Dharmendra Pradhan may be shifted to another ministry says Rahul Gandhi 
ದೇಶ

ವಜಾ ಡೌಟು.. ಧರ್ಮೇಂದ್ರ ಪ್ರಧಾನ್​ ಅವರನ್ನು ಬೇರೆ ಸಚಿವಾಲಯಕ್ಕೆ ವರ್ಗಾಯಿಸಬಹುದು: ರಾಹುಲ್​ ಗಾಂಧಿ ಆರೋಪ..Rahul Gandhi

ಪ್ರಮುಖ ಮುಖ್ಯಾಂಶಗಳು

  • ನಿಮ್ಮ ಸ್ನೇಹಿತನನ್ನು ಒಂದು ಸಚಿವಾಲಯದಿಂದ ತೆಗೆದು ಮತ್ತೊಂದರಲ್ಲಿ ಕೂರಿಸಿ ಕಾಪಾಡುವ ನಿಮ್ಮ ಸಂಚು ನಡೆಯಲ್ಲ.
  • ಧರ್ಮೇಂದ್ರ ಪ್ರಧಾನ್​ ಅವರು ರಾಜೀನಾಮೆ ಕೊಡಲೇ ಬೇಕು ಎಂದು ಆಗ್ರಹಿಸಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ.
  • ಮಧ್ಯರಾತ್ರಿ ವಿಡಿಯೋ ಸಂದೇಶ ಮಾಡೋದಲ್ಲ ಕಠಿಣ ಕ್ರಮ ಕೈಗೊಳ್ಳಿ ಎಂದು ಬೇಡಿಕೆಯಿಟ್ಟ ರಾಹುಲ್​ ಗಾಂಧಿ.
ನವದೆಹಲಿ: ಧರ್ಮೇಂದ್ರ ಪ್ರಧಾನ್​ ಅವರನ್ನು ಬೇರೆ ಸಚಿವಾಲಯಕ್ಕೆ ವರ್ಗಾಯಿಸುವ ಬಗ್ಗೆ ಸರ್ಕಾರದೊಳಗೆ ಮಾತುಕತೆ ನಡೆಯುತ್ತಿದೆ. ಈ ಬಗ್ಗೆ ನಮಗೆ ಮಾಹಿತಿ ಬಂದಿದೆ. ನಿಮ್ಮ ಸ್ನೇಹಿತನನ್ನು ರಕ್ಷಿಸುವ ಹುನ್ನಾರ ಸ್ವೀಕಾರಾರ್ಹವಲ್ಲ. ಧರ್ಮೇಂದ್ರ ಪ್ರಧಾನ್ ಅವರನ್ನು ವಜಾಗೊಳಿಸಬೇಕು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದರು.
ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸಿರುವ 'ಕಾಕ್ಸ್‌ರೋಚ್ ಜನತಾ ಪಾರ್ಟಿ' ನೇತೃತ್ವದ ವಿದ್ಯಾರ್ಥಿ ಪ್ರತಿಭಟನಾಕಾರರ ಮುಖಂಡರೊಂದಿಗೆ 10 ಜನಪತ್ ಹೊರಗೆ ಮಾಧ್ಯಮದವರೊಂದಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾತನಾಡಿದರು.

ಬೇರೆ ಖಾತೆ ನೀಡುವ ಪ್ಲ್ಯಾನ್

'ಪ್ರಧಾನಿ ಮೋದಿಯವರೆ ನಿಮ್ಮ "ಸ್ನೇಹಿತ"ನನ್ನು ಒಂದು ಸಚಿವಾಲಯದಿಂದ ತೆಗೆದು ಮತ್ತೊಂದರಲ್ಲಿ ಕೂರಿಸಿ ಕಾಪಾಡುವ ನಿಮ್ಮ ಸಂಚು ದೇಶದ ವಿದ್ಯಾರ್ಥಿಗಳಿಗೆ ಮತ್ತು ಭಾರತದ ಜನತೆಗೆ ಖಂಡಿತಾ ಒಪ್ಪಿಗೆಯಿಲ್ಲ. ಧರ್ಮೇಂದ್ರ ಪ್ರಧಾನ್ ಅವರು ಭ್ರಷ್ಟಾಚಾರ, ದೇಶದ ಶಿಕ್ಷಣ ವ್ಯವಸ್ಥೆಯ ವಿನಾಶದ ಸಂಕೇತ ಹಾಗೂ ಅನೇಕ ವಿದ್ಯಾರ್ಥಿಗಳ ಸಾವಿಗೆ ನೇರ ಹೊಣೆಗಾರರಾಗಿದ್ದಾರೆ.
ಅವರನ್ನು ಇನ್ನು ಮುಂದೆ ಬೇರೆ ಯಾರ ಜೀವನವನ್ನೂ ಹಾಳು ಮಾಡಲು ಬಿಡುವುದಿಲ್ಲ. ಧರ್ಮೇಂದ್ರ ಪ್ರಧಾನ್ ಅವರು ಸಂಪುಟದಿಂದ ವಜಾಗೊಳಿಸಲೇ' ಬೇಕು ಎಂದು ಹೇಳಿದರು.

ವಿಡಿಯೋ ಸಂದೇಶವಲ್ಲ ಕೆಲಸ ಆಗ್ಬೇಕು

'ಪ್ರಧಾನಿಯವರು ಇತ್ತೀಚೆಗೆ ರಾತ್ರಿ ವೇಳೆ ವಿಡಿಯೋಗಳನ್ನು ಮಾಡಲು ಬ್ಯುಸಿಯಾಗಿದ್ದಾರೆ. ಸಲಹೆಗಳಿಗೆ ಕೃತಜ್ಞರಾಗಿರುವುದಾಗಿ ಹೇಳುತ್ತಾರೆ. ಆದರೆ ವಿದ್ಯಾರ್ಥಿಗಳು ಕೇವಲ ಭರವಸೆಗಳನ್ನಲ್ಲ, ಅವರ ಮೂರು ಬೇಡಿಕೆಗಳು ರಾಜಿಗೆ ಅವಕಾಶವಿಲ್ಲದಷ್ಟು ಕಟ್ಟುನಿಟ್ಟಾಗಿವೆ. ಕ್ರಮ ಆಗಬೇಕು, ವಿಡಿಯೋ ಸಂದೇಶ ಬೇಡ, ಎಂದರು.

ಫ್ಯೂಚರ್​ ಜೊತೆ ಹೋರಾಡಲು ಸಾಧ್ಯವಿಲ್ಲ

'ಇವ್ರನ್ನು ನೋಡಿ, ಇವರು ದೇಶದ ಮುಂದಿನ ಭವಿಷ್ಯದ ಯುವಜನತೆ ಇವರೊಂದಿಗೆ ಹೋರಾಡಲು ಸಾಧ್ಯವಿಲ್ಲ. ನರೇಂದ್ರ ಮೋದಿ ಭಾರತದ ಭೂತಕಾಲ​ ಅವರೆಂದಿಗೂ ಫ್ಯೂಚರ್​​(ಮುಂದಿನ ಭವಿಷ್ಯ)ಹೊತ್ತ ವಿದ್ಯಾರ್ಥಿಗಳೊಂದಿಗೆ ಹೋರಾಡಲು ಸಾಧ್ಯವಿಲ್ಲ' ಎಂದು ರಾಹುಲ್​ ಗಾಂಧಿ ಹೇಳಿದರು
ಮುಂದುವರೆದು, 'ಭ್ರಷ್ಟ, ಅಸಮರ್ಥ ಮತ್ತು ಹಾದಿತಪ್ಪಿರುವ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರನ್ನು ಮೊದಲು ವಜಾಗೊಳಿಸಬೇಕು ಎಂಬುದು ವಿದ್ಯಾರ್ಥಿಗಳ ಮೊದಲ ಬೇಡಿಕೆಯಾಗಿದೆ. ಪ್ರಧಾನಿ ಮೋದಿ ಸಂಪುಟದಲ್ಲಿ ಪ್ರಧಾನ್ ಅವರನ್ನು ವಜಾ ಮಾಡುವುದಕ್ಕೆ ಬದಲಾಗಿ ಬೇರೆ ಖಾತೆಗೆ ಬದಲಾಯಿಸುವ ಯೋಚನೆ ನಡೆಯುತ್ತಿದೆ, ಇದು ದೇಶದ ವಿದ್ಯಾರ್ಥಿಗಳಿಗೆ ಹಾಗೂ ಯಾರಿಗೂ ಸ್ವೀಕಾರಾರ್ಹವಲ್ಲ. ಧರ್ಮೇಂದ್ರ ಪ್ರಧಾನ್ ಅವರು ಭ್ರಷ್ಟಾಚಾರ ಮತ್ತು ವಿದ್ಯಾರ್ಥಿಗಳ ಭವಿಷ್ಯದ ನಾಶದ ಸಂಕೇತವಾಗಿದ್ದಾರೆ' ಎಂದು ಸರ್ಕಾರದ ವಿರುದ್ಧ ರಾಹುಲ್​ ಗಾಂಧಿ ಗುಡುಗಿದರು.

ಪೆಲೆಟ್​​ ಗನ್​ನಿಂದ ಅವಾಂತರ

ಇಷ್ಟೇ ಅಲ್ಲದೇ ಸೋಮವಾರ ದೆಹಲಿ ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಹಾಗೂ ಪೆಲೆಟ್ ಗನ್ ಪ್ರಯೋಗ ಮಾಡಿದ ವಿರುದ್ಧ ಕಿಡಿಕಾರಿದರು. ಪ್ರೆಸ್​ಮೀಟ್​ಗೆ ವಿದ್ಯಾರ್ಥಿಯೊಬ್ಬರನ್ನು ಕರೆದು ತಂದು, ಪೆಲೆಟ್ ಗನ್ ಸಿಡಿಸಿದ್ದರಿಂದ ಅವರಿಗಾದ ನಷ್ಟವನ್ನು ಉಲ್ಲೇಖಿಸಿದ್ದರು. ವಿದ್ಯಾರ್ಥಿಗಳನ್ನು ಹಿಂಸಿಸಿದವರನ್ನು ಹೊಣೆಗಾರರನ್ನಾಗಿ ಮಾಡಿ ಕಠಿಣ ಶಿಕ್ಷೆ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ ಆಗ್ರಹಿಸಿದರು, (ಏಜೆನ್ಸೀಸ್).