Maharashtra EC  
ದೇಶ

ಶಾಯಿ ಅಳಿಸುವುದು ಅಕ್ಷಮ್ಯ ಅಪರಾಧ... ಮಾರ್ಕರ್ ಪೆನ್ ವಿರುದ್ಧದ ಗದ್ದಲಕ್ಕೆ ಸ್ಪಷ್ಟನೆ ನೀಡಿದ ಚುನಾವಣಾ ಆಯುಕ್ತರು | Maharashtra EC

ಮುಂಬೈ: ಮಹಾರಾಷ್ಟ್ರ ಮಹಾನಗರ ಪಾಲಿಕೆ ಚುನಾವಣೆಯ ಮತದಾನದ ವೇಳೆ ಶಾಯಿ ತಿರುಚಲಾಗಿದೆ ಎಂಬ ವಿಪಕ್ಷಗಳ ಆರೋಪದ ಬಗ್ಗೆ ರಾಜ್ಯ ಚುನಾವಣಾ ಆಯುಕ್ತ ದಿನೇಶ್ ಟಿ ವಾಘ್ಮೋರೆ ಪ್ರತಿಕ್ರಿಯೆ ನೀಡಿದ್ದು, ಮತದಾರರ ಬೆರಳುಗಳನ್ನು ಗುರುತಿಸಲು ಬಳಸಲಾಗುವ ಶಾಯಿ ಅಳಿಸಲಾಗದು, ಇದನ್ನು ಕೇಂದ್ರದ ಚುನಾವಣಾ ಆಯೋಗವು ವಿವಿಧ ಚುನಾವಣೆಗಳಲ್ಲಿ ಬಳಸುತ್ತಿದೆ ಎಂದು ಸ್ಪಷ್ಟನೆ ನೀಡಿದರು.
ಮತದಾರರ ಬೆರಳುಗಳಿಗೆ ಹಾಕುವ ಶಾಯಿಯ ಬಗ್ಗೆ ಕೆಲವು ಗೊಂದಲಗಳು ಸೃಷ್ಟಿಯಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಮತದಾರರನ್ನು ಗುರುತಿಸಲು ಬಳಸುವ ಶಾಯಿ ಅಳಿಸಲು ಸಾಧ್ಯವಿಲ್ಲ. ಇಲ್ಲಿ ಕಂಡುಬಂದಿರುವ ಏಕೈಕ ವ್ಯತ್ಯಾಸವೆಂದರೆ ಅದನ್ನು ಮಾರ್ಕರ್ ರೂಪದಲ್ಲಿ ಬಳಸಲಾಗುತ್ತಿದೆ ಎಂದರು.
ಈ ಅಳಿಸಲಾಗದ ಶಾಯಿಯ ಮಾರ್ಕರ್ ರೂಪವು 2011 ರಿಂದ ಬಳಕೆಯಲ್ಲಿದೆ ಎಂದಿರುವ ಆಯುಕ್ತರು, ಈ ಶಾಯಿಯ ಬಗ್ಗೆ ಅನುಮಾನ ವ್ಯಕ್ತಪಡಿಸುವ ಅಥವಾ ಗೊಂದಲ ಸೃಷ್ಟಿಸುವ ಜನರ ಮಾತಿಗ ಅರ್ಥವಿಲ್ಲ. ಈ ಶಾಯಿ ಹಚ್ಚಿದ 12-15 ಸೆಕೆಂಡುಗಳಲ್ಲಿ ಒಣಗುತ್ತದೆ ಎಂದು ವಾಘ್ಮೋರೆ ಹೇಳಿದ್ದಾರೆ. ಸರಿಯಾದ ಪರಿಶೀಲನೆಯಿಲ್ಲದೆ ಯಾವುದೇ ವ್ಯಕ್ತಿ ಮತ ಚಲಾಯಿಸಲು ಅವಕಾಶ ನೀಡದಂತೆ ಚುನಾವಣಾ ಸಂಸ್ಥೆ ಇತರ ಕ್ರಮಗಳನ್ನು ಸಹ ಅಳವಡಿಸಿಕೊಂಡಿದೆ, ಅಭ್ಯರ್ಥಿಗಳ ಪ್ರತಿನಿಧಿಗಳು ಪ್ರತಿಯೊಬ್ಬ ಮತದಾರರನ್ನು ಗುರುತಿಸುವುದನ್ನು ಖಚಿತಪಡಿಸಿಕೊಳ್ಳಲು ಇತರ ಪರಿಶೀಲನೆಗಳು ಮತ್ತು ಸಮತೋಲನಗಳಿವೆ ಎಂದು ರಾಜ್ಯ ಚುನಾವಣಾ ಆಯುಕ್ತರು ಹೇಳಿದರು.

ಶಾಯಿಯನ್ನು ಅಳಿಸಿಹಾಕುವುದು ಶಿಕ್ಷಾರ್ಹ ಅಪರಾಧ

ಮತ ಚಲಾಯಿಸಿದ ಬಳಿಕ ಬೆರಳಿಗೆ ಹಚ್ಚಿದ ಶಾಯಿಯನ್ನು ಅಳಿಸಿಹಾಕುವುದು ಶಿಕ್ಷಾರ್ಹ ಅಪರಾಧ ಎಂದು ರಾಜ್ಯ ಚುನಾವಣಾ ಆಯೋಗವು ಹೇಳಿಕೆ ನೀಡಿದ್ದು, ಯಾವುದೇ ವ್ಯಕ್ತಿಯು ಬೆರಳಿನಿಂದ ಶಾಯಿ ತೆಗೆದ ನಂತರ ಮತ್ತೆ ಮತ ಚಲಾಯಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದರೆ, ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ರಾಜ್ಯ ಚುನಾವಣಾ ಆಯೋಗವು, ಮತದಾರರು ಮತ ಚಲಾಯಿಸಿದ ನಂತರ, ಅಧಿಕೃತ ನಮೂದನ್ನು ದಾಖಲಿಸಲಾಗುತ್ತದೆ. ಆದ್ದರಿಂದ, ಕೇವಲ ಶಾಯಿ ತೆಗೆದ ಮಾತ್ರಕ್ಕೆ ಮರು ಮತದಾನ ಸಾಧ್ಯವಾಗುವುದಿಲ್ಲ ಎಂದು ಹೇಳಿದೆ.ಈ ವಿಷಯದಲ್ಲಿ ಜಾಗರೂಕರಾಗಿರಲು ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತೊಮ್ಮೆ ಸೂಚನೆ ನೀಡಲಾಗಿದೆ ಎಂದರು(ಏಜೆನ್ಸೀಸ್​).