Nitin Nabin | ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್  
ದೇಶ

ನಿತಿನ್ ನಬಿನ್​ ಮುಂದಿದೆ ಸವಾಲುಗಳ ರಾಶಿ; ಡಬಲ್​ ರೋಲ್​ ನಿಭಾಯಿಸಬೇಕಿದೆ ನೂತನ ಅಧ್ಯಕ್ಷರು | Nitin Nabin

ದೆಹಲಿ: ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಿತಿನ್ ನಬಿನ್ ಈಗಾಗಲೇ ಜವಾಬ್ದಾರಿ ತೆಗೆದುಕೊಂಡಿದ್ದು, ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ಪಕ್ಷದ ಉಸ್ತುವಾರಿ ಮತ್ತು ಸಹ-ಉಸ್ತುವಾರಿ ನೇಮಕ ಹಾಗೂ ಕೆಲವು ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಸಭೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಬುಧವಾರ ಬೆಳಿಗ್ಗೆ ಬಿಜೆಪಿಯ ರಾಜ್ಯ ಘಟಕಗಳ ಹಿರಿಯ ನಾಯಕರು, ಅಧ್ಯಕ್ಷರು ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿಗಳೊಂದಿಗೆ ದಿನವಿಡೀ ಸಭೆಯನ್ನು ಪ್ರಾರಂಭಿಸಿದ್ದಾರೆ. ಬಿಜೆಪಿ ಪಾಲಿಗೆ ಪಶ್ಚಿಮ ಬಂಗಾಳ ಹುಳಿ ದ್ರಾಕ್ಷಿಯಾಗಿದ್ದು, ಸತತ ಎರಡು ವಿಧಾನಸಭೆ ಚುನಾವಣೆಯಲ್ಲಿ ಶಕ್ತಿ ಮೀರಿ ಪರಿಶ್ರಮ ಹಾಕಿದರೂ ಪಕ್ಷ ಗಳಿಸಲು ಸಾಧ್ಯವಾಗಿದ್ದು 77 ಸ್ಥಾನ ಮಾತ್ರ. ಆದ್ದರಿಂದ ನೂತನ ಅಧ್ಯಕ್ಷರು ಆ ರಾಜ್ಯದತ್ತ ಹೆಚ್ಚು ಗಮನಹರಿಸಬೇಕಿರುವುದು ತಕ್ಷಣದ ಕಾರ್ಯಸೂಚಿಯಲ್ಲಿದೆ.
ಸದ್ಯ ಎದುರಾಗಿರುವ ದೊಡ್ಡ ಪ್ರಶ್ನೆಯೆಂದರೆ ಅದು ಫೆಬ್ರವರಿ 2 ರಿಂದ ಆರಂಭವಾಗಲಿರುವ ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನ. ಇದರಲ್ಲಿ ನಬಿನ್ ಭಾಗವಹಿಸುತ್ತಾರೋ, ಇಲ್ಲವೋ..?. ಈ ಪ್ರಶ್ನೆ ಉದ್ಭವಿಸುವುದು ಸಹಜ. ನಿತೀಶ್ ಕುಮಾರ್ ಸಂಪುಟಕ್ಕೆ ರಾಜೀನಾಮೆ ನೀಡಿದ್ದರೂ, ನಬಿನ್​ ಶಾಸಕರಾಗಿ ಮುಂದುವರೆಯಲಿದ್ದಾರೆ. ಬಂಕಿಪುರ ಕ್ಷೇತ್ರದಿಂದ ಐದನೇ ಬಾರಿ ಶಾಸಕರಾಗಿರುವ ನಬಿನ್, ಬಿಹಾರದ ವಿಧಾನಸಭೆಯ ಸದಸ್ಯರಾಗಿರುವವರೆಗೂ ಸದನದ ಕಲಾಪಗಳಲ್ಲಿ ಭಾಗವಹಿಸಬೇಕಾಗುತ್ತದೆ. ಇತ್ತ ಅಧ್ಯಕ್ಷರಾಗಿ ದೆಹಲಿಯಲ್ಲೂ ಕಾರ್ಯನಿರ್ವಹಿಸಬೇಕಿರುವುದರಿಂದ ದ್ವೀಪಾತ್ರ ನಿಭಾಯಿಸುವುದು ನಬಿನ್​ಗೆ ಅನಿವಾರ್ಯವಾಗಿದೆ.
ಇದು ಕಷ್ಟ ಎಂದು ಮನಗಂಡಿರುವ ಬಿಜೆಪಿ ಹಿರಿಯ ನಾಯಕರು ನಬಿನ್​ರನ್ನು ರಾಜ್ಯಸಭೆಗೆ ಕಳುಹಿಸುವ ಮೂಲಕ ಅವರ ಕಾರ್ಯದೊತ್ತಡವನ್ನು ಸರಿಹೊಂದಿಸಬಹುದು ಎಂದು ಲೆಕ್ಕಾಚಾರ ಹಾಕಿದ್ದಾರೆ. ಈ ಹಿಂದೆ ನಿಕಟಪುರ್ವ ಅಧ್ಯಕ್ಷ ಜೆ.ಪಿ. ನಡ್ಡಾ ವಿಷಯದಲ್ಲೂ ಇದೇ ಮಾರ್ಗ ಅನುಸರಿಸಲಾಗಿತ್ತು.
ಕೆಲವೇ ತಿಂಗಳುಗಳಲ್ಲಿ ಬಿಹಾರದ ಐದು ರಾಜ್ಯಸಭಾ ಸ್ಥಾನಗಳು ಖಾಲಿಯಾಗಲಿದ್ದು, ಸಂಖ್ಯಾಬಲದ ಆಧಾರದಲ್ಲಿ ಅವುಗಳಲ್ಲಿ ಎರಡು ಬಿಜೆಪಿಗೆ ದಕ್ಕುತ್ತವೆ, ಇನ್ನೂ ಎರಡು ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಾಲಾಗಲಿವೆ. ಬಿಜೆಪಿ ಒತ್ತಡ ತಂತ್ರ ಅನುಸರಿಸಿದರೆ ಐದನೆಯ ಸ್ಥಾನವನ್ನು ಸಹ ಪಡೆಯಬಹುದು. ಬಿಹಾರದ ಮೂಲಕ ನಾಮನಿರ್ದೇಶನ ಸಾಧ್ಯವಾಗದಿದ್ದರೂ ಸಹ, ಖಾಲಿ ಇರುವ ಇತರ 30 ರಾಜ್ಯಸಭಾ ಸ್ಥಾನಗಳಿವೆ, ಅವುಗಳಲ್ಲಿ ಬಹುಪಾಲು ಬಿಜೆಪಿಗೆ ಖಚಿತವಾಗಿದ್ದು, ಈ ಮೂಲಕವಾದರೂ ನಬಿನ್ ಮೇಲ್ಮನೆಯಲ್ಲಿ ಮತ್ತೊಂದು ರಾಜ್ಯವನ್ನು ಪ್ರತಿನಿಧಿಸಬಹುದು.

ಅಮಿತ್​ ಷಾ ಕಥೆ ಪುನರಾವರ್ತನೆಯಾಗುತ್ತಾ..?

2013 ರಲ್ಲಿ ಅಮಿತ್ ಷಾರನ್ನು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು, ಅದಾದ ಬಳಿಕ ಮುಂದಿನ ವರ್ಷ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಆಗ ಷಾ ಇನ್ನೂ ಗುಜರಾತ್‌ನ ನರನ್‌ಪುರ ಕ್ಷೇತ್ರದಿಂದ ಭಾರಿ ಅಂತರದಿಂದ ಗೆದ್ದು ಶಾಕಕರಾಗಿದ್ದರು. ಮುಂದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೆ ಶಾಸಕರಾಗಿ ಮುಂದುವರೆದರು, ವಿಧಾನಸಭೆಯ ಕಲಾಪದಲ್ಲಿ ಕೂಡ ಭಾಗವಹಿಸಿದರು. 2017 ರಲ್ಲಿ ಅವರನ್ನು ರಾಜ್ಯಸಭೆಗೆ ಕಳುಹಿಸಲಾಯಿತು(ಏಜೆನ್ಸೀಸ್​).