JP Nadda | ದೇಶದ ಜನರನ್ನು ದಾರಿ ತಪ್ಪಿಸಬೇಡಿ!: ರಾಹುಲ್ ಗಾಂಧಿ ವಿರುದ್ಧ ನಡ್ಡಾ ವಾಗ್ದಾಳಿ 
ದೇಶ

ಯಾವುದೇ ಗುಂಡಿನ ದಾಳಿ ನಡೆದಿಲ್ಲ, ದೇಶದ ಜನರನ್ನು ದಾರಿ ತಪ್ಪಿಸಬೇಡಿ!...ರಾಹುಲ್ ಗಾಂಧಿ ವಿರುದ್ಧ ನಡ್ಡಾ ವಾಗ್ದಾಳಿ | JP Nadda

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್‌ಗಳಿಂದ ಗುಂಡು ಹಾರಿಸಲು ಯಾರು ಅನುಮತಿ ನೀಡಿದ್ದರು ಎಂದು ಪ್ರಶ್ನಿಸಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಕೇಂದ್ರ ಸಚಿವ ಜೆ ಪಿ ನಡ್ಡಾ (JP Nadda) ತಿರುಗೇಟು ನೀಡಿದ್ದಾರೆ.

ಜಂತರ್ ಮಂತರ್‌ನಲ್ಲಿ ಯಾವುದೇ ಗುಂಡಿನ ದಾಳಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿರುವ ನಡ್ಡಾ, ಇಂತಹ ಆಧಾರರಹಿತ ಹೇಳಿಕೆಗಳನ್ನು ನೀಡುವ ಮೂಲಕ ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಅವರು ಸಾರ್ವಜನಿಕರನ್ನು ಮತ್ತು ದೇಶವನ್ನು ಹಾದಿತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಅವರಿಗೆ ಸಂಸತ್ತು ಸುಸೂತ್ರವಾಗಿ ನಡೆಯುವುದು ಇಷ್ಟವಿಲ್ಲ ಎಂದು ಆರೋಪಿಸಿದ ನಡ್ಡಾ, ವಿಪಕ್ಷ ನಾಯಕರು ಪದೇ ಪದೇ ತಮ್ಮ ನಿಲುವುಗಳನ್ನು ಬದಲಾಯಿಸುತ್ತಾ ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುತ್ತಿದ್ದಾರೆ ಮತ್ತು ಸಂಸತ್ತನ್ನು ಕಾರ್ಯಾಚರಿಸದಂತೆ ತಡೆಯುವುದೇ ಅವರ ಮುಖ್ಯ ಉದ್ದೇಶವಾಗಿದೆ ಎಂದು ಕಿಡಿಕಾರಿದರು.

ಚರ್ಚಿಸಲು ಸಿದ್ಧ, ಮೊದಲು ಸದನಕ್ಕೆ ಬನ್ನಿ ಎಂದ ನಡ್ಡಾ

ಅಧಿವೇಶನದ ಆರಂಭದಲ್ಲಿ ರಾಹುಲ್ ಗಾಂಧಿ ನೀಟ್ ಕುರಿತು ಚರ್ಚೆಗೆ ಆಗ್ರಹಿಸಿದ್ದರು. ಆದರೆ ಸರ್ಕಾರ ಅದಕ್ಕೆ ಒಪ್ಪಿಕೊಂಡಾಗ, ಅವರು ರಾಮಮಂದಿರ ಟ್ರಸ್ಟ್ ವಿಷಯವನ್ನು ಎತ್ತಿದರು. ತದನಂತರ ಜಂತರ್ ಮಂತರ್ ಘಟನೆಯ ಬಗ್ಗೆ ಗೃಹ ಸಚಿವರು ಹೇಳಿಕೆ ನೀಡಬೇಕೆಂದು ಪಟ್ಟು ಹಿಡಿದರು. ಸಂಸತ್ತಿನಲ್ಲಿ ಸಂವಾದ ನಡೆಸುವುದು ಅವರ ಉದ್ದೇಶವಲ್ಲ, ಬದಲಿಗೆ ಗೊಂದಲ ಸೃಷ್ಟಿಸುವುದೇ ಅವರ ಗುರಿಯಾಗಿದೆ. ಕಳೆದೆರಡು ವಾರಗಳಿಂದ ಅವರು ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದು, ಜಂತರ್ ಮಂತರ್ ವಿಷಯದ ಕುರಿತು ಚರ್ಚೆಗೆ ಸರ್ಕಾರ ಒಪ್ಪಿಕೊಂಡ ತಕ್ಷಣ ಅಲ್ಲಿ ಗುಂಡಿನ ದಾಳಿ ನಡೆದಿದೆ ಎಂಬ ಸುಳ್ಳು ಮಾಹಿತಿಯನ್ನು ಹಬ್ಬಿಸಿ ಜನರನ್ನು ದಾರಿ ತಪ್ಪಿಸಲು ಪ್ರಾರಂಭಿಸಿದ್ದಾರೆ ಎಂದು ನಡ್ಡಾ ದೂರಿದರು.
ಇಂದು ಜಂತರ್ ಮಂತರ್ ಘಟನೆಯ ಕುರಿತು ಚರ್ಚಿಸಲು ನಿರ್ಧರಿಸಿದಾಗ, ಅಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಹೇಳುವ ಮೂಲಕ ಅವರು ದೇಶದ ಜನರನ್ನು ತಪ್ಪುದಾರಿಗೆ ಎಳೆಯಲು ಶುರು ಮಾಡಿದರು. ಆದರೆ ವಾಸ್ತವವಾಗಿ ಅಲ್ಲಿ ಅಂತಹ ಯಾವುದೇ ಘಟನೆ ಸಂಭವಿಸಿಲ್ಲ ಎಂದು ನಡ್ಡಾ ಸ್ಪಷ್ಟಪಡಿಸಿದರು. ಗೃಹ ಸಚಿವರು ಸಂಸತ್ತಿನಲ್ಲಿ ಪ್ರತಿಯೊಂದು ಪ್ರಶ್ನೆಗೂ ಉತ್ತರಿಸಲು ಸಿದ್ಧರಿದ್ದಾರೆ ಎಂದ ಕೇಂದ್ರ ಸಚಿವರು, ಚರ್ಚೆಗೆ ಸಿದ್ಧರಿದ್ದು, ಸದನಕ್ಕೆ ಬರುವಂತೆ ಸವಾಲ್ ಹಾಕಿದರು.

ಇದೇ ವೇಳೆ ಜಾರ್ಖಂಡ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಯ ವಿಷಯದಲ್ಲೂ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ನಡ್ಡಾ, ದ್ವಿಮುಖ ನೀತಿ (ಡಬಲ್ ಸ್ಟ್ಯಾಂಡರ್ಡ್) ಮತ್ತು ನಕಾರಾತ್ಮಕ ರಾಜಕೀಯ (ನೆಗೆಟಿವ್ ಪಾಲಿಟಿಕ್ಸ್) ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಜಾರ್ಖಂಡ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ರಾಹುಲ್ ಗಾಂಧಿಯವರಿಗೆ ಅರಿವಿಲ್ಲವೇ ಎಂದು ಪ್ರಶ್ನಿಸಿದ ನಡ್ಡಾ, ಕಾಂಗ್ರೆಸ್ ನಿರ್ದೇಶನದ ಮೇಲೆಯೇ ಅಲ್ಲಿ ಮುಳ್ಳುತಂತಿಯ ತಡೆಗೋಡೆಗಳನ್ನು ನಿರ್ಮಿಸಲಾಗಿದೆ ಎಂದು ದೂರಿದರು