Annamalai | ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ರಾಜಕೀಯ ಕಣ ರಂಗು ಪಡೆದುಕೊಂಡಿದ್ದು, ಪಕ್ಷಗಳ ಆರೋಪ-ಪ್ರತ್ಯಾರೋಪ ಜೋರಾಗಿದೆ. ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟದ ವಿರುದ್ಧ ಬಿಜೆಪಿ ನಾಯಕ ಕೆ. ಅಣ್ಣಾಮಲೈ (Annamalai) ತೀವ್ರ ವಾಗ್ದಾಳಿ ನಡೆಸಿದ್ದು, ರಾಹುಲ್ ಗಾಂಧಿ ಪ್ರಚಾರದ ವೇಳೆ ಎಂ.ಕೆ. ಸ್ಟಾಲಿನ್ ಹೆಸರನ್ನು ಉಲ್ಲೇಖಿಸಿಲ್ಲ ಮತ್ತು ಅವರ ಪರವಾಗಿ ಪ್ರಚಾರ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಣ್ಣಾಮಲೈ, ಬಿಜೆಪಿಯನ್ನು ಹೊರಗಿಡುವ ಸಲುವಾಗಿ ಕಾಂಗ್ರೆಸ್ ನಾಯಕರು ಪ್ರಚಾರ ಮಾಡುತ್ತಿದ್ದು, ಕಳೆದ ಕೆಲವು ವಾರಗಳಲ್ಲಿ ಇಂಡಿಯಾ ಬ್ಲಾಕ್‌ನ ಯಾವುದೇ ನಾಯಕರು ಸ್ಟಾಲಿನ್ರನ್ನು ಮುಖ್ಯಮಂತ್ರಿಯಾಗಿ ಅನುಮೋದಿಸಿಲ್ಲ, ತಮಿಳುನಾಡಿನಾದ್ಯಂತ ಎನ್‌ಡಿಎ ಪರವಾದ ಅಲೆ ಕಾಣಿಸುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಜನರು ಬದಲಾವಣೆಗೆ ಮತ ಹಾಕುತ್ತಾರೆ ಮತ್ತು ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂದು ಅಣ್ಣಾಮಲೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಮತ್ತು ಸ್ಟಾಲಿನ್ ಚುನಾವಣೆಗೆ ಒಟ್ಟಿಗೆ ಪ್ರಚಾರ ಮಾಡುವುದಿಲ್ಲ ಎಂದು ಘೋಷಿಸಿತ್ತು. ಇಬ್ಬರೂ ನಾಯಕರು ಪ್ರತ್ಯೇಕ ವೇಳಾಪಟ್ಟಿಯನ್ನು ಪಾಲಿಸಬೇಕು ಎಂದು ಕಳೆದ ವಾರವಷ್ಟೇ ಡಿಎಂಕೆ ತಿಳಿಸಿತ್ತು. ಡಿಎಂಕೆ ನೇತೃತ್ವದ ಎಸ್‌ಪಿಎ ಭಾಗವಾಗಿ ಕಾಂಗ್ರೆಸ್ ಪಕ್ಷವು 28 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.
ಡಿಎಂಕೆ ಸ್ಪಷ್ಟನೆ..
ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟ ಸೋಲಬೇಕೆಂದು ರಾಹುಲ್ ಗಾಂಧಿ ಬಯಕೆಯಾಗಿದ್ದು, ಅದಕ್ಕಾಗಿಯೇ ಅವರು ಪ್ರಚಾರಕ್ಕೆ ರಾಜ್ಯಕ್ಕೆ ಬರುವುದಿಲ್ಲ ಎಂಬ ಅಣ್ಣಾಮಲೈ ಹೇಳಿಕೆಗೆ ತಿರುಗೇಟು ನೀಡಿದ ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಭಾರತಿ, ರಾಹುಲ್ ಗಾಂಧಿ ಒಂದು ಪ್ರದೇಶದಲ್ಲಿ ಪ್ರಚಾರ ಮಾಡಿದರೆ, ಮುಖ್ಯಮಂತ್ರಿ ಇನ್ನೊಂದು ಪ್ರದೇಶದಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ಹೇಳಿದರು. ಸ್ಟಾಲಿನ್ ಮತ್ತು ರಾಹುಲ್ ಗಾಂಧಿ ಇಬ್ಬರೂ ಪೂರ್ವಭಾವಿ ಪ್ರಯಾಣದ ಪ್ಲಾನ್ ಹೊಂದಿದ್ದು, ಅದರ ಪ್ರಕಾರವೇ ಪ್ರಚಾರ ಮಾಡಲಿದ್ದಾರೆ ಎಂದು ವಿವರಿಸಿದರು.
ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಡಿಎಂಕೆ ಮೈತ್ರಿಕೂಟಕ್ಕೆ ಬೆಂಬಲ ಹೆಚ್ಚುತ್ತಿದ್ದು, ಅತ್ತ ಚುನಾವಣಾ ಆಯೋಗವು ದೇಶಾದ್ಯಂತ ಬಿಜೆಪಿಯ ಬಿ ಟೀಮ್ ಆಗಿ ಕಾರ್ಯನಿರ್ವಹಿಸುತ್ತಿದೆ ಎಂದು ಭಾರತಿ ಆರೋಪಿಸಿದ್ದಾರೆ. 10,000 ರೂ. ಮೌಲ್ಯದ ಮಾದರಿ ಚೆಕ್‌ಗಳನ್ನು ವಿತರಿಸುವ ನೆಪದಲ್ಲಿ ಬಿಜೆಪಿ ಸದಸ್ಯರು ಮತದಾರರ ಗುರುತಿನ ಚೀಟಿ ಸಂಖ್ಯೆಗಳು ಸೇರಿದಂತೆ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು(ಏಜೆನ್ಸೀಸ್).