ವಂದೇ ಭಾರತ್​ ಸ್ಲೀಪರ್​ ರೈಲು 
ದೇಶ

ನೋ VIP ಕೋಟಾ, ಓನ್ಲಿ ಫಾರ್​ ಲೋಕಲ್​... ಭಾರತದ ಮೊದಲ ವಂದೇ ಭಾರತ್​ ಸ್ಲೀಪರ್​ ರೈಲಿನ ವಿಶೇಷತೆಗಳಿವು... Vande Bharat Sleeper Train

ಪ್ರಮುಖ ಮುಖ್ಯಾಂಶಗಳು

  • ದೇಶದ ಮೊಟ್ಟ ಮೊದಲ ವಂದೇ ಭಾರತ್​ ಸ್ಲೀಪರ್​ ರೈಲು ಪರಿಚಯಿಸಲು ಭಾರತೀಯ ರೈಲ್ವೆ ಇಲಾಖೆ ಸಜ್ಜು
  • ಈ ತಿಂಗಳ ಕೊನೆಯಲ್ಲಿ ಗುವಾಹಟಿ ಮತ್ತು ಕೋಲ್ಕತ ನಡುವೆ ಈ ರೈಲಿನ ಸೇವೆ ಆರಂಭ
  • ವಂದೇ ಭಾರತ್​ ಸ್ಲೀಪರ್​ ರೈಲು ಪರಿಚಯಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿರುವ ಕೇಂದ್ರ ಸರ್ಕಾರ
  • ಈ ರೈಲಿನಲ್ಲಿ ಯಾವುದೇ ವಿಐಪಿ ಅಥವಾ ಎಮರ್ಜೆನ್ಸಿ ಕೋಟಾಗೆ ಅನುಮತಿ ಇರುವುದಿಲ್ಲ
ನವದೆಹಲಿ: ಭಾರತೀಯ ರೈಲ್ವೆ ಇಲಾಖೆ ಮೊಟ್ಟ ಮೊದಲ ವಂದೇ ಭಾರತ್​ ಸ್ಲೀಪರ್​ ರೈಲು ( Vande Bharat Sleeper Train ) ಪರಿಚಯಿಸಲು ಸಜ್ಜಾಗಿದೆ. ಈ ರೈಲಿನ ವಿಶೇಷ ಏನೆಂದರೆ, ಯಾವುದೇ ವಿಐಪಿ ಕೋಟಾ ಆಗಲಿ ಇರುವುದಿಲ್ಲ. ಈ ತಿಂಗಳ ಕೊನೆಯಲ್ಲಿ ಗುವಾಹಟಿ ಮತ್ತು ಕೋಲ್ಕತ ನಡುವೆ ಈ ರೈಲಿನ ಸೇವೆ ಆರಂಭವಾಗಲಿದ್ದು, ದೀರ್ಘ ಸಮಯ ಹಾಗೂ ದೂರದ ರಾತ್ರಿ ರೈಲು ಪ್ರಯಾಣದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಆಗಲಿದೆ. 
ವಂದೇ ಭಾರತ್​ ಸ್ಲೀಪರ್​ ರೈಲು ಪರಿಚಯಿಸಲು ಕೇಂದ್ರ ಸರ್ಕಾರ ಈಗಾಗಲೇ ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಈ ರೈಲು ಸಾರ್ವಜನಿಕರಿಗೆ ಮೀಸಲಾಗಿರಲಿದ್ದು, ಯಾವುದೇ ವಿಐಪಿ ಅಥವಾ ಎಮರ್ಜೆನ್ಸಿ ಕೋಟಾಗೆ ಅನುಮತಿ ಇರುವುದಿಲ್ಲ. ಇದಿಷ್ಟೇ ಅಲ್ಲದೆ, ಯಾವುದೇ ಹಿರಿಯ ರೈಲ್ವೆ ಅಧಿಕಾರಿಗಳು ತಮ್ಮ ಪಾಸ್​ ಬಳಸಲು ಕೂಡ ಅನುಮತಿ ಇಲ್ಲ ಎಂದು ಮೂಲಗಳು ತಿಳಿಸಿವೆ. ಈ ಒಂದು ರೈಲು ಸೇವೆ ಈಶಾನ್ಯ ಪ್ರದೇಶ ಮತ್ತು ಪೂರ್ವ ಭಾರತದ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುತ್ತದೆ. 
ಈ ವಿಶೇಷ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮೊದಲೇ ದೃಢೀಕೃತ ಟಿಕೆಟ್‌ಗಳನ್ನು ಮಾತ್ರ ನೀಡಲಾಗುವುದು. ಇದರಿಂದ ವೇಟಿಂಗ್​ ಲಿಸ್ಟ್ ಗಣನೀಯವಾಗಿ ಕಡಿಮೆಯಾಗುತ್ತದೆ. ಅಲ್ಲದೆ, ಈ ರೈಲಿನಲ್ಲಿ ಆರ್​ಎಸಿ ( Reservation Against Cancellation) ವ್ಯವಸ್ಥೆ ಇರುವುದಿಲ್ಲ. ಆರ್​ಎಸಿ ಅಂದರೆ, ಟ್ರೈನ್‌ನಲ್ಲಿ ಸೀಟ್ ಅಥವಾ ಬರ್ತ್ ಪೂರ್ತಿಯಾಗಿದ್ದರೂ, ರದ್ದತಿ ಆದಂತಹ ಸಮಯದಲ್ಲಿ ಲಭ್ಯವಾಗುವ ಸೀಟ್‌ಗಾಗಿ ಕಾಯುವ ವ್ಯವಸ್ಥೆಯಾಗಿದೆ. RAC ಟಿಕೆಟ್ ಪಡೆದ ಪ್ರಯಾಣಿಕರು ಒಂದೇ ಬರ್ತ್‌ನಲ್ಲಿ ಇಬ್ಬರು ಕೂತು ಪ್ರಯಾಣಿಸಬಹುದು (ಸೈಡ್ ಲೋಯರ್ ಅಥವಾ ಮಧ್ಯದಲ್ಲಿ), ಆದರೆ ಕನ್ಫರ್ಮ್ ಆದರೆ ಮಾತ್ರ ಪೂರ್ತಿ ಬರ್ತ್ ಸಿಗುತ್ತದೆ. ಆದರೆ, ಈ ವ್ಯವಸ್ಥೆ ವಂದೇ ಭಾರತ್​ ಸ್ಲೀಪರ್​ ರೈಲಿನಲ್ಲಿ ಇರುವುದಿಲ್ಲ. ಏಕೆಂದರೆ, ಇಲ್ಲಿ ದೃಢೀಕೃತ ಟಿಕೆಟ್‌ಗಳನ್ನು ಮಾತ್ರ ನೀಡಲಾಗುತ್ತದೆ. 
ಈ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕಂಬಳಿಗಳು ಸೇರಿದಂತೆ ಸಂಪೂರ್ಣವಾಗಿ ಅಪ್​ಡೇಟ್​ ಮಾಡಿದ ಬೆಡ್‌ರೋಲ್ ಸಿಗಲಿದೆ. ಸಾಮಾನ್ಯ ರೈಲುಗಳಿಗೆ ಹೋಲಿಸಿದರೆ ಉತ್ತಮ ಗುಣಮಟ್ಟವನ್ನು ಹೊಂದಿರುವ ಆಧುನಿಕ ಬೆಡ್‌ರೋಲ್ ಆಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು, ಅತ್ಯಾಧುನಿಕ ಸೌಲಭ್ಯಗಳು, ಪಾರದರ್ಶಕ ಟಿಕೆಟ್‌  ವ್ಯವಸ್ಥೆ ಮತ್ತು ಏಕರೂಪದ ನಿಯಮಗಳನ್ನು ಆನಂದಿಸಲಿದ್ದಾರೆ. ಅವರಿಗೆ ಸ್ಥಳೀಯ ಪಾಕಪದ್ಧತಿಯನ್ನು ಸಹ ಒದಗಿಸಲಾಗುತ್ತದೆ. ರೈಲಿನಲ್ಲಿರುವ ಎಲ್ಲಾ ಸಿಬ್ಬಂದಿ ಸಮವಸ್ತ್ರ ಧರಿಸಿ ಅಗತ್ಯ ಸೇವೆಗಳನ್ನು ಒದಗಿಸುತ್ತಾರೆ. ಒಟ್ಟಾರೆ, ಈ ರೈಲು ಭಾರತದ ಸಂಸ್ಕೃತಿಯನ್ನು ಪ್ರದರ್ಶಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಅಂದಹಾಗೆ, ವಂದೇ ಭಾರತ್ ಸ್ಲೀಪರ್​ ರೈಲಿನಲ್ಲಿ 3 ಎಸಿಯ 11 ಕೋಚ್‌ಗಳು, 2 ಎಸಿಯ ನಾಲ್ಕು ಕೋಚ್‌ಗಳು ಮತ್ತು 1 ಎಸಿಯ ಒಂದು ಕೋಚ್ ಇವೆ. ಒಟ್ಟು 823 ಬರ್ತ್‌ಗಳಲ್ಲಿ, 611 ಮೂರು ಎಸಿ, 188 ಎರಡು ಎಸಿ ಮತ್ತು 24 ಒಂದು ಎಸಿ ಹೊಂದಿರುತ್ತವೆ. ಈ ರೈಲು ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಅವುಗಳಲ್ಲಿ ಸುಧಾರಿತ ಹಾಗೂ ಮೆತ್ತನೆ ಅನುಭವ ನೀಡುವಂತಹ ಸೀಟುಗಳೊಂದಿಗೆ ಆಕರ್ಷವಾಗಿ ಬರ್ತ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಸುಗಮ ಚಲನೆಗಾಗಿ ವೆಸ್ಟಿಬುಲ್‌ಗಳನ್ನು ಹೊಂದಿರುವ ಸ್ವಯಂಚಾಲಿತ ಬಾಗಿಲುಗಳು ಹಾಗೂ ಯಾವುದೇ ಶಬ್ಧವಿಲ್ಲದೇ ಶಾಂತವಾಗಿ ಪ್ರಯಾಣಿಸುವ ವ್ಯವಸ್ಥೆ ಇದೆ. ಸ್ವಯಂಚಾಲಿತ ರೈಲು ರಕ್ಷಣಾ ವ್ಯವಸ್ಥೆ (ಕವಚ), ತುರ್ತು ಟಾಕ್-ಬ್ಯಾಕ್ ವ್ಯವಸ್ಥೆ ಮತ್ತು ಹೆಚ್ಚಿನ ನೈರ್ಮಲ್ಯ ಮಾನದಂಡಗಳನ್ನು ಕಾಪಾಡಿಕೊಳ್ಳಲು ಸೋಂಕುನಿವಾರಕ ತಂತ್ರಜ್ಞಾನವನ್ನು ಈ ರೈಲು ಒಳಗೊಂಡಿದೆ.
ಅಂದಹಾಗೆ, ವಂದೇ ಭಾರತ್ ಸ್ಲೀಪರ್ ರೈಲು 2026, ಜನವರಿ 17ರಂದು ತನ್ನ ಮೊದಲ ಸೇವೆಯನ್ನು ಆರಂಭಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಉದ್ಘಾಟಿಸಲಿದ್ದಾರೆ, (ಏಜೆನ್ಸೀಸ್​).