ಸಾಂದರ್ಭಿಕ ಚಿತ್ರ  
ದೇಶ

ರೈತರ ನೋವಿಗಿಲ್ಲ ಸ್ಪಂದನೆ

‘ಪ್ರಧಾನಮಂತ್ರಿ ಫಸಲ್ ಬಿಮಾ’ ಯೋಜನೆಯನ್ನು ಬೆಳೆ ಹಾನಿಯ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ರಕ್ಷಾ ಕವಚವಾಗಿ ಪ್ರಾರಂಭಿಸಲಾಯಿತು. ಆದರೆ, ಈ ಯೋಜನೆಯನ್ನು ಐಚ್ಛಿಕಗೊಳಿಸಿದ ನಂತರ ಹಲವು ರಾಜ್ಯಗಳಲ್ಲಿ ಯೋಜನೆಯೊಂದಿಗೆ ಜೋಡಿಸಿಕೊಂಡಿರುವ ರೈತರ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಕೇವಲ ಎರಡು ವರ್ಷಗಳಲ್ಲಿ 73 ಲಕ್ಷ (29.6%) ರೈತರು ಯೋಜನೆಯಿಂದ ಹೊರಗುಳಿದಿದ್ದಾರೆ. ಹಣ ಪಾವತಿಯಲ್ಲಿ ವಿಳಂಬ ಮತ್ತು ವಾಸ್ತವಿಕ ನಷ್ಟಕ್ಕೆ ಹೋಲಿಸಿದರೆ ತುಂಬ ಕಡಿಮೆ ಪರಿಹಾರ ಸಿಗುತ್ತಿದೆ ಎಂಬುದು ರೈತರ ಪ್ರಮುಖ ದೂರು. ವಿಶೇಷವೆಂದರೆ, ಕಳೆದ ಎರಡು ವರ್ಷಗಳಲ್ಲಿ ಯೋಜನೆಯಿಂದ ಹೊರಬಂದ ಮೊದಲ 6 ಪ್ರಮುಖ ರಾಜ್ಯಗಳು ಬಿಜೆಪಿ ಆಡಳಿತವಿರುವ ರಾಜ್ಯಗಳಾಗಿವೆ! ಈ ಯೋಜನೆಯ ಅಪಸವ್ಯಗಳೇನು? ಬೆಳೆ ವಿಮೆ ಯೋಜನೆಗೆ ಒಳಪಡಲು ರೈತರು ಹಿಂದೇಟು ಹಾಕುತ್ತಿರುವುದೇಕೆ? ಈ ಕುರಿತಾದ ವಿವರ ಇಲ್ಲಿದೆ.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು 2016ರಲ್ಲಿ ಪ್ರಾರಂಭಿಸಲಾಯಿತು. ಇದರ ಪ್ರಚಾರಕ್ಕಾಗಿ ಕಳೆದ 10 ವರ್ಷಗಳಲ್ಲಿ -ಠಿ;664 ಕೋಟಿಯ ಭಾರಿ ಮೊತ್ತವನ್ನು ವೆಚ್ಚ ಮಾಡಲಾಗಿದೆ. 2023ರಲ್ಲಿ ದೇಶದಲ್ಲಿ ದಾಖಲೆಯ 3.14 ಕೋಟಿ ಹೆಕ್ಟೇರ್ ಕೃಷಿ ಭೂಮಿ ವಿಮೆಗೆ ಒಳಪಟ್ಟಿತ್ತು. ಈಗ ಅದು 2.18 ಕೋಟಿ ಹೆಕ್ಟೇರ್​ಗೆ ಇಳಿದಿದೆ. ಆರಂಭದಲ್ಲಿ, ಅಧಿಸೂಚಿತ ಬೆಳೆಗಳಿಗೆ ಸಾಲ ಪಡೆಯುವ ರೈತರಿಗೆ ವಿಮೆ ಕಡ್ಡಾಯವಾಗಿತ್ತು. ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿದ ಹಣ ರೈತರ ಬ್ಯಾಂಕ್ ಖಾತೆಗೆ ಬಂದ ತಕ್ಷಣ ಬ್ಯಾಂಕುಗಳು ಪ್ರೀಮಿಯಂ ಹಣವನ್ನು ಕಡಿತಗೊಳಿಸುತ್ತಿದ್ದವು. 2020ರಲ್ಲಿ ಇದನ್ನು ಬದಲಾಯಿಸಿ ಐಚ್ಛಿಕಗೊಳಿಸಲಾಯಿತು. ಅಂದಿನಿಂದ ರೈತರು ಯೋಜನೆಯಿಂದ ದೂರ ಸರಿಯಲು ಪ್ರಾರಂಭಿಸಿದ್ದಾರೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗಾಗಿ 18 ವಿಮಾ ಕಂಪನಿಗಳನ್ನು ಪಟ್ಟಿ ಮಾಡಲಾಗಿದೆ. ಇವುಗಳಲ್ಲಿ 5 ಸರ್ಕಾರಿ ಕಂಪನಿಗಳು.

ಮುಂದಡಿ ಇಟ್ಟ ರಾಜ್ಯಗಳು

ಗುಜರಾತ್: ಕೇಂದ್ರದ ಸಂಕೀರ್ಣ ನಿಯಮಗಳು ಮತ್ತು ವಿಮಾ ಕಂಪನಿಗಳ ದುಬಾರಿ ಪ್ರೀಮಿಯಂ ಕಾರಣದಿಂದ ಗುಜರಾತ್ ಈ ಯೋಜನೆಯಿಂದ ಹೊರನಡೆದು, ತನ್ನದೇ ಆದ ‘ಮುಖ್ಯಮಂತ್ರಿ ಕಿಸಾನ್ ಸಹಾಯ ಯೋಜನೆ’ ಜಾರಿಗೆ ತಂದಿದೆ. ಇದರಿಂದ ಅಲ್ಲಿನ ಬಹುತೇಕ ರೈತರು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಿಂದ ಸಂಪೂರ್ಣ ಹಿಂದೆ ಸರಿದಿದ್ದಾರೆ.

ಬಿಹಾರ: ಬಿಹಾರ ಸರ್ಕಾರವು ಪಿಎಂಎಫ್​ಬಿವೈನಿಂದ ಹೊರಬಂದು ‘ಬಿಹಾರ ರಾಜ್ಯ ಫಸಲ್ ಸಹಾಯತಾ ಯೋಜನೆ’ ಆರಂಭಿಸಿದೆ. ಇಲ್ಲಿ ರೈತರು ಯಾವುದೇ ಪ್ರೀಮಿಯಂ ಪಾವತಿಸದೆ ನೇರವಾಗಿ ಸರ್ಕಾರದ ಸಹಾಯ ಪಡೆಯುವುದರಿಂದ ಪಿಎಂಎಫ್​ಬಿವೈ ವ್ಯಾಪ್ತಿ ಸಂಪೂರ್ಣ ಕಡಿಮೆಯಾಗಿದೆ.

ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳ ಸರ್ಕಾರವು ಪಿಎಂಎಫ್​ಬಿವೈ ಯೋಜನೆಯಿಂದ ಹೊರಬಂದು ‘ಬಾಂಗ್ಲಾ ಶಶ್ಯ ಬಿಮಾ’ ಯೋಜನೆಯನ್ನು ಜಾರಿಗೆ ತಂದಿದೆ. ಅಲ್ಲಿ ರಾಜ್ಯ ಸರ್ಕಾರವೇ ಸಂಪೂರ್ಣ ಪ್ರೀಮಿಯಂ ಭರಿಸುವುದರಿಂದ ರೈತರು ಕೇಂದ್ರದ ಯೋಜನೆಯಿಂದ ದೂರ ಸರಿದಿದ್ದಾರೆ.

ಪ್ರಮುಖ ತೊಡಕುಗಳು

  • ಬೆಳೆ ಹಾನಿಯಾದ ತಕ್ಷಣ ರೈತರಿಗೆ ಆರ್ಥಿಕ ನೆರವು ಸಿಗುವುದಿಲ್ಲ. ವಿಮಾ ಕಂಪನಿಗಳು ಮತ್ತು ಸರ್ಕಾರಗಳ ನಡುವಿನ ಪ್ರಕ್ರಿಯೆಗಳಿಂದಾಗಿ ಪರಿಹಾರ ಬರಲು ತಿಂಗಳುಗಳು ಅಥವಾ ವರ್ಷಗಳೇ ಕಳೆಯುತ್ತವೆ.
  • ನಷ್ಟವನ್ನು ಪ್ರತಿಯೊಬ್ಬ ರೈತನ ಜಮೀನಿನ ಆಧಾರದ ಮೇಲೆ ಅಳೆಯುವ ಬದಲು, ಇಡೀ ಗ್ರಾಮ ಪಂಚಾಯಿತಿ ಅಥವಾ ಹೋಬಳಿಯನ್ನು ಒಂದು ಘಟಕವಾಗಿ ಪರಿಗಣಿಸಿ ಸರಾಸರಿ ಲೆಕ್ಕ ಹಾಕಲಾಗುತ್ತದೆ. ಇದರಿಂದ ಪಕ್ಕದ ಜಮೀನಿನಲ್ಲಿ ಬೆಳೆ ನಾಶವಾಗಿದ್ದರೂ, ಇಡೀ ಪ್ರದೇಶಕ್ಕೆ ಸರಾಸರಿ ನಷ್ಟ ಅನ್ವಯವಾಗದಿದ್ದರೆ ಪರಿಹಾರ ಸಿಗುವುದಿಲ್ಲ.
  • ಪ್ರಕೃತಿ ವಿಕೋಪದಿಂದ ಬೆಳೆ ನಷ್ಟವಾದರೆ 72 ಗಂಟೆಗಳೊಳಗೆ ಆಪ್ ಮೂಲಕ ಅಥವಾ ಟೋಲ್-ಫ್ರೀ ಸಂಖ್ಯೆಗೆ ದೂರು ದಾಖಲಿಸಬೇಕು. ಗ್ರಾಮೀಣ ಭಾಗದಲ್ಲಿ ಸರ್ವರ್ ಸಮಸ್ಯೆ, ನೆಟ್​ವರ್ಕ್ ಕೊರತೆ ಮತ್ತು ತಾಂತ್ರಿಕ ಜ್ಞಾನವಿಲ್ಲದೆ ಅನೇಕ ರೈತರು ನಿಗದಿತ ಸಮಯದಲ್ಲಿ ಅರ್ಜಿ ಸಲ್ಲಿಸಲು ವಿಫಲರಾಗುತ್ತಾರೆ.
  • ಹಳ್ಳಿ ಅಥವಾ ತಾಲೂಕು ಮಟ್ಟದಲ್ಲಿ ವಿಮಾ ಕಂಪನಿಗಳ ಪ್ರತಿನಿಧಿಗಳು ಅಥವಾ ಕಚೇರಿಗಳು ಲಭ್ಯವಿರುವುದಿಲ್ಲ. ಕ್ಲೈಮ್ ತಿರಸ್ಕರಿಸಿದರೆ ಅದಕ್ಕೆ ಸೂಕ್ತ ಕಾರಣಗಳನ್ನು ರೈತರಿಗೆ ತಿಳಿಸುವುದಿಲ್ಲ.
  • ಈ ಹಿಂದೆ ಬೆಳೆ ಸಾಲ ಪಡೆದ ರೈತರಿಗೆ ವಿಮೆ ಕಡ್ಡಾಯವಾಗಿತ್ತು, ಆದರೆ ನಂತರ ಇದನ್ನು ಸ್ವಯಂಪ್ರೇರಿತ ಮಾಡಲಾಯಿತು. ಹಳೆಯ ಅನುಭವಗಳಲ್ಲಿ ಪರಿಹಾರ ಬಾರದ ಕಾರಣ ಹಲವು ರೈತರು ಸ್ವತಃ ವಿಮೆಯಿಂದ ಹೊರಗುಳಿಯುತ್ತಿದ್ದಾರೆ.
  • ಕೆಲವು ಸಂದರ್ಭಗಳಲ್ಲಿ ರೈತರು ಕಟ್ಟಿದ ಪ್ರೀಮಿಯಂ ಮೊತ್ತಕ್ಕಿಂತ ತೀರಾ ಕಡಿಮೆ ಪರಿಹಾರ (ಉದಾಹರಣೆಗೆ ಕೇವಲ -ಠಿ;50 ಅಥವಾ -ಠಿ;100) ಖಾತೆಗೆ ಜಮೆಯಾಗಿ ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ತಜ್ಞರ ಅನಿಸಿಕೆ

ಕ್ಲೇಮ್ ಇತ್ಯರ್ಥ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ. ಒಂದು ವರ್ಷದ ದೀರ್ಘ ಕಾಯುವಿಕೆಯ ನಂತರ ಪರಿಹಾರ ಮೊತ್ತ ಸಿಗುತ್ತಿದೆ. ವಾಸ್ತವವಾಗಿ ಈ ಯೋಜನೆಯ ಸಮರ್ಪಕ ಜಾರಿಯಲ್ಲಿ ಸರ್ಕಾರಿ ನೌಕರರ ಪಾತ್ರ ಪ್ರಮುಖವಾಗಿರುತ್ತದೆ, ಅವರೇ ವಿಳಂಬ ಧೋರಣೆ ಅನುಸರಿಸುತ್ತಿರುವುದರಿಂದ, ರೈತರಿಗೆ ಸಕಾಲದಲ್ಲಿ ಪರಿಹಾರ ಸಿಗುತ್ತಿಲ್ಲ. ನಷ್ಟದ ಮೌಲ್ಯಮಾಪನ ಪ್ರಕ್ರಿಯೆಯಲ್ಲೂ ದೋಷವಿದೆ. ಉಪಗ್ರಹದ ಮೂಲಕ ನಡೆಸುವ ಮೌಲ್ಯಮಾಪನದಲ್ಲಿ ಒಂದು ವಲಯದಲ್ಲಿ ನಷ್ಟದ ಸರಾಸರಿ 40% ಬಂದರೆ, ಯಾವುದೇ ರೈತನಿಗೆ 40%ಕ್ಕಿಂತ ಹೆಚ್ಚು ಪರಿಹಾರ ನೀಡುವುದಿಲ್ಲ; ರೈತನ ಹೊಲದಲ್ಲಿ ಬೆಳೆ ಶೇಕಡ 100ರಷ್ಟು ನಷ್ಟವಾಗಿದ್ದರೂ 40% ಮಾತ್ರ ಪರಿಹಾರ ಸಿಗುತ್ತಿದೆ. ಇಂತಹ ಲೋಪದೋಷಗಳಿಂದಾಗಿಯೇ ರೈತರು ಯೋಜನೆಯಿಂದ ದೂರ ಸರಿಯುತ್ತಿದ್ದಾರೆ. ಪಶ್ಚಿಮ ಬಂಗಾಳ, ಬಿಹಾರ, ಗುಜರಾತ್​ನಂತಹ ರಾಜ್ಯಗಳು ತಮ್ಮದೇ ಆದ ಪ್ರತ್ಯೇಕ ಬೆಳೆ ವಿಮೆ ಯೋಜನೆಗಳನ್ನು ನಡೆಸುತ್ತಿವೆ. ಗೇಣಿ ರೈತರು (ಪಾಲುದಾರ ರೈತರು) ಹೊರಗುಳಿದಿರುವುದು ಮತ್ತೊಂದು ಪ್ರಮುಖ ಸಮಸ್ಯೆ. ದೇಶದಲ್ಲಿ ಅರ್ಧದಷ್ಟು ರೈತರು ಗೇಣಿ ಆಧಾರದ ಮೇಲೆ ಕೃಷಿ ಮಾಡುತ್ತಾರೆ. ಅವರ ಹೆಸರಿನಲ್ಲಿ ಭೂಮಿಯ ದಾಖಲೆಗಳು ಇರುವುದಿಲ್ಲ. ಹೀಗಾಗಿ ಕಂಪನಿಗಳು ಅವರಿಗೆ ವಿಮೆ ನೀಡುತ್ತಿಲ್ಲ.

ಮಹಾರಾಷ್ಟ್ರದಲ್ಲಿ 36 ಲಕ್ಷ ರೈತರು ಹೊರಕ್ಕೆ!

  • ಮಹಾರಾಷ್ಟ್ರದಲ್ಲಿ ಕಳೆದ ಎರಡು ವರ್ಷಗಳಲ್ಲಿ ದಾಖಲೆಯ 36.83 ಲಕ್ಷ ರೈತರು ಬೆಳೆ ವಿಮೆಯಿಂದ ಹೊರಗುಳಿದಿದ್ದಾರೆ. ಈ ಮೂಲಕ ವಿಮೆ ಹೊಂದಿರುವ ರೈತರ ಸಂಖ್ಯೆ 41.30 ಲಕ್ಷಕ್ಕೆ ಇಳಿದಿದೆ.
  • ಕಳೆದ ಎರಡು ವರ್ಷಗಳಲ್ಲಿ ಆಂಧ್ರಪ್ರದೇಶದಲ್ಲಿ 14.75 ಲಕ್ಷ, ರಾಜಸ್ಥಾನದಲ್ಲಿ 6.79 ಲಕ್ಷ, ಉತ್ತರಪ್ರದೇಶದಲ್ಲಿ 6.15 ಲಕ್ಷ, ಒಡಿಶಾದಲ್ಲಿ 4.31 ಲಕ್ಷ, ಅಸ್ಸಾಂನಲ್ಲಿ 2.18 ಲಕ್ಷ, ಹರಿಯಾಣದಲ್ಲಿ 1.72 ಲಕ್ಷ ರೈತರು ಫಸಲ್ ಬಿಮಾ ಯೋಜನೆಯನ್ನು ತೊರೆದಿದ್ದಾರೆ. ಇವೆಲ್ಲವೂ ಬಿಜೆಪಿ/ಎನ್​ಡಿಎ ಆಡಳಿತವಿರುವ ರಾಜ್ಯಗಳು.
  • ಮಧ್ಯಪ್ರದೇಶ ಮತ್ತು ಛತ್ತೀಸ್​ಗಢ ಬಿಜೆಪಿ ಆಡಳಿತವಿರುವ ರಾಜ್ಯಗಳಾಗಿದ್ದು, ಇಲ್ಲಿ 3.88 ಲಕ್ಷ ರೈತರು ಹೆಚ್ಚಾಗಿದ್ದಾರೆ.
  • 2019-20ರಿಂದ 2024-25ರವರೆಗೆ -ಠಿ;1.03 ಲಕ್ಷ ಕೋಟಿ ಬೆಳೆ ವಿಮೆ ಪರಿಹಾರ ನೀಡಲಾಗಿದೆ ಎಂದು ಸರ್ಕಾರ ಸಂಸತ್ತಿನಲ್ಲಿ ತಿಳಿಸಿದೆ. ಇದಕ್ಕೆ ಪ್ರತಿಯಾಗಿ ರೈತರು -ಠಿ;19,463 ಕೋಟಿ ಪ್ರೀಮಿಯಂ ಪಾವತಿಸಿದ್ದಾರೆ. ಆದರೆ, ವಾಸ್ತವದಲ್ಲಿ ಪ್ರೀಮಿಯಂನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪಾಲೂ ಇದೆ. ಇವೆಲ್ಲವನ್ನೂ ಸೇರಿಸಿ ಒಟ್ಟು ಪ್ರೀಮಿಯಂ ಮೊತ್ತ -ಠಿ;1.10 ಲಕ್ಷ ಕೋಟಿಯಷ್ಟಾಗಿದೆ.
  • ಮುಂಗಾರು ಬೆಳೆಗೆ ಪ್ರತಿ ಎಕರೆಗೆ ವಿಮಾ ಪ್ರೀಮಿಯಂ -ಠಿ;2000 ಆಗಿದೆ. ರೈತರು 20% ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಲಾ 40-40% ಪ್ರೀಮಿಯಂ ಭರಿಸುತ್ತವೆ.

ಹೊಲ ಮುಳುಗಿತು, ಸಿಕ್ಕಿದ್ದು -₹2.30

ಕಳೆದ ವರ್ಷ ಅಕಾಲಿಕ ಮಳೆಯಿಂದ ಇಡೀ ಹೊಲ ನೀರಿನಲ್ಲಿ ಮುಳುಗಿತ್ತು. ಪರಿಹಾರ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಖಾತೆಗೆ ಕೇವಲ -ಠಿ;2.30 ಬಂದಾಗ ತಲೆಯ ಮೇಲೆ ಕೈ ಹೊತ್ತು ಕುಳಿತೆ. ಕಂಪನಿಯನ್ನು ಕೇಳಿದರೆ, ಉಪಗ್ರಹ ಸಮೀಕ್ಷೆಯಲ್ಲಿ ಕಡಿಮೆ ನಷ್ಟ ಕಂಡುಬಂದಿದೆ ಎಂದರು. ನನಗೆ ವಿಮೆ ಬೇಡ ಎಂದು ನಾನು ಲಿಖಿತವಾಗಿ ಬರೆದುಕೊಟ್ಟೆ.

-ಸುರೇಶ್ ಪಾಟೀಲ್ ಜಲಗಾಂವ್, ಮಹಾರಾಷ್ಟ್ರ

ನಿರಾಶೆಯಾಗಿ ಕೈಬಿಟ್ಟೆ

ನಾನು ಸಹಕಾರ ಸಂಘದಿಂದ ಸಾಲ ಪಡೆದು ಗೋಧಿಗೆ ವಿಮೆ ಮಾಡಿಸಿದ್ದೆ, ಆದರೆ ನಾಲ್ಕು ವರ್ಷಗಳ ಹಿಂದೆ ಆದ ನಷ್ಟಕ್ಕೆ ಇದುವರೆಗೂ ಯಾವುದೇ ಪರಿಹಾರ ಸಿಕ್ಕಿಲ್ಲ. ಈ ಅನುಭವ ನನ್ನಲ್ಲಿ ಬೆಳೆ ವಿಮೆಯ ಬಗ್ಗೆ ನಿರಾಶೆ ಉಂಟುಮಾಡಿತು. ನಾನು ವಿಮೆ ತೆಗೆದುಕೊಳ್ಳುವುದನ್ನೇ ನಿಲ್ಲಿಸಿದ್ದೇನೆ.

-ಜಗ್ತಾರ್ ಸಿಂಗ್ ಜೋಡ್ಕಿಯಾ ಹನುಮಾನ್​ಗಢ್, ರಾಜಸ್ಥಾನ

ಮರು ಸಮೀಕ್ಷೆ ನಡೆಸಲಿಲ್ಲ

ನಮ್ಮ ಹೊಲದಲ್ಲಿನ ಬೆಳೆ ಸತತ 3 ವರ್ಷಗಳಿಂದ ಹಾಳಾಗಿದೆ. ಆದರೆ ನನಗಿರಲಿ, ಇಡೀ ಹಳ್ಳಿಗೇ ಕ್ಲೇಮ್ ಸಿಗಲಿಲ್ಲ. ನಮ್ಮ ವಲಯ ಸಂಖ್ಯೆ 104 ಆಗಿತ್ತು. ಪಕ್ಕದ 103 ವಲಯದ ರೈತರಿಗೆ ಕ್ಲೇಮ್ ಸಿಕ್ಕಿದೆ. ನಮ್ಮಲ್ಲಿ ನಡೆಸಿದ ಸ್ಯಾಟ್​ಲೈಟ್ ಆಧಾರಿತ ಸಮೀಕ್ಷೆಯೇ ತಪ್ಪಾಗಿದೆ. ಮರು ಸಮೀಕ್ಷೆಗೆ ಮನವಿ ಸಲ್ಲಿಸಿದೆವು. ಆದರೆ ಇದುವರೆಗೂ ನಡೆದಿಲ್ಲ.

-ಸಚಿನ್ ನಾಗರ್ ಬಾಪ್ಚಾ ಗ್ರಾಮ, ಶಾಜಾಪುರ, ಮಧ್ಯಪ್ರದೇಶ