Aadhav Arjuna | ಎಐಎಡಿಎಂಕೆ-ಟಿವಿಕೆ ಒಗ್ಗಟ್ಟನ್ನು ಮೀರಿಸುವ ಶಕ್ತಿ ಮತ್ತೊಂದಿಲ್ಲ ಎಂದ ಆಧವ್ ಅರ್ಜುನ
Aadhav Arjuna: ತಮಿಳುನಾಡಿನಲ್ಲಿ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಎಐಎಡಿಎಂಕೆ ನಾಯಕರು ಮತ್ತು ಕಾರ್ಯಕರ್ತರನ್ನು ತನ್ನತ್ತ ಸೆಳೆಯುವ ಪ್ರಯತ್ನವನ್ನು ಮತ್ತಷ್ಟು ಚುರುಕುಗೊಳಿಸಿದ್ದು, ಇದರ ಭಾಗವಾಗಿ ಶನಿವಾರದಂದು ಎಐಎಡಿಎಂಕೆಯ ಹಲವು ಪ್ರಮುಖ ಮುಖಂಡರು ಅಧಿಕೃತವಾಗಿ ಟಿವಿಕೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಎಐಎಡಿಎಂಕೆ ಮಾಜಿ ಸಚಿವೆ ಗೋಮತಿ ಶ್ರೀನಿವಾಸನ್, ನಾಲ್ವರು ಮಾಜಿ ಶಾಸಕರು, ಚಲನಚಿತ್ರ ನಿರ್ದೇಶಕ ಆರ್.ವಿ. ಉದಯಕುಮಾರ್ ಮತ್ತು ನಟ ಮನ್ಸೂರ್ ಅಲಿ ಖಾನ್ ಅವರು ಟಿವಿಕೆ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಅಧಿಕೃತವಾಗಿ ಪಕ್ಷದ ಬಾವುಟ ಹಿಡಿದರು. ಇವರೊಂದಿಗೆ ಎಐಎಡಿಎಂಕೆಯ ತಳಮಟ್ಟದ ನೂರಾರು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕೂಡ ಟಿವಿಕೆ ಪಕ್ಷದ ಸದಸ್ಯತ್ವ ಪಡೆದುಕೊಂಡಿದ್ದಾರೆ.
ಪಕ್ಷಕ್ಕೆ ಸೇರಿದ ಹೊಸ ಮುಖಂಡರನ್ನು ಸ್ವಾಗತಿಸಿ ಮಾತನಾಡಿದ ಸಚಿವ ಆಧವ್ ಅರ್ಜುನ, ಎಐಎಡಿಎಂಕೆಯ ಸುಮಾರು ಶೇಕಡಾ 90 ರಷ್ಟು ಕಾರ್ಯಕರ್ತರು ಈಗ ನಮ್ಮ ಪಕ್ಷದತ್ತ ಹೆಜ್ಜೆ ಇಡಲು ಪ್ರಾರಂಭಿಸಿದ್ದು, ಟಿವಿಕೆ ಮತ್ತು ಎಐಎಡಿಎಂಕೆ ಪಕ್ಷಗಳ ಉದ್ದೇಶ ಒಂದೇ ಆಗಿದೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಟಿವಿಕೆ ಪಕ್ಷವು ಕೇವಲ ಹುದ್ದೆಗಳ ಆಮಿಷ ಒಡ್ಡಿ ಜನರನ್ನು ಸೇರಿಸಿಕೊಳ್ಳುವ ಪಕ್ಷವಲ್ಲ. ಯಾರು ತಾಳ್ಮೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಾರೋ ಅವರಿಗೆ ಸೂಕ್ತ ಸಮಯದಲ್ಲಿ ಖಂಡಿತವಾಗಿಯೂ ಮನ್ನಣೆ ಸಿಗುತ್ತದೆ ಎಂದು ಅರ್ಜುನ ಭರವಸೆ ನೀಡಿದರು.
ಮುಂದುವರಿದು ಮಾತನಾಡಿದ ಸಚಿವ ಅಧವ್, ಎಐಎಡಿಎಂಕೆಯು ಡಿಎಂಕೆ ಪಕ್ಷದೊಂದಿಗೆ ಹೊಂದಿರುವ ಮೈತ್ರಿ ಅಥವಾ ಒಡನಾಟವು ಅದರದೇ ಪಕ್ಷದ ಅನೇಕ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ತೀವ್ರ ನಿರಾಶೆ ಮೂಡಿಸಿದೆ ಎಂದು ಆರೋಪಿಸಿದರು. ಈ ನಡೆ ಮಾಜಿ ಮುಖ್ಯಮಂತ್ರಿ ದಿವಂಗತ ಎಂ ಜಿ ರಾಮಚಂದ್ರನ್ (MGR) ಅವರ ಆದರ್ಶಗಳಿಗೆ ತದ್ವಿರುದ್ಧವಾಗಿದೆ ಎಂದು ಅವರು ದೂರಿದರು. ಎಐಎಡಿಎಂಕೆ ಕಾರ್ಯಕರ್ತರು ಸದ್ಯ ನಿರಾಶೆಗೊಂಡಿದ್ದು, ಇದೇ ಕಾರಣಕ್ಕೆ ಅವರೆಲ್ಲರೂ ಟಿವಿಕೆ ಕಡೆಗೆ ಮುಖ ಮಾಡುತ್ತಿದ್ದಾರೆ. ನಮ್ಮ ಮುಂದಿನ ಸಂಪೂರ್ಣ ಗಮನ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೇಲಿದ್ದು, ಶೇಕಡಾ 99 ರಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸಲು ನಾವು ದೃಢಸಂಕಲ್ಪ ಮಾಡಿದ್ದೇವೆ. ಎಐಎಡಿಎಂಕೆ ಮತ್ತು ಟಿವಿಕೆ ಕಾರ್ಯಕರ್ತರ ಸಂಯೋಜಿತ ಶಕ್ತಿಯನ್ನು ತಮಿಳುನಾಡಿನಲ್ಲಿ ಯಾರೂ ಎದುರಿಸಲು ಸಾಧ್ಯವಿಲ್ಲ. ಈ ಒಗ್ಗಟ್ಟನ್ನು ಮೀರಿಸುವ ಶಕ್ತಿ ರಾಜ್ಯದಲ್ಲಿ ಮತ್ತೊಂದಿಲ್ಲ ಎಂದು ಆಧವ್ ಅರ್ಜುನ ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷಕ್ಕೆ ಸೇರ್ಪಡೆಯಾದ ಪ್ರಮುಖ ನಾಯಕರಲ್ಲಿ ಮಾಜಿ ಸಚಿವೆ ಗೋಮತಿ ಶ್ರೀನಿವಾಸನ್ ಅವರ ಹೆಸರು ಮುಂಚೂಣಿಯಲ್ಲಿದೆ. ಇವರು 1980 ರಿಂದ 1987 ರ ನಡುವೆ ಎಂಜಿಆರ್ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಇದಕ್ಕೂ ಮುನ್ನ ಎಐಎಡಿಎಂಕೆಯ ನಾಲ್ವರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಟಿವಿಕೆ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆದರೆ ಎಐಎಡಿಎಂಕೆ ನಾಯಕರು ಈ ಬೆಳವಣಿಗೆಗಳನ್ನು ತಳ್ಳಿಹಾಕಿದ್ದು, ಪಕ್ಷದ ಅಸ್ತಿತ್ವವನ್ನು ದುರ್ಬಲಗೊಳಿಸಲು ಅಥವಾ ನಾಶಮಾಡಲು ಯಾವುದೇ ರಾಜಕೀಯ ಶಕ್ತಿಯಿಂದ ಸಾಧ್ಯವಿಲ್ಲ ಎಂದಿದ್ದಾರೆ(ಏಜೆನ್ಸೀಸ್).