ಸುಪ್ರೀಂ ಕೋರ್ಟ್  
ದೇಶ

ಮಸೂದೆಗಳನ್ನು ಅಂಗೀಕರಿಸಲು ರಾಷ್ಟ್ರಪತಿ, ರಾಜ್ಯಪಾಲರಿಗೆ ಯಾವುದೇ ಕಾಲಮಿತಿ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪು! Supreme Court

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರಪತಿ ಮತ್ತು ರಾಜ್ಯಪಾಲರ ಅಧಿಕಾರಗಳ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು
  • ಮಸೂದೆಗಳನ್ನು ಅಂಗೀಕರಿಸಲು ರಾಷ್ಟ್ರಪತಿಗಳಿಗೆ ಸಮಯ ಮಿತಿ ಇಲ್ಲ ಎಂದು ಕೋರ್ಟ್​
  • ರಾಜ್ಯಪಾಲರಿಗೆ ಸೀಮಿತ ಸೂಚನೆಗಳನ್ನು ಮಾತ್ರ ನೀಡಬಹುದು ಎಂಧ ನ್ಯಾಯಾಲಯ
ನವದೆಹಲಿ: ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳ ಮೇಲಿರುವ ರಾಷ್ಟ್ರಪತಿ ಮತ್ತು ರಾಜ್ಯಪಾಲರ ಅಧಿಕಾರಗಳ ಬಗ್ಗೆ ಸುಪ್ರೀಂ ಕೋರ್ಟ್ ( Supreme Court ) ಇಂದು ಮಹತ್ವದ ತೀರ್ಪು ಪ್ರಕಟಿಸಿದೆ. ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರು ಮಸೂದೆಗಳನ್ನು ಅಂಗೀಕರಿಸಲು ಯಾವುದೇ ಸಮಯದ ಮಿತಿಯಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮಸೂದೆಗಳನ್ನು ಅಂಗೀಕರಿಸಲು ರಾಷ್ಟ್ರಪತಿಗಳಿಗೆ ಸಮಯ ಮಿತಿಯನ್ನು ನೀಡಲಾಗುವುದಿಲ್ಲ. ರಾಜ್ಯಪಾಲರು ದೀರ್ಘಕಾಲದವರೆಗೆ ಮಸೂದೆಗಳನ್ನು ಅಂಗೀಕರಿಸದಿದ್ದರೆ, ಸಾಂವಿಧಾನಿಕ ನ್ಯಾಯಾಲಯಗಳು ನ್ಯಾಯಾಂಗ ಪರಿಶೀಲನೆಯ ಅಧಿಕಾರವನ್ನು ಹೊಂದಿರುತ್ತವೆ. ಈ ವೇಳೆ ರಾಜ್ಯಪಾಲರಿಗೆ ಸೀಮಿತ ಸೂಚನೆಗಳನ್ನು ಮಾತ್ರ ನ್ಯಾಯಾಲಯ ನೀಡಬಹುದು ಎಂದು ಸುಪ್ರೀಂ ಕೋರ್ಟ್​ ಹೇಳಿದೆ.
ಮಸೂದೆಗಳ ಅನುಮೋದನೆಗೆ ಸಂಬಂಧಿಸಿದಂತೆ ರಾಜ್ಯಪಾಲರ ಮುಂದೆ ಕೇವಲ 3 ಆಯ್ಕೆಗಳಿವೆ. ಅವುಗಳೆಂದರೆ, ಮಸೂದೆಗೆ ಅನುಮೋದನೆ ನೀಡುವುದು ಅಥವಾ ರಾಷ್ಟ್ರಪತಿಗೆ ಕಳುಹಿಸುವುದು ಅಥವಾ ಮಸೂದೆಯನ್ನು ಒಪ್ಪದೇ ವಿಧಾನಸಭೆಗೆ ವಾಪಸ್ ಕಳುಹಿಸುವುದು. ಆದರೆ, ಮಸೂದೆಗಳ ಮೇಲಿನ ನಿರ್ಧಾರ ತಿಳಿಸಲು ನ್ಯಾಯಾಲಯ ಈ ಹಿಂದೆ ಮೂರು ತಿಂಗಳ ಗಡುವು ವಿಧಿಸಿತ್ತು. ಈ ತೀರ್ಪಿನ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಹಿಂದೆ ಅಸಮಾಧಾನ ಹೊರಹಾಕಿದ್ದರು. ಅಲ್ಲದೆ, ಸುಪ್ರೀಂ ಕೋರ್ಟ್‌ಗೆ 14 ಪ್ರಶ್ನೆಗಳನ್ನು ಕೇಳಿದ್ದರು. ರಾಷ್ಟ್ರಪತಿಗಳು 143ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್ ಉಲ್ಲೇಖವನ್ನು ಪ್ರಶ್ನಿಸಿದ್ದರು.
ರಾಷ್ಟ್ರಪತಿಗಳ ಪ್ರಶ್ನೆಗಳ ಕುರಿತು ವಾದಗಳನ್ನು ಆಲಿಸಿದ ಬಳಿಕ, ಸಿಜೆಐ ಬಿಆರ್ ಗವಾಯಿ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಸೆಪ್ಟೆಂಬರ್‌ನಲ್ಲಿ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ತೀರ್ಪನ್ನು ಪ್ರಕಟಿಸಿದ್ದು, ಮಸೂದೆ ಅನುಮೋದನೆ ವಿಚಾರದಲ್ಲಿ ರಾಷ್ಟ್ರಪತಿಗಳಿಗಾಗಲಿ ಅಥವಾ ರಾಜ್ಯಪಾಲರಿಗಾಗಲಿ ಸಮಯ ಮಿತಿಯನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದಿದೆ. ಒಂದು ವೇಳೆ ರಾಜ್ಯಪಾಲರು ದೀರ್ಘಕಾಲದವರೆಗೆ ಮಸೂದೆಗಳನ್ನು ಅಂಗೀಕರಿಸದಿದ್ದರೆ, ಸಾಂವಿಧಾನಿಕ ನ್ಯಾಯಾಲಯಗಳು ನ್ಯಾಯಾಂಗ ಪರಿಶೀಲನೆಯ ಅಧಿಕಾರವನ್ನು ಹೊಂದಿರುತ್ತವೆ. ಈ ವೇಳೆ ರಾಜ್ಯಪಾಲರಿಗೆ ಸೀಮಿತ ಸೂಚನೆಗಳನ್ನು ಮಾತ್ರ ನ್ಯಾಯಾಲಯ ನೀಡಬಹುದು ಎಂದು ಸುಪ್ರೀಂ ಕೋರ್ಟ್​ ಹೇಳಿದೆ.
ಸಿಜೆಐ ಗವಾಯಿ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ವಿಕ್ರಮನಾಥ್, ಪಿ.ಎಸ್. ನರಸಿಂಹ ಮತ್ತು ಎ.ಎಸ್. ಚಂದೂರ್ಕರ್ ಅವರನ್ನು ಒಳಗೊಂಡ ಸಾಂವಿಧಾನಿಕ ಪೀಠ ಇಂದು ತೀರ್ಪು ಪ್ರಕಟಿಸಿದೆ. ಇನ್ನು ರಾಷ್ಟ್ರಪತಿ ಮತ್ತು ರಾಜ್ಯಪಾಲರ ಮೇಲೆ ನ್ಯಾಯಾಂಗವು ಅವಧಿಯನ್ನು ವಿಧಿಸುವುದು ಸೂಕ್ತವಲ್ಲ ಎಂದು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಆಡಳಿತದ ರಾಜ್ಯಗಳು ಹಿಂದಿನಿಂದಲೂ ವಾದಿಸುತ್ತಾ ಬರುತ್ತಿವೆ. ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರ ವಿವೇಚನಾ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು. ಮತ್ತೊಂದೆಡೆ, ಕಾಂಗ್ರೆಸ್ ಆಡಳಿತದ ರಾಜ್ಯಗಳು ರಾಷ್ಟ್ರಪತಿ ಮತ್ತು ರಾಜ್ಯಪಾಲರ ಮೇಲೆ ಗಡುವು ವಿಧಿಸುವುದನ್ನು ಬೆಂಬಲಿಸಿದವು. ಅಂತಿಮವಾಗಿ ತೀರ್ಪು ಹೊರಬಿದ್ದಿದ್ದು, ನ್ಯಾಯಮೂರ್ತಿ ಗವಾಯಿ ಅವರು ನಿವೃತ್ತಿಗೂ ಕೆಲವೇ ದಿನಗಳ ಮೊದಲು ಈ ಸಂಚಲನಾತ್ಮಕ ತೀರ್ಪು ನೀಡಿದ್ದಾರೆ, (ಏಜೆನ್ಸೀಸ್​).