Shashi Tharoor | ಸಚಿವ ಕಿರಣ್ ರಿಜಿಜು ಜೊತೆ ಕಾಂಗ್ರೆಸ್​​ ಸಂಸದ ತರೂರ್  
ದೇಶ

ನಾನು ಮಹಿಳಾ ವಿರೋಧಿ ಅಲ್ಲ ಎನ್ನುವುದನ್ನು ಸಚಿವರೇ ಒಪ್ಪಿಕೊಂಡರು; ರಿಜಿಜು ಜೊತೆಗಿನ ಸಂವಾದದ ಮಾಹಿತಿ ಹಂಚಿಕೊಂಡ ಸಂಸದ ತರೂರ್ | Shashi Tharoor

ನವದೆಹಲಿ: ಮೂರು ದಿನಗಳ ವಿಶೇಷ ಅಧಿವೇಶನದ ಬಳಿಕ ಲೋಕಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದಡಿದ್ದು, ತಿರುವನಂತಪುರಂ ಸಂಸದ ಶಶಿ ತರೂರ್, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರೊಂದಿಗಿನ ಒಂದು ಕುತೂಹಲಕಾರಿ ಸಂಭಾಷಣೆಯನ್ನು ನೆನಪಿಸಿಕೊಂಡಿದ್ದಾರೆ.
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಅಂಗೀಕಾರಗೊಳ್ಳಲು ವಿಫಲವಾದ ಬಳಿಕ, ವಿರೋಧ ಪಕ್ಷಗಳ ಸದಸ್ಯರನ್ನು ಬಿಜೆಪಿ ನಾಯಕರು ಮಹಿಳಾ ವಿರೋಧಿ ಎಂದು ಬಿಂಬಿಸಿದ್ದು, ಇಂತಹ ನಿಲುವಿನ ನಡುವೆಯೇ, ತಮ್ಮನ್ನು ಯಾರೂ ಹಾಗೆ ಕರೆಯಲು ಸಾಧ್ಯವಿಲ್ಲ ಎಂಬ ಅಂಶವನ್ನು ರಿಜಿಜು ಅವರೂ ಒಪ್ಪಿಕೊಂಡಿದ್ದಾರೆ ಎಂದು ತರೂರ್ ಹೇಳಿದ್ದಾರೆ.
ಸದನದ ಕಲಾಪ ಮುಗಿದ ಬಳಿಕ ರಿಜಿಜು ಮತ್ತು ಇತರ ವಿರೋಧ ಪಕ್ಷದ ಸದಸ್ಯರೊಂದಿಗೆ ಇರುವ ಫೋಟೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಶಶಿ ತರೂರ್, ಕಿರಣ್ ರಿಜಿಜು, ಕಾಂಗ್ರೆಸ್​ ವಿರೋಧ ಪಕ್ಷವನ್ನು ಮಹಿಳಾ ವಿರೋಧಿ ಎಂದು ಏಕೆ ಕರೆಯುತ್ತಿದೆ ಎಂಬುದನ್ನು ವಿವರಿಸುತ್ತಿದ್ದರು. ಆ ಸಮಯದಲ್ಲಿ, ಯಾರೂ ನನ್ನನ್ನು ಮಹಿಳಾ ವಿರೋಧಿ ಎಂದು ಕರೆಯಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿಸಿದೆ, ಆ ಅಂಶವನ್ನು ಅವರು ಒಪ್ಪಿಕೊಂಡರು ಎಂದು ತರೂರ್ ಬರೆದಿದ್ದಾರೆ.
ಮಹಿಳೆಯರು ಪ್ರಾತಿನಿಧ್ಯಕ್ಕೆ ಅರ್ಹರು
ಮಹಿಳಾ ಪ್ರಾತಿನಿಧ್ಯದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ತರೂರ್, ಮಹಿಳೆಯರು ಸಂಸತ್ತಿನಲ್ಲಿ ಮತ್ತು ಪ್ರತಿಯೊಂದು ಸಂಸ್ಥೆಯಲ್ಲಿ ಪ್ರಾತಿನಿಧ್ಯಕ್ಕೆ ಅರ್ಹರು. ಆದರೆ, ಅವರ ಪ್ರಗತಿಯನ್ನು ನಮ್ಮ ಪ್ರಜಾಪ್ರಭುತ್ವವನ್ನೇ ಧ್ವಂಸಗೊಳಿಸಬಹುದಾದ ಅಪಾಯಕಾರಿ ಕ್ಷೇತ್ರ ಪುನರ್ವಿಂಗಡಣೆಗೆ (ಡಿಲಿಮಿಟೇಶನ್) ಜೋಡಿಸಬೇಡಿ," ಎಂದು ಅವರು ಪ್ರತಿಪಾದಿಸಿದರು.
ಮಸೂದೆಯ ಸೋಲನ್ನು ಕಾಂಗ್ರೆಸ್ ಪ್ರಜಾಪ್ರಭುತ್ವ ತತ್ವಗಳು ಮತ್ತು ಸಂವಿಧಾನದ ಗೆಲುವು ಎಂದು ಬಣ್ಣಿಸಿರುವ ಕಾಂಗ್ರೆಸ್​, ಮಹಿಳಾ ಮೀಸಲಾತಿಯನ್ನು ಡಿಲಿಮಿಟೇಶನ್‌ನೊಂದಿಗೆ ಜೋಡಿಸುವ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್​ ಷಾ ಪ್ರಯತ್ನವನ್ನು ಸದನ ತಿರಸ್ಕರಿಸಿದೆ ಎಂದಿದೆ. ಬಿಜೆಪಿ ಈ ದಿನವನ್ನು ಕರಾಳ ದಿನ ಎಂದು ಕರೆದಿದ್ದು, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಮಹಿಳೆಯರ ಕೋಪವನ್ನು ಎದುರಿಸಬೇಕಾಗುತ್ತದೆ. ಇದು ಅವರ ಮೇಲಿನ ಅಳಿಸಲಾಗದ ಕಪ್ಪು ಕಲೆ. ಮಹಿಳೆಯರಿಗೆ ಐತಿಹಾಸಿಕ ಪ್ರಾತಿನಿಧ್ಯ ನೀಡುವ ಬಗ್ಗೆ ಆಕ್ಷೇಪ ಇರಲು ಹೇಗೆ ಸಾಧ್ಯ? ಎಂದು ಸಚಿವ ಕಿರಣ್ ರಿಜಿಜು ಕಿಡಿಕಾರಿದ್ದಾರೆ.

ಮಸೂದೆಗೆ ಸೋಲು..

ಸಂಸತ್ತಿನಲ್ಲಿ ನಡೆದ ಮತದಾನದ ವಿವರಗಳ ಪ್ರಕಾರ, ಚರ್ಚೆಯ ಬಳಿಕ ನಡೆದ ಮತದಾನದಲ್ಲಿ ಒಟ್ಟು 528 ಸದಸ್ಯರು ಭಾಗವಹಿಸಿದ್ದರು. ಈ ಪೈಕಿ 298 ಸದಸ್ಯರು ಮಸೂದೆಯ ಪರವಾಗಿ ಮತ ಚಲಾಯಿಸಿದರೆ, 230 ಸದಸ್ಯರು ಮಸೂದೆಯನ್ನು ವಿರೋಧಿಸಿ ಮತ ಹಾಕಿದರು. ಸಾಂವಿಧಾನಿಕ ತಿದ್ದುಪಡಿ ಮಸೂದೆಯು ಅಂಗೀಕಾರವಾಗಲು ಸದನದಲ್ಲಿ ಹಾಜರಿದ್ದು ಮತ ಚಲಾಯಿಸುವ ಸದಸ್ಯರ ಪೈಕಿ ಕನಿಷ್ಠ ಮೂರನೇ ಎರಡರಷ್ಟು (ಅಂದರೆ ಸುಮಾರು 326 ಮತಗಳು) ಬೆಂಬಲದ ಅಗತ್ಯವಿತ್ತು. ಆದರೆ ಸರ್ಕಾರದ ಪರವಾಗಿ ಚಲಾವಣೆಯಾಗಿದ್ದು 298 ಮತಗಳು.
ಇಂಡಿಯಾ ಕೂಟದ ಬಹುತೇಕ ಎಲ್ಲಾ ಪಕ್ಷಗಳು ಈ ಮಸೂದೆಗಳನ್ನು ಒಗ್ಗಟ್ಟಿನಿಂದ ವಿರೋಧಿಸಿದ್ದು ಈ ಸೋಲಿಗೆ ಪ್ರಮುಖ ಕಾರಣವಾಗಿದೆ. ಹೊಸ ಜನಗಣತಿಯಿಲ್ಲದೆ ಕ್ಷೇತ್ರ ಪುನರ್ವಿಂಗಡಣೆ ಮಾಡುವುದು ದಕ್ಷಿಣದ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯಕ್ಕೆ ಧಕ್ಕೆ ತರುತ್ತದೆ ಮತ್ತು ಇದು ಒಬಿಸಿ ಸಮುದಾಯವನ್ನು ನಿರ್ಲಕ್ಷಿಸುವ ಪ್ರಯತ್ನ ಎಂದು ವಿರೋಧ ಪಕ್ಷಗಳು ವಾದಿಸಿದವು. 2029ರ ಚುನಾವಣೆಯಿಂದ ಮೀಸಲಾತಿ ಜಾರಿಯಾಗಲಿದೆ ಎಂಬ ಸರ್ಕಾರದ ಪ್ರಸ್ತಾಪವನ್ನು ಚುನಾವಣಾ ಗಿಮಿಕ್ ಎಂದು ಕರೆದಿದ್ದ ವಿಪಕ್ಷಗಳು, ಅಂತಿಮವಾಗಿ ಸದನದಲ್ಲಿ ಮಸೂದೆಯನ್ನು ತಡೆಯುವಲ್ಲಿ ಯಶಸ್ವಿಯಾಗಿವೆ(ಏಜೆನ್ಸೀಸ್​).