ಸಿಎಂ ಎಂ.ಕೆ.ಸ್ಟಾಲಿನ್ ಮತ್ತು ರಾಜ್ಯಪಾಲ ಆರ್.ಎನ್​.ರವಿ 
ದೇಶ

ದೇಶಭಕ್ತಿಯಲ್ಲಿ ಯಾರಿಗೂ ಕಡಿಮೆ ಇಲ್ಲ; ನಮಗೆ ಪಾಠ ಹೇಳಲು ಬರಬೇಡಿ; ಗವರ್ನರ್ ಆರ್.ಎನ್​.ರವಿ ವಿರುದ್ಧ ಸಿಎಂ ಸ್ಟಾಲಿನ್ ಕಿಡಿ | M K Stalin

ಚೆನ್ನೈ: ಅಧಿವೇಶನದಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ವಾರ್ಷಿಕ ಭಾಷಣವನ್ನು ಮಾಡದೇ ತೆರಳಿದ್ದ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ವಿರುದ್ಧ ಶನಿವಾರ(ಜ. 24) ಸಿಎಂ ಎಂ.ಕೆ.ಸ್ಟಾಲಿನ್ ವಾಗ್ದಾಳಿ ನಡೆಸಿದ್ದು, ದೇಶಭಕ್ತಿಯಲ್ಲಿ ಯಾರಿಗೂ ಕಡಿಮೆ ಇಲ್ಲ; ನಮಗೆ ಪಾಠ ಹೇಳಲು ಬರಬೇಡಿ ಎಂದು ಕಿಡಿಕಾರಿದ್ದಾರೆ.
ಈ ಕುರಿತು ವಿಧಾನಸಭೆಯಲ್ಲಿ ಮಾತನಾಡಿರುವ ಅವರು, ಅಧಿವೇಶನದ ಆರಂಭದಲ್ಲಿ ಸಾಂಪ್ರದಾಯಿಕ ಭಾಷಣವನ್ನು ಓದಲು ನಿರಾಕರಿಸುವ ಮೂಲಕ ರಾಜ್ಯಪಾಲರು ಸಾಂವಿಧಾನಿಕ ಸಂಪ್ರದಾಯಗಳನ್ನು ದುರ್ಬಲಗೊಳಿಸಿದ್ದಾರೆ. ಮತ್ತು ಅವರು ಹೊಂದಿರುವ ಹುದ್ದೆಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕೋಟ್ಯಂತರ ಜನರಿಂದ ಆಯ್ಕೆಯಾದ ಈ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದದೆ, ರಾಜ್ಯಪಾಲರು ತಮ್ಮ ಹುದ್ದೆಗೆ ಅವಮಾನ ಮಾಡುತ್ತಿದ್ದಾರೆ. ಹಿಂದಿನ ರಾಜ್ಯಪಾಲರು ಆರ್.ಎನ್​.ರವಿಯವರಂತೆ ಇರಲಿಲ್ಲ. ಆದರೆ ನಾವು ಅವರನ್ನು ಟೀಕಿಸುವಂತಿಲ್ಲ. ರಾಜ್ಯಪಾಲರ ವರ್ತನೆ ನಮಗೆ ದುಃಖ ತಂದೆ ಎಂದು ತಿಳಿಸಿದ್ದಾರೆ.
ರಾಜ್ಯಪಾಲರು ಸರ್ಕಾರದ ವಿರುದ್ಧ ವರ್ತಿಸುತ್ತಿದ್ದಾರೆ. ಒಂದೇ ಕಾರಣವನ್ನು ಉಲ್ಲೇಖಿಸಿ ವಿಧಾನಸಭೆಯಿಂದ ಹೊರನಡೆಯುತ್ತಾರೆ. ನಾನು ರಾಷ್ಟ್ರ ಮತ್ತು ರಾಷ್ಟ್ರಗೀತೆಯ ಬಗ್ಗೆ ಆಳವಾದ ಗೌರವವನ್ನು ಹೊಂದಿರುವ ವ್ಯಕ್ತಿ. ತಮಿಳುನಾಡಿನಲ್ಲಿ ವಿಧಾನಸಭಾ ಸಂಪ್ರದಾಯವು ಕಲಾಪದ ಆರಂಭದಲ್ಲಿ ತಮಿಳು ಥಾಯ್ ವಳ್ತು ಮತ್ತು ಕೊನೆಯಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಒಳಗೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನೂ ತಮ್ಮ ಸರ್ಕಾರದ ಸಾಧನೆಯನ್ನು ಎತ್ತಿ ತೋರಿಸಿದ ಸ್ಟಾಲಿನ್, ದ್ರಾವಿಡ ಮಾಡಲ್ ಸರ್ಕಾರದ ಸಾಧನೆಗಳಿಂದಾಗಿ ತಮಿಳುನಾಡು ಇಂದು ತನ್ನ ತಲೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದೆ. ತಮಿಳುನಾಡು ಇತರ ರಾಜ್ಯಗಳಿಗಿಂತ ಹೆಚ್ಚು ಅಭಿವೃದ್ಧಿ ಹೊಂದಿದೆ. ಇದಕ್ಕೆ ಕಾರಣ ನಮ್ಮ ಯೋಜನೆಗಳುನ ಎಂದಿದ್ದಾರೆ (ಏಜೆನ್ಸೀಸ್).