ನವದೆಹಲಿ: ಉದ್ದೇಶಿತ ‘ವಿದ್ಯುತ್ (ತಿದ್ದುಪಡಿ) ಮಸೂದೆ 2025’ರ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ರೈತರು ಮತ್ತು ಬಡ ಗ್ರಾಹಕರಿಗೆ ನೀಡಲಾಗುತ್ತಿರುವ ಸಬ್ಸಿಡಿಗಳು ರದ್ದಾಗುವುದಿಲ್ಲ ಎಂದು ಕೇಂದ್ರ ಇಂಧನ ಸಚಿವ ಮನೋಹರ್ ಲಾಲ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪ್ರತಿಪಕ್ಷಗಳು ಹಾಗೂ ಅಖಿಲ ಭಾರತ ವಿದ್ಯುತ್ ಇಂಜಿನಿಯರ್ಗಳ ಫೆಡರೇಶನ್(ಎಐಪಿಇಎಫ್) ಮತ್ತಿತರ ಸಂಘಟನೆಗಳು ಮಾಡುತ್ತಿರುವ ಆರೋಪಕ್ಕೆ, ಸಂಸದರ ಸಮಿತಿ ಜತೆ ನಡೆದ ಸಮಾಲೋಚನೆ ಸಭೆಯಲ್ಲಿ ಸಚಿವರು ಪ್ರತಿಕ್ರಿಯಿಸಿದರು. ‘ರೈತರು, ಗೃಹಬಳಕೆ ಗ್ರಾಹಕರಂತಹ ಆದ್ಯತೆಯ ವರ್ಗಗಳಿಗೆ ಸಬ್ಸಿಡಿ ನೀಡುವುದನ್ನು ರಾಜ್ಯ ಸರ್ಕಾರಗಳು ಮುಂದುವರಿಸಬಹುದು. ಈ ಮಸೂದೆಯಿಂದ ಅಂತಹ ಗ್ರಾಹಕರಿಗೆ ವಿದ್ಯುತ್ ವೆಚ್ಚದಲ್ಲಿ ಯಾವುದೇ ಹೆಚ್ಚಳ ಆಗುವುದಿಲ್ಲ’ ಎಂದು ಹೇಳಿದರು.
ಎಐಪಿಇಎಫ್ ಅಧ್ಯಕ್ಷ ಶೈಲೇಂದ್ರ ದುಬೆ ಈ ತಿದ್ದುಪಡಿಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇವು ರೈತರ ಮತ್ತು ಬಡ ಗ್ರಾಹಕರ ಸಬ್ಸಿಡಿ ಹಾಗೂ ಕ್ರಾಸ್ ಸಬ್ಸಿಡಿಗಳನ್ನು ರದ್ದುಗೊಳಿಸುತ್ತವೆ. ಇದರಿಂದ ಸಾಮಾನ್ಯ ಜನರ ವಿದ್ಯುತ್ ಬಿಲ್ಗಳು ಗಗನಕ್ಕೇರಲಿವೆ. ಇದೇ ಕಾರಣಕ್ಕೆ ಡಿ. 23ರಂದು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿದ ಸಚಿವರು, ಕ್ರಾಸ್ ಸಬ್ಸಿಡಿ ಮತ್ತು ಹೆಚ್ಚುವರಿ ಶುಲ್ಕಗಳಿಂದ ಉಂಟಾಗುವ ಸಮಸ್ಯೆಗಳನ್ನು ಕಡಿಮೆ ಮಾಡುವ ಮೂಲಕ ಭಾರತೀಯ ಕೈಗಾರಿಕೆಗಳು, ವಿಶೇಷವಾಗಿ ಎಂಎಸ್ಎಂಇಗಳು ಜಾಗತಿಕವಾಗಿ ಸ್ಪರ್ಧಿಸಲು ಈ ಮಸೂದೆ ಸಹಕಾರಿಯಾಗಲಿದೆ. ನವೀಕರಿಸಬಹುದಾದ ಇಂಧನ ಬಳಸುವುದನ್ನು ಕಡ್ಡಾಯಗೊಳಿಸುವ ಪ್ರಸ್ತಾಪವಿದೆ. ವಿದ್ಯುತ್ ವಿತರಣಾ ಜಾಲವನ್ನು ಹಂಚಿಕೊಳ್ಳಲು ಅವಕಾಶ ನೀಡುವ ಮೂಲಕ ಮೂಲಸೌಕರ್ಯಗಳ ಅನಗತ್ಯ ಪುನರಾವರ್ತನೆಯನ್ನು ತಡೆಯಲು ಅವಕಾಶವಾಗಲಿದೆ. ಇದರಿಂದ ಅಂತಿಮವಾಗಿ ಗ್ರಾಹಕರಿಗೆ ಪ್ರಯೋಜನವಾಗಲಿದೆ ಎಂದು ವಿವರಿಸಿದರು.