West Bengal Election ಸಾಂದರ್ಭಿಕ ಚಿತ್ರ
ಕೊಲ್ಕತ್ತಾ: ಪಶ್ಚಿಮ ಬಂಗಾಳದ (West Bengal Election) ವಿಧಾನಸಭಾ ಚುನಾವಣಾ ಫಲಿತಾಂಶಗಳು ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದ ಯಾವುದೇ ಭಾಗದಲ್ಲಿ ಅಭ್ಯರ್ಥಿಗಳ ವಿಜಯೋತ್ಸವ ಆಚರಿಸಲು ಅವಕಾಶವಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಫಲಿತಾಂಶದ ನಂತರ ಸಂಭ್ರಮಾಚರಣೆಯ ನೆಪದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬರುವ ಸಾಧ್ಯತೆ ಹೆಚ್ಚಿರುವುದರಿಂದ ಗೆದ್ದ ಅಭ್ಯರ್ಥಿಗಳ ಮೆರವಣಿಗೆ ಮತ್ತು ಸಾರ್ವಜನಿಕ ಸಭೆಯನ್ನು ಆಯೋಜಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ವಿಶೇಷ ವೀಕ್ಷಕ ಸುಬ್ರತಾ ಹೇಳಿದ್ದಾರೆ.
ವಿವಿಧ ರಾಜಕೀಯ ಪಕ್ಷಗಳ ಏಜೆಂಟರು ಎಣಿಕೆ ಕೇಂದ್ರಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿಬಂದಿದ್ದು, ಅವುಗಳನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ ಪರಿಶೀಲಿಸುತ್ತಿದೆ.
ಏಜೆಂಟರು ತಮ್ಮ ಕೇಂದ್ರಗಳನ್ನು ತಲುಪಲು ಸಾಧ್ಯವಾಗದ ಸಮಸ್ಯೆಯನ್ನು ನಾವು ಪರಿಶೀಲಿಸುತ್ತಿದ್ದೇವೆ. ಇದನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಆದಾಗ್ಯೂ, ಮತ ಎಣಿಕೆ ಪ್ರಕ್ರಿಯೆಯು ಪಾರದರ್ಶಕವಾಗಿ ಮತ್ತು ನ್ಯಾಯಸಮ್ಮತವಾಗಿ ನಡೆಯಲು ಎಲ್ಲಾ ಅಧಿಕೃತ ಏಜೆಂಟರ ಉಪಸ್ಥಿತಿ ಅಗತ್ಯವಾಗಿದ್ದು, ಅವರಿಗೆ ಸೂಕ್ತ ಭದ್ರತೆ ಮತ್ತು ಪ್ರವೇಶವನ್ನು ಖಚಿತಪಡಿಸಲು ಆಯೋಗವು ಕ್ರಮ ಕೈಗೊಳ್ಳುತ್ತಿದೆ (ಏಜೆನ್ಸೀಸ್).