ಸುಪ್ರೀಂಕೋರ್ಟ್ 
ದೇಶ

ಧರ್ಮ ಬದಲಾಯಿಸಿದ್ರೆ ಎಸ್​ಸಿ ಮೀಸಲಾತಿ ಇಲ್ಲ; ಬೇಕು ಅಂದ್ರೆ ಮೂರು ಷರತ್ತು ಪಾಲಿಸಿ: ಮತ್ತೊಮ್ಮೆ ಸುಪ್ರೀಂಕೋರ್ಟ್ ಸ್ಪಷ್ಟನೆ | SC reservation

ನವದೆಹಲಿ: ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿ ಬೇರೆ ಧರ್ಮಕ್ಕೆ ಮತಾಂತರಗೊಂಡರೆ, ಅವರ ಎಸ್‌ಸಿ ಸ್ಥಾನಮಾನವನ್ನು(SC reservation) ತಕ್ಷಣವೇ ರದ್ದುಗೊಳಿಸಲಾಗುವುದು ಎಂದು ಸೋಮವಾರ(ಜು. 27) ಸುಪ್ರೀಂಕೋರ್ಟ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದು, ಅದೇ ಸ್ಥಾನಮಾನ ಬೇಕು ಅಂದ್ರೆ ಮೂರು ಷರತ್ತುಗಳನ್ನು ಪಾಲಿಸಿ ಎಂದು ಹೇಳಿದೆ.
ಹಿಂದೂ, ಸಿಖ್, ಬೌದ್ಧ ಧರ್ಮ ಹೊರತುಪಡಿಸಿ ಕ್ರಿಶ್ಚಿಯನ್ ಅಥವಾ ಇತರ ಧರ್ಮಗಳಿಗೆ ಮತಾಂತರಗೊಂಡ ಜನರಿಗೆ ಎಸ್‌ಸಿ ಮೀಸಲಾತಿ ಮತ್ತು ಪ್ರಮಾಣಪತ್ರ ನೀಡಲಾಗಲ್ಲ ಎಂಬ ಆಂಧ್ರಪ್ರದೇಶ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ನ್ಯಾ. ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಮನಮೋಹನ್ ಸಿಂಗ್ ಅವರ ಪೀಠವು ಅರ್ಜಿಯ ವಿಚಾರಣೆ ನಡೆಸಿದ್ದು, 1950ರ ಸಂವಿಧಾನದ ಪ್ರಕಾರ, ಹಿಂದೂಗಳು, ಸಿಖ್ಖರು ಮತ್ತು ಬೌದ್ಧರು ಮಾತ್ರ ಎಸ್‌ಸಿ ಸ್ಥಾನಮಾನಕ್ಕೆ ಅರ್ಹರು. ಆದರೆ ಇತರೆ ಧರ್ಮಕ್ಕೆ ಮತಾಂತರವಾದರೇ ತಕ್ಷಣ ಎಸ್‌ಸಿ ಸ್ಥಾನಮಾನ ಮತ್ತು ಅದರ ಪ್ರಯೋಜನಗಳು ನಿಲ್ಲುತ್ತವೆ. ಹೈಕೋರ್ಟ್ ನೀಡಿದ ಆದೇಶದಲ್ಲಿ ಯಾವುದೇ ದೋಷವಿಲ್ಲ ಎಂದು ಸ್ಪಷ್ಟಪಡಿಸಿದೆ.
ಯಾರಾದರೂ ಮತ್ತೆ ಎಸ್‌ಸಿ ಸ್ಥಾನಮಾನವನ್ನು ಪಡೆಯಲು ಬಯಸಿದರೆ, ಅವರು ಸಂವಿಧಾನದಲ್ಲಿ ನಿಗದಿಪಡಿಸಿದ ಮೂರು ಪ್ರಮುಖ ಷರತ್ತುಗಳನ್ನು ಪಾಲಿಸಬೇಕು. ಒಂದು ಹುಟ್ಟಿನಿಂದ ಎಸ್‌ಸಿ ಆಗಿರುವುದು, ಎರಡು ಸ್ವಯಂಪ್ರೇರಣೆಯಿಂದ ತಮ್ಮದೇ ಆದ ಧರ್ಮಕ್ಕೆ ಮರಳುವುದು. ಮೂರು ಮೂಲ ಜಾತಿ ಸಮುದಾಯದಿಂದ ಸ್ವೀಕರಿಸಲ್ಪಡುವುದು ಎಂದು ಹೇಳಿದೆ (ಏಜೆನ್ಸೀಸ್).