Supriya Sule | ಕ್ಷೇತ್ರ ಮರುವಿಂಗಡಣೆ ಬಿಲ್‌ಗೆ ಜೈ ಅಂತಾರಾ ಶರದ್ ಪವಾರ್..? ಕಡೆಗೂ ಮೌನ ಮುರಿದು ಮಹತ್ವದ ಸ್ಪಷ್ಟನೆ ನೀಡಿದ ಸಂಸದೆ ಸುಪ್ರಿಯಾ ಸುಳೆ! 
ದೇಶ

ಕ್ಷೇತ್ರ ಮರುವಿಂಗಡಣೆ ಬಿಲ್‌ಗೆ ಜೈ ಅಂತಾರಾ ಶರದ್ ಪವಾರ್..? ಕಡೆಗೂ ಮೌನ ಮುರಿದು ಮಹತ್ವದ ಸ್ಪಷ್ಟನೆ ನೀಡಿದ ಸಂಸದೆ ಸುಪ್ರಿಯಾ ಸುಳೆ! | Supriya Sule

ಮುಂಬೈ: ರಾಷ್ಟ್ರವಾದಿ ಕಾಂಗ್ರೆಸ್ ಪಾರ್ಟಿ (ಶರದ್ ಪವಾರ್ ಬಣ) ಎನ್‌ಡಿಎ ಒಕ್ಕೂಟ ಸೇರದೆ ಮುಂಗಾರು ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಮಸೂದೆಗಳಿಗೆ ಬೆಂಬಲ ನೀಡಲಿದೆ ಎಂಬ ವರದಿಗಳನ್ನು ಸಂಸದೆ ಸುಪ್ರಿಯಾ ಸುಳೆ (Supriya Sule) ತಳ್ಳಿಹಾಕಿದ್ದಾರೆ. ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಇಂತಹ ವರದಿಗಳು ಕೇವಲ ಮೂಲಗಳ ಆಧಾರಿತವಾಗಿದ್ದು, ಪಕ್ಷದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ ಎಂದು ಬುಧವಾರ ಸ್ಪಷ್ಟಪಡಿಸಿದ್ದಾರೆ.
ಸಂಸತ್ತಿನಲ್ಲಿ ಹೊಸ ಮಸೂದೆ ಮಂಡನೆಯಾಗುವವರೆಗೂ ನಾವು ಈ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ ಸುಪ್ರಿಯಾ ಸುಳೆ, ನಾವು ಈಗಾಗಲೇ ಮಹಿಳಾ ಮೀಸಲಾತಿ ಮಸೂದೆಯನ್ನು ಪೂರ್ಣ ಬಹುಮತದೊಂದಿಗೆ ಅಂಗೀಕರಿಸಿದ್ದೇವೆ ಎಂದರು.
ಇದೇ ವೇಳೆ ಕ್ಷೇತ್ರ ಮರುವಿಂಗಡಣೆ ಕುರಿತು ಮಾತನಾಡಿದ ಅವರು, ಒಂದು ವೇಳೆ ಕ್ಷೇತ್ರ ಮರುವಿಂಗಡಣೆಯು ಕೇವಲ ಜನಸಂಖ್ಯೆಯ ಆಧಾರದ ಮೇಲೆ ನಡೆದರೆ, ಅದು ದಕ್ಷಿಣ ಭಾರತದ ರಾಜ್ಯಗಳಿಗೆ ಮಾಡುವ ಅನ್ಯಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿ ರಾಜ್ಯಕ್ಕೂ ಶೇಕಡಾ 50ರ ಸೂತ್ರವನ್ನು ಅಳವಡಿಸಿಕೊಳ್ಳುವ ಪ್ರಸ್ತಾಪವನ್ನು ಅಮಿತ್ ಷಾ ಮತ್ತು ಕಿರೆನ್ ರಿಜಿಜು ಅವರ ಮುಂದಿಡಲಾಗಿತ್ತು. ಈ ಸೂತ್ರದ ಅಡಿಯಲ್ಲಿ ಮಹಾರಾಷ್ಟ್ರದ ಲೋಕಸಭಾ ಸೀಟುಗಳ ಸಂಖ್ಯೆ 48 ರಿಂದ 72 ಕ್ಕೆ ಏರಿಕೆಯಾಗಲಿದೆ ಎಂದು ವಿವರಿಸಿದರು.
ಪಕ್ಷದ ಮುಂದಿನ ನಿಲುವನ್ನು ಸ್ಪಷ್ಟಪಡಿಸಿದ ಸುಪ್ರಿಯಾ ಸುಳೆ, ನಮ್ಮನ್ನು ಮೊದಲು ಕಾಂಗ್ರೆಸ್ ಜೊತೆ ಹಾಗೂ ನಂತರ ಬಿಜೆಪಿಯೊಂದಿಗೆ ವಿಲೀನಗೊಳಿಸುವ ವರದಿಗಳು ಹರಡಿದ್ದವು. ಈಗ ಕೇವಲ ಎಂಎನ್ಎಸ್ ಮಾತ್ರ ಉಳಿದುಕೊಂಡಿದೆ. ನಮ್ಮ ಪಕ್ಷದ ಯಾವುದೇ ನಾಯಕರೂ ಎಂದಿಗೂ ಎನ್‌ಡಿಎ ಸೇರುವ ಬಗ್ಗೆ ಮಾತನಾಡಿಲ್ಲ ಮತ್ತು ನಾವು ಯಾವುದೇ ಕಾರಣಕ್ಕೂ ಎನ್‌ಡಿಎ ಮೈತ್ರಿಕೂಟವನ್ನು ಸೇರುವುದಿಲ್ಲ ಎಂದು ವರದಿಗಳಿಗೆ ಖಡಕ್ ಉತ್ತರ ನೀಡಿದ್ದಾರೆ.

ಸಿಎಂ ಫಡ್ನವೀಸ್ ಭೇಟಿ ಕುರಿತು ಜಯಂತ್ ಪಾಟೀಲ್ ಸ್ಪಷ್ಟನೆ

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅಧಿಕೃತ ನಿವಾಸದಲ್ಲಿ ಉಭಯ ಎನ್‌ಸಿಪಿ ಬಣಗಳ ನಾಯಕರು ತಡರಾತ್ರಿ ಜಂಟಿ ಸಭೆ ನಡೆಸಿದ್ದಾರೆ ಎಂಬ ಊಹಾಪೋಹಗಳಿಗೆ ಶರದ್ ಪವಾರ್ ಬಣದ ಹಿರಿಯ ನಾಯಕ ಜಯಂತ್ ಪಾಟೀಲ್ ಕೂಡ ತೆರೆ ಎಳೆದಿದ್ದಾರೆ.
ತಮ್ಮ ಭೇಟಿಯ ಅಸಲಿ ಕಾರಣವನ್ನು ಬಹಿರಂಗಪಡಿಸಿದ ಜಯಂತ್ ಪಾಟೀಲ್, ನನ್ನ ಇಸ್ಲಾಮ್‌ಪುರ ಕ್ಷೇತ್ರದ ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಲು ಹೋಗಿದ್ದೆ. ಮುಖ್ಯಮಂತ್ರಿಗಳ ಕಚೇರಿಯ ವೇಟಿಂಗ್​ ರೂಮ್​ನಲ್ಲಿ ಕುಳಿತಿದ್ದಾಗ ಅಜಿತ್ ಪವಾರ್ ಬಣದ ನಾಯಕರಾದ ಸುನಿಲ್ ತಟ್ಕರೆ ಮತ್ತು ಪ್ರಫುಲ್ ಪಟೇಲ್ ಸಿಎಂ ಜೊತೆ ಸಭೆ ನಡೆಸುತ್ತಿದ್ದರು. ಅಲ್ಲಿನ ಚರ್ಚಾ ವಿಷಯವೇನು ಎಂಬುದು ನನಗೆ ತಿಳಿದಿರಲಿಲ್ಲ ಎಂದು ಪಾಟೀಲ್ ಹೇಳಿದ್ದಾರೆ.
ನಾನು ಪ್ರಫುಲ್ ಪಟೇಲ್ ಅವರನ್ನಾಗಲಿ ಅಥವಾ ಸುನಿಲ್ ತಟ್ಕರೆ ಅವರನ್ನಾಗಲಿ ಭೇಟಿಯಾಗಿಲ್ಲ, ಹಾಗೂ ನಾವು ಮೂವರೂ ಮುಖ್ಯಮಂತ್ರಿಗಳೊಂದಿಗೆ ಯಾವುದೇ ಜಂಟಿ ಸಭೆಯನ್ನು ನಡೆಸಿಲ್ಲ ಎಂದು ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಮುಂಬರುವ ಮುಂಗಾರು ಅಧಿವೇಶನದಲ್ಲಿ ಲೋಕಸಭಾ ಸೀಟುಗಳ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸಲು ಹಾಗೂ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯನ್ನು ಆರಂಭಿಸಲು ಸರ್ಕಾರ ತರಲಿರುವ ಸಂವಿಧಾನದ (131ನೇ ತಿದ್ದುಪಡಿ) ಮಸೂದೆಗೆ ಶರದ್ ಪವಾರ್ ಬಣವು ಎನ್‌ಡಿಎ ಮೈತ್ರಿಕೂಟಕ್ಕೆ ಸೇರದೆ ಹೊರಗಿನಿಂದ ಬೆಂಬಲ ನೀಡಲಿದೆ ಎಂದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ನಡೆದಿತ್ತು. ಆದರೆ ಈಗ ಪಕ್ಷದ ಪ್ರಮುಖ ನಾಯಕರು ಈ ಎಲ್ಲಾ ವರದಿಗಳನ್ನು ಅಧಿಕೃತವಾಗಿ ನಿರಾಕರಿಸಿದ್ದಾರೆ(ಏಜೆನ್ಸೀಸ್​).