ಪರಮಾಣು ಅಸ್ತ್ರ ಹೊಂದುವಂತಿಲ್ಲ! ಇರಾನ್ ಬಾಲ ಬಿಚ್ಚಿದರೆ ಸುಮ್ಮನಿರಲ್ಲ! ಅಮೆರಿಕ ವಿದೇಶಾಂಗ ಕಾರ್ಯದರ್ಶಿ ರುಬಿಯೊ ಗುಡುಗು!
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಹೊತ್ತಿ ಉರಿಯುತ್ತಿರುವ ಯುದ್ಧದ ಜ್ವಾಲೆ ಹಾಗೂ ಜಾಗತಿಕ ತೈಲ ಮಾರುಕಟ್ಟೆಯ ಬಿಕ್ಕಟ್ಟಿನ ನಡುವೆಯೇ, ಭಾರತ ಪ್ರವಾಸದಲ್ಲಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ(Marco Rubio) ಅವರು ಇರಾನ್ ಇಸ್ಲಾಮಿಕ್ ಗಣರಾಜ್ಯಕ್ಕೆ ಅತ್ಯಂತ ಕಟು ಎಚ್ಚರಿಕೆಯನ್ನು ನೀಡಿದ್ದಾರೆ. ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರಗಳನ್ನು ಹೊಂದುವುದನ್ನು ಅಮೆರಿಕ ಸಹಿಸುವುದಿಲ್ಲ. ಇರಾನ್ ತನ್ನ ಬಳಿ ಇರುವ ಸಂವರ್ಧಿತ ಯುರೇನಿಯಂ ಅನ್ನು ತಕ್ಷಣವೇ ಹಸ್ತಾಂತರಿಸಬೇಕು ಹಾಗೂ ಹೊರ್ಮುಜ್ ಜಲಸಂಧಿಯನ್ನು ಯಾವುದೇ ಸುಂಕವಿಲ್ಲದೆ ಮುಕ್ತವಾಗಿಡಬೇಕು ಎಂದು ನವದೆಹಲಿಯಲ್ಲಿ ಖಡಕ್ ಆಗಿ ಜಗತ್ತಿಗೆ ಸಾರಿದ್ದಾರೆ.
ತಮ್ಮ ನಾಲ್ಕು ದಿನಗಳ ಭಾರತ ಪ್ರವಾಸದ ಮೊದಲ ದಿನವಾದ ಶನಿವಾರ (ಮೇ.23) ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರುಬಿಯೊ, ಇರಾನ್ ಬಿಕ್ಕಟ್ಟನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅತ್ಯಂತ ಚಾಣಾಕ್ಷತನದಿಂದ ನಿಭಾಯಿಸುತ್ತಿದ್ದಾರೆ ಎಂದು ಪ್ರಶಂಸಿಸಿದ್ದಾರೆ.
ಪ್ರಧಾನಿ ಮೋದಿ ಜೊತೆ ಉನ್ನತ ಮಟ್ಟದ ರಹಸ್ಯ ಚರ್ಚೆ: ಇರಾನ್‌ಗೆ ಬಿಗ್ ಶಾಕ್!
ನವದೆಹಲಿಯಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾರ್ಕೊ ರುಬಿಯೊ ನಡುವೆ ನಡೆದ ಒಂದು ಗಂಟೆಗೂ ಹೆಚ್ಚು ಕಾಲದ ಸುದೀರ್ಘ ಸಭೆಯಲ್ಲಿ ಇರಾನ್ ಮತ್ತು ಪಶ್ಚಿಮ ಏಷ್ಯಾದ ಭೀಕರ ಯುದ್ಧದ ಪರಿಸ್ಥಿತಿಯೇ ಪ್ರಮುಖ ಚರ್ಚೆಯ ವಿಷಯವಾಗಿತ್ತು. ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ಟಾಮಿ ಪಿಗೊಟ್ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಇರಾನ್ ಇಡೀ ಜಾಗತಿಕ ಇಂಧನ ಮಾರುಕಟ್ಟೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಜಗತ್ತನ್ನು ಒತ್ತೆ ಇಟ್ಟುಕೊಳ್ಳಲು ವಾಷಿಂಗ್ಟನ್ ಎಂದಿಗೂ ಬಿಡುವುದಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿಯವರು ಪ್ರಧಾನಿ ಮೋದಿಯವರಿಗೆ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಜೊತೆಗೆ, ಇರಾನ್‌ನಿಂದ ತೈಲ ಪೂರೈಕೆ ಸ್ಥಗಿತಗೊಂಡರೆ ಭಾರತದ ಇಂಧನ ಕೊರತೆಯನ್ನು ನೀಗಿಸಲು ಅಮೆರಿಕದ ಇಂಧನ ಉತ್ಪನ್ನಗಳು ಸಂಪೂರ್ಣವಾಗಿ ಸಿದ್ಧವಾಗಿವೆ ಮತ್ತು ಇದು ಭಾರತದ ಇಂಧನ ಮೂಲಗಳನ್ನು ವೈವಿಧ್ಯಗೊಳಿಸಲು ನೆರವಾಗಲಿದೆ ಎಂದು ಅಮೆರಿಕ ಭರವಸೆ ನೀಡಿದೆ.
ಶಾಂತಿ ಒಪ್ಪಂದದ ಕರಡು ಸಿದ್ಧ: ಆದರೆ ಪರಮಾಣು ವಿಷಯದಲ್ಲೇ ತಗಾದೆ!
ಪ್ರಸ್ತುತ ಜಾಗತಿಕ ವರದಿಗಳ ಪ್ರಕಾರ, ಯುಎಸ್ ಮತ್ತು ಇರಾನ್ ನಡುವಿನ ಯುದ್ಧವನ್ನು ಶಾಶ್ವತವಾಗಿ ಕೊನೆಗಾಣಿಸಲು ಶಾಂತಿ ಒಪ್ಪಂದದ ಕರಡು ಸಿದ್ಧವಾಗಿದ್ದು, ಅಂತಿಮ ಹಂತದ ಮಾತುಕತೆಗಳು ನಡೆಯುತ್ತಿವೆ. ಶೀಘ್ರದಲ್ಲೇ ಉಭಯ ದೇಶಗಳ ನಡುವೆ ಮಹತ್ವದ ಜಂಟಿ ಪ್ರಕಟಣೆ ಹೊರಬೀಳುವ ಸಾಧ್ಯತೆಯೂ ಇದೆ. ಆದರೆ, ಈ ಒಪ್ಪಂದಕ್ಕೆ ಅಮೆರಿಕ ವಿಧಿಸಿರುವ ಕಠಿಣ ಷರತ್ತುಗಳೇ ದೊಡ್ಡ ಕಂಟಕವಾಗಿ ಪರಿಣಮಿಸಿವೆ.
ವಿಶ್ವದ ಒಟ್ಟು ಕಚ್ಚಾ ತೈಲದ ಐದನೇ ಒಂದು ಭಾಗ ಹಾದುಹೋಗುವ ಅತ್ಯಂತ ನಿರ್ಣಾಯಕ 'ಹೊರ್ಮುಜ್ ಜಲಸಂಧಿಯನ್ನು ಇರಾನ್ ಯಾವುದೇ ತೆರಿಗೆ ಅಥವಾ ಸುಂಕವಿಲ್ಲದೆ ಮುಕ್ತ ವ್ಯಾಪಾರಕ್ಕಾಗಿ ತೆರೆದಿಡಬೇಕು ಎಂಬುದು ಅಮೆರಿಕದ ಹಠವಾಗಿದೆ. ಆದರೆ, ಇರಾನ್ ಮಾತ್ರ ತನ್ನ ಪರಮಾಣು ಯೋಜನೆ ಮತ್ತು ಹೊರ್ಮುಜ್ ಮೇಲಿನ ಸಾರ್ವಭೌಮತ್ವದ ವಿಷಯದಲ್ಲಿ ಹಿಂದೆ ಸರಿಯುತ್ತಿಲ್ಲ. ಈ ಹಿಂದೆ ಪಾಕಿಸ್ತಾನದಲ್ಲಿ ನಡೆದ ಮೊದಲ ಸುತ್ತಿನ ಶಾಂತಿ ಮಾತುಕತೆಯಲ್ಲೂ ಈ ವಿಷಯದ ಬಗ್ಗೆ ಉಭಯ ದೇಶಗಳ ನಡುವೆ ತೀವ್ರ ಭಿನ್ನಾಭಿಪ್ರಾಯ ಉಂಟಾಗಿತ್ತು.
ಸಮಸ್ಯೆಗಳನ್ನು ಮಾತುಕತೆ ಮತ್ತು ರಾಜತಾಂತ್ರಿಕ ಸಂಧಾನದ ಮೂಲಕ ಪರಿಹರಿಸಿಕೊಳ್ಳುವುದೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಆದ್ಯತೆಯಾಗಿದೆ. ಪ್ರಸ್ತುತ ನಾವು ಅದೇ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಇರಾನ್ ಬಿಕ್ಕಟ್ಟು ರಾಜತಾಂತ್ರಿಕ ಮಾರ್ಗದ ಮೂಲಕವೇ ಬಗೆಹರಿಯಲಿದೆ ಎಂಬ ಆಶಾವಾದ ನಮಗಿದೆ ಎಂದು ಮಾರ್ಕೊ ರುಬಿಯೊ ಹೇಳಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಸಂಪೂರ್ಣವಾಗಿ ಯುದ್ಧ ನಿಲ್ಲಬೇಕು ಎಂದು ಭಾರತ ಮತ್ತು ಪ್ರಧಾನಿ ಮೋದಿ ನಿರಂತರವಾಗಿ ಜಾಗತಿಕ ನಾಯಕರಿಗೆ ಕರೆ ನೀಡುತ್ತಾ ಬಂದಿದ್ದಾರೆ. ಪ್ರಧಾನಿ ಮೋದಿಯವರು ಇರಾನ್ ಹಾಗೂ ಇಸ್ರೇಲ್ ಎರಡೂ ದೇಶಗಳ ಉನ್ನತ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಾತುಕತೆಯೇ ಏಕೈಕ ಪರಿಹಾರ ಎಂದು ಒತ್ತಿಹೇಳುತ್ತಿದ್ದಾರೆ.
ಆದರೆ, ಇತ್ತ ದೆಹಲಿಯಲ್ಲಿ ರುಬಿಯೊ ನೀಡಿರುವ ಕಟ್ಟುನಿಟ್ಟಿನ ಹೇಳಿಕೆ ಮತ್ತು ಅತ್ತ ಟೆಹ್ರಾನ್‌ನಲ್ಲಿ ಪಾಕ್ ಸೇನಾ ಮುಖ್ಯಸ್ಥರ ಎದುರೇ ಅಮೆರಿಕಕ್ಕೆ ಇರಾನ್ ನೀಡಿರುವ ಭೀಕರ ಯುದ್ಧದ ವಾರ್ನಿಂಗ್ ಗಮನಿಸಿದರೆ, ಈ ಶಾಂತಿ ಒಪ್ಪಂದವು ಅಷ್ಟು ಸುಲಭವಾಗಿ ಕೈಗೂಡುವಂತೆ ಕಾಣುತ್ತಿಲ್ಲ. ಜಗತ್ತಿನ ಕಣ್ಣು ಈಗ ಭಾನುವಾರ ನಡೆಯಲಿರುವ ಭಾರತ-ಯುಎಸ್ ವಿದೇಶಾಂಗ ಸಚಿವರ ಸಭೆಯ ಮೇಲೆ ನೆಟ್ಟಿದೆ,(ಏಜೆನ್ಸೀಸ್).