುವಜನತೆಗೆ ಪ್ರಧಾನಿ ಮೋದಿ ಗಿಫ್ಟ್.. ಜೇವರ್ ಏರ್‌ಪೋರ್ಟ್‌ನಿಂದ ಬದಲಾಗಲಿದೆಯಂತೆ ಪಶ್ಚಿಮ ಉತ್ತರ ಪ್ರದೇಶದ ಹಣೆಬರಹ! | Narendra Modi

ಲಖನೌ: ಉತ್ತರ ಪ್ರದೇಶದ ಜೇವರ್‌ನಲ್ಲಿ ನಿರ್ಮಾಣಗೊಂಡಿರುವ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತವನ್ನು ಶನಿವಾರ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಈ ಯೋಜನೆಯು ಉತ್ತರ ಪ್ರದೇಶದ ರೈತರು, ಸಣ್ಣ ವ್ಯಾಪಾರಿಗಳು ಮತ್ತು ಯುವಜನರ ಬದುಕಿನಲ್ಲಿ ಹೊಸ ಆಶಾದಾಯಕ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಭರವಸೆ ನೀಡಿದ್ದಾರೆ.
ವಿಮಾನ ನಿಲ್ದಾಣದ ಆವರಣದಲ್ಲಿರುವ ನೂತನ ಟರ್ಮಿನಲ್ ಪರಿಶೀಲಿಸಿದ ಪ್ರಧಾನಿ ಮೋದಿ, ಈ ಬೃಹತ್ ಮೂಲಸೌಕರ್ಯವು ಭಾರತದ ಹೊಸ ಚೈತನ್ಯದ ಸಂಕೇತ ಎಂದು ಬಣ್ಣಿಸಿದರು.
ಈ ವಿಮಾನ ನಿಲ್ದಾಣವು ಪಶ್ಚಿಮ ಉತ್ತರ ಪ್ರದೇಶದ ಆರ್ಥಿಕ ಚಿತ್ರಣವನ್ನೇ ಬದಲಿಸಲಿದ್ದು, ಇಲ್ಲಿಂದ ವಿಮಾನಗಳು ಹಾರಾಟ ಆರಂಭಿಸಿದಾಗ, ಅದು ಅಭಿವೃದ್ಧಿ ಹೊಂದಿದ ಉತ್ತರ ಪ್ರದೇಶದ ಜಾಗತಿಕ ಗುರುತಾಗಲಿದೆ. ಆಗ್ರಾ, ಮಥುರಾ, ಮೀರತ್ ಮತ್ತು ಗಾಜಿಯಾಬಾದ್‌ನಂತಹ ಸುತ್ತಮುತ್ತಲಿನ ನಗರಗಳಿಗೆ ಇದರಿಂದ ಹೆಚ್ಚಿನ ಲಾಭವಾಗಲಿದೆ ಎಂದು ತಿಳಿಸಿದರು. ಯುಪಿ ಇಂದು ದೇಶದಲ್ಲೇ ಅತಿ ಹೆಚ್ಚು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ರಾಜ್ಯವಾಗಿ ಹೊರಹೊಮ್ಮುತ್ತಿರುವುದು ವಿಕಸಿತ ಭಾರತ ಅಭಿಯಾನದ ಪ್ರಮುಖ ಮೈಲಿಗಲ್ಲು ಎಂದು ಶ್ಲಾಘಿಸಿದರು.
ಸುಮಾರು 11,200 ಕೋಟಿ ರೂಪಾಯಿ ವೆಚ್ಚದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿ ನಿರ್ಮಾಣವಾಗಿರುವ ಈ ವಿಮಾನ ನಿಲ್ದಾಣವು ಕೇವಲ ಪ್ರಯಾಣಿಕರಿಗಷ್ಟೇ ಸೀಮಿತವಾಗಿಲ್ಲ. ಇದು ರಸ್ತೆ, ರೈಲು ಮತ್ತು ಮೆಟ್ರೋ ಸಂಪರ್ಕಗಳನ್ನು ಒಳಗೊಂಡ ಬಹು-ಮಾದರಿ ಸಾರಿಗೆ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಆರಂಭಿಕ ಹಂತದಲ್ಲಿ ವರ್ಷಕ್ಕೆ 1.2 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿರುವ ಈ ನಿಲ್ದಾಣವನ್ನು ಭವಿಷ್ಯದಲ್ಲಿ 7 ಕೋಟಿವರೆಗೆ ವಿಸ್ತರಿಸುವ ಗುರಿ ಹೊಂದಲಾಗಿದೆ. ಇದರೊಂದಿಗೆ ಬೃಹತ್ ಸರಕು ಕೇಂದ್ರದ ಮೂಲಕ ಕೃಷಿ ಉತ್ಪನ್ನಗಳು ಮತ್ತು ಕೈಗಾರಿಕಾ ಸರಕುಗಳ ರಫ್ತಿಗೂ ಇದು ದೊಡ್ಡ ವೇದಿಕೆಯಾಗಲಿದೆ.
ಜಾಗತಿಕ ವಿದ್ಯಮಾನಗಳ ಬಗ್ಗೆಯೂ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಮತ್ತು ಅಗತ್ಯ ವಸ್ತುಗಳ ಕೊರತೆಯಿಂದ ಜಗತ್ತು ಸಂಕಷ್ಟದಲ್ಲಿರುವಾಗ, ಭಾರತವು ಅಂತಹ ಬಿಕ್ಕಟ್ಟುಗಳನ್ನು ಸಮರ್ಥವಾಗಿ ಎದುರಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಇಂಧನ ಮತ್ತು ರಸಗೊಬ್ಬರಗಳ ಬೆಲೆ ಏರಿಕೆಯಾಗುತ್ತಿದ್ದರೂ, ಅದರ ಬಿಸಿ ಸಾಮಾನ್ಯ ಕುಟುಂಬಗಳು ಮತ್ತು ರೈತರಿಗೆ ತಟ್ಟದಂತೆ ಸರ್ಕಾರವು ಪೂರ್ಣ ಶಕ್ತಿಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಭರವಸೆ ನೀಡಿದರು(ಏಜೆನ್ಸೀಸ್​​).